ಬೆಂಗಳೂರು: ಓಲಾ ಕ್ಯಾಬ್ ಚಾಲಕ ನೀಡಿದ್ದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಯುವತಿ ಯೊಬ್ಬರು ಆರು ವರ್ಷಗಳ ಹಿಂದೆ ದಾಖಲಿಸಿದ್ದ ದೂರು ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿದ್ದಕ್ಕೆ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೇ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಅಂತಿಮ ತೀರ್ಪನ್ನು ಕಾಯ್ದಿರಿಸಿದ ಹೈಕೋರ್ಟ್, ಮುಂದಿನ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ಸಹ ನೀಡಿದೆ.
ಪ್ರಕರಣ ಸಂಬಂಧ ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿಷೇಧ, ತಡೆ ಮತ್ತು ಪರಿಹಾರ) ಕಾಯ್ದೆ- 2013′ ಅಡಿಯಲ್ಲಿ ಓಲಾ ಕ್ಯಾಬ್ ಮಾತೃ ಸಂಸ್ಥೆ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಆಂತರಿಕ ದೂರು ಸಮಿತಿಗೆ 2018ರಲ್ಲಿ ನೀಡಿದ್ದ ದೂರು ಕುರಿತು ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿ 22 ವರ್ಷದ ಯುವತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಪ್ರಕರಣ ಆರಂಭವಾದಾಗಿನಿಂದ ಇಲ್ಲಿಯವರೆಗೆ ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂಬ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಸಾರಿಗೆ ಇಲಾಖೆಗೆ ನ್ಯಾಯಾಲಯವು ಕಳೆದ ವಿಚಾರಣೆ ವೇಳೆ ಆದೇಶಿಸಿತ್ತು. ಸಾರಿಗೆ ಇಲಾಖೆ ಪರ ಸರ್ಕಾರಿ ವಕೀಲರು ಸಲ್ಲಿಸಿದ ಪ್ರಮಾಣಪತ್ರ ಅಸಮರ್ಪಕ ವಾಗಿತ್ತು. ಇದಕ್ಕೆ ಸಿಟ್ಟಾದ ನ್ಯಾಯಪೀಠ, ಸರ್ಕಾರ ಸಲ್ಲಿಸಿರುವುದು ಯಾವ ಪ್ರಮಾಣ ಪತ್ರ? ಯುವತಿಯ ಮೇಲೆ ಓಲಾ ಚಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯನ್ನು ನಿಯಮದ ಪ್ರಕಾರ ಓಲಾ ಸಂಸ್ಥೆಯು ಸರ್ಕಾರದ ಗಮನಕ್ಕೆ ತಂದಿಲ್ಲ ಎಂದು ಸರ್ಕಾರ ಹೇಳಿ ಸುಮ್ಮನೆ ಕುಳಿತಿದೆ.
ಸರ್ಕಾರ ಏನು ಮಾಡುತ್ತಿದೆ ಎನ್ನುವ ಬಗ್ಗೆ ಹೇಳಿಲ್ಲ. ಈ ಪ್ರಮಾಣ ಪತ್ರ ಕಣ್ಣೊರೆಸುವ ತಂತ್ರದ ಭಾಗವಾಗಿದೆ ಎಂದು ಚಾಟಿ ಬೀಸಿತು. ಅಲ್ಲದೆ, ಪ್ರಕರಣ ಕುರಿತು ಅರ್ಜಿದಾರರು ಓಲಾ ಕಂಪನಿಯ ಆಂತರಿಕ ದೂರು ಸಮಿತಿಗೆ ನೀಡಿರುವ ದೂರು ಏನಾಗಿದೆ? ಕಂಪನಿ ಏನು ಕ್ರಮ ಕೈಗೊಂಡಿದೆ. ಪ್ರಕರಣ ಕುರಿತು ಓಲಾಕ್ಕೆ ನೋಟಿಸ್ ಜಾರಿ ಮಾಡುವುದಕ್ಕೆ ಮುನ್ನಾ ಏನಾಗಿದೆ? ಎಂಬ ಮಾಹಿತಿಯನ್ನು ಸರ್ಕಾರ ನೀಡಿಲ್ಲ. ಅಗ್ರಿಗೇಟರ್ ನಿಯಮಗಳ ಪಾಲನೆ ಜವಾಬ್ದಾರಿ ಹೊತ್ತಿರುವ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು, ಪ್ರಕರಣ ಕುರಿತು ಸಮರ್ಪಕ ಕ್ರಮ ಜರುಗಿಸದ ಓಲಾ ಕಂಪನಿಯ ಮೇಲೆ ಏನು ಕ್ರಮ ಜರುಗಿಸಿದ್ದಾರೆ? ಆಂತರಿಕವಾಗಿ ಯಾರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ? ಎಂಬುದು ನ್ಯಾಯಾಲಯಕ್ಕೆ ತಿಳಿಯಬೇಕಿದೆ.
ಆದರೆ, ಸರ್ಕಾರ ಮಾತ್ರ ತನ್ನ ಪ್ರಮಾಣ ಪತ್ರದಲ್ಲಿ ಏನು ಮಾಹಿತಿ ನೀಡಿಲ್ಲ. ಇದರಿಂದ ಅಧಿಕಾರಿಗಳು ಪ್ರಕರಣದಲ್ಲಿ ಯಾವುದೇ ಕ್ರಮಕೈಗೊಳ್ಳುವ ಆಸಕ್ತಿ ಹೊಂದಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಹೇಳಿತು.