Advertisement

Free Travel:ಉಚಿತ ಬಸ್‌ ಪ್ರಯಾಣ ಪ್ರಶ್ನಿಸಿದ್ದ ಕಾನೂನು ವಿದ್ಯಾರ್ಥಿಗಳಿಗೆ ಹೈಕೋರ್ಟ್ ತರಾಟೆ

10:36 AM Sep 01, 2023 | Team Udayavani |

ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ಒದಗಿಸುವ “ಶಕ್ತಿ ಯೋಜನೆ’ಗೆ ಮೊದಲು ಸಂಚಾರ
ಸುಗಮವಾಗಿತ್ತಾ? ಯೋಜನೆಯಿಂದಾಗಿಯೇ ಬಸ್‌ಗಳಲ್ಲಿ ದಟ್ಟಣೆ ಉಂಟಾಗಿದೆಯೇ? ಹೀಗೆಂದು ಶಕ್ತಿ ಯೋಜನೆಯಿಂದ ಆರ್ಥಿಕ ಸಂಕಷ್ಟದ ಜತೆಗೆ ದಿನನಿತ್ಯ ಆವಾಂತರಗಳು ಸೃಷ್ಟಿಯಾಗುತ್ತಿವೆ ಎಂದು ಆಕ್ಷೇಪಿಸಿದ್ದ ಅರ್ಜಿದಾರರಿಗೆ ಹೈಕೋರ್ಟ್‌ ಪ್ರಶ್ನಿಸಿತು.

Advertisement

ಈ ವಿಚಾರವಾಗಿ ಬೆಂಗಳೂರಿನ ವಿವಿಧ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಾದ ಅಶ್ವಿ‌ನ್‌ ಶಂಕರ್‌ ಭಟ್‌ ನೇಹಾ ವೆಂಕಟೇಶ್‌ ಹಾಗೂ ಯಾಶಿಕಾ ಸರವಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಹಾಗೂ ನ್ಯಾ. ಎಂ.ಜಿ.ಎಸ್‌. ಕಮಾಲ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಆಗ, ಸರಿಯಾಗಿ ಅಧ್ಯಯನ ನಡೆಸದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. ಈ ಯೋಜನೆಗೆ ಮೊದಲು ಸಂಚಾರ ಸುಗಮವಾಗಿತ್ತಾ? ಯೋಜನೆಯಿಂದಾಗಿಯೇ ಬಸ್‌ಗಳಲ್ಲಿ ದಟ್ಟಣೆ ಉಂಟಾಗಿದೆಯೇ? ಯಾವ ರೂಟ್‌ (ಮಾರ್ಗ)ಗಳಲ್ಲಿ ಪ್ರಯಾಣಿಕರ ದಟ್ಟಣೆ ಇದೆ? ಸಾರ್ವಜನಿಕ ಬಸ್‌ಗಳಲ್ಲಿ ಇಷ್ಟೇ ಜನರಿರಬೇಕೆಂಬ ನಿಯಮವಿದೆಯೇ? ಅರ್ಜಿ ಸಲ್ಲಿಸುವ ಮೊದಲು ಸಾರಿಗೆ ನಿಯಮಗಳನ್ನು ಅಧ್ಯಯನ ನಡೆಸಿಲ್ಲವೇಕೆ?, ದುರ್ಬಲ ವರ್ಗಗಳಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿದೆಯಲ್ಲವೇ? ಯೋಜನೆಯನ್ನು ಪ್ರಶ್ನಿಸಿದ್ದೀರಾ ಆದರೆ, ದಟ್ಟಣೆಗೆ ಪರಿಹಾರ ಕೋರಿದ್ದೀರಾ? ಮುಂಬೈ ಲೋಕಲ್‌ ರೈಲುಗಳ ದಟ್ಟಣೆಯ ಅರಿವಿದೆಯೇ ಎಂದು ನ್ಯಾಯಪೀಠ ಅರ್ಜಿದಾರರನ್ನು ಪ್ರಶ್ನಿಸಿತು.

ಕೊನೆಗೆ ಸೂಕ್ತ ಅಧ್ಯಯನ ಮತ್ತು ಸಿದ್ಧತೆಯೊಂದಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿದ ನ್ಯಾಯಪೀಠ, ಅರ್ಜಿಯನ್ನು ಹಿಂಪಡೆಯಲು ಆರ್ಜಿದಾರರಿಗೆ ಅನುಮತಿ ನೀಡಿತು.

ಮನವಿಯಲ್ಲಿ ಏನಿತ್ತು?
ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್‌ ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಬಸ್‌ಗಳಲ್ಲಿ ಸೀಟು ಪಡೆದುಕೊಳ್ಳಲು ಗಲಾಟೆ, ಹೊಡೆ ದಾಟ ಸಂಭವಿಸಿದ ಘಟನೆಗಳು ನಡೆದಿವೆ. ಹಿರಿಯ ನಾಗರಿಕರು, ಮಕ್ಕಳು ಬಸ್‌ಗಳಲ್ಲಿ ಹತ್ತಲು ಆಗುತ್ತಿಲ್ಲ. ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲಾ-ಕಾಲೇಜು ತಲುಪಲು ಆಗುತ್ತಿಲ್ಲ. ಇದರಿಂದಾಗಿ ಬಸ್‌ ಹಾಗೂ ಬಸ್‌ ನಿಲ್ದಾಣಗಳಲ್ಲಿ ಅನುಚಿತ ವರ್ತನೆ, ಅಹಿತಕರ ಘಟನೆಗಳು ನಡೆಯುತ್ತಿವೆ. ಬಸ್‌ ನಿಲ್ದಾಣ ಮತ್ತು ಸರ್ಕಾರಿ ಬಸ್‌ಗಳು ಯುದ್ಧ ಭೂಮಿ, ಮೀನು ಮಾರುಕಟ್ಟೆ ಆಗಿವೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು. ಯೋಜನೆ ಜಾರಿಯಿಂದ ವಾರಕ್ಕೆ 100 ಅಂದಾಜು ಕೋಟಿ ರೂ. ತೆರಿಗೆದಾರರ ಹಣ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಈ ಯೋಜನೆಗೆ ವಾರ್ಷಿಕ 3,200ರಿಂದ 3,400 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next