Advertisement

Railway Project; ಅಂಕೋಲಾ – ಹುಬ್ಬಳ್ಳಿ ರೈಲ್ವೆ ಯೋಜನೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

05:56 PM Sep 02, 2023 | Team Udayavani |

ಕಾರವಾರ: ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಯೋಜನೆಯ ವಿರುದ್ಧ ಸಲ್ಲಿಕೆಯಾಗಿದ್ದ ವೃಕ್ಷ ಫೌಂಡೇಶನ್‌ನ ಪಿಐಎಲ್ ಅನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ ಎಂದು ರೈಲ್ವೆ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ್ ಗಾಂವ್ಕರ್ ಹಾಗೂ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್ ಹೇಳಿದರು.

Advertisement

ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಶಂಕುಸ್ಥಾಪನೆ ಮಾಡಲಾದ 164.44 ಕಿ.ಮೀ. ಉದ್ದದ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಈಗ ಹಸಿರು ನಿಶಾನೆ ಸಿಕ್ಕಿದೆ ಎಂದರು.

ಹುಬ್ಬಳ್ಳಿಯಿಂದ ಕಲಘಟಕಿಯವರೆಗೆ 34 ಕಿ.ಮೀ‌ ರೈಲ್ವೆ ಮಾರ್ಗ ಈಗಾಗಲೇ ನಿರ್ಮಿಸಲಾಗಿದೆ. ತದನಂತರ ಪರಿಸರವಾದಿಗಳು ಒಂದಲ್ಲಾ ಒಂದು ರೀತಿಯಲ್ಲಿ ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದರು. ಮೊದಲಿಗೆ ನಮ್ಮ ಜಿಲ್ಲೆಯ ಪಾಂಡುರಂಗ ಹೆಗಡೆ ಈ ಯೋಜನೆ ವಿರುದ್ಧ ಪರಿಸರ ಕಾರಣವೊಡ್ಡಿ 2001ರಲ್ಲಿ ಪಿಐಎಲ್ ಸಲ್ಲಿಸಿದ್ದರು. ಇದರಿಂದಾಗಿ 19 ವರ್ಷಗಳ ಕಾಲ ಯೋಜನೆ ನೆನೆಗುದಿಗೆ ಬಿದ್ದಿತ್ತು ಎಂದರು.

ತದನಂತರ 2020 ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ರಾಜ್ಯ ವನ್ಯಜೀವಿ ಮಂಡಳಿಯಿಂದ ಯೋಜನೆಗೆ ಕ್ಲಿಯರೆನ್ಸ್ ಸಿಗುತ್ತಿದ್ದಂತೆ, ಬೆಂಗಳೂರಿನ ವೃಕ್ಷಫೌಂಡೇಶನ್ ಸರ್ಕಾರದ  ಆದೇಶದ ವಿರುದ್ಧ ಕೋರ್ಟಗೆ ಹೋಗಿ, ಕುಂಟು ನೆಪಗಳನ್ನು ಒಡ್ಡಿ ತಡೆಯಾಜ್ಞೆ ತಂದಿದ್ದರಿಂದ ಯೋಜನೆ ಮತ್ತಷ್ಟು ವಿಳಂಬವಾಗುವಂತಾಯಿತು ಎಂದು ಆರೋಪಿಸಿದರು.

2021ರಲ್ಲಿ ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯ ಮೂಲಕ ತಡೆಯಾಜ್ಞೆ ತೆರವುಗೊಳಿಸಲು ವಕೀಲರಾದ ಆರ್.ಜಿ.ಕೊಲ್ಲೆ, ಅಕ್ಷಯ್ ಕೊಲ್ಲೆಯವರು ವಾದ ಮಂಡಿಸಿದಾಗ ಹೈಕೋರ್ಟ್ ವನ್ಯಜೀವಿ ಮಂಡಳಿಯಿಂದ ವರದಿ ನೀಡಲು ಸೂಚಿಸಿತ್ತು. ಅದರಂತೆ ವನ್ಯಜೀವಿ ಮಂಡಳಿ ಅಧ್ಯಯನ ನಡೆಸಿ, ರೈಲ್ವೆ ಯೋಜನೆಯ ಪರವಾಗಿ ವರದಿ ನೀಡಿದ್ದು, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಉತ್ತಮ ಆದೇಶ ನೀಡುವ ಮೂಲಕ ಇಷ್ಟು ವರ್ಷಗಳ ಕಾನೂನು ಪ್ರಕ್ರಿಯೆಗೆ ಇತಿಶ್ರೀ ಹಾಡಿದ್ದಾರೆ. ಅಲ್ಲದೇ ರೈಲ್ವೆ ಮಂಡಳಿ ಕೂಡ ವನ್ಯಜೀವಿ ಮಂಡಳಿಯ ನಿರ್ದೇಶನದಂತೆ ಯೋಜನೆ ಮಾರ್ಪಡಿಸಿ ನೂತನ ಮಾರ್ಗ ನಿರ್ಮಿಸುವುದಾಗಿ ಅಫಿಡವಿಟ್ ನೀಡಿರುವುದರಿಂದ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗೆ ಇದ್ದ ಎಲ್ಲಾ ತೊಡಕು ನಿವಾರಣೆಯಾದಂತಾಗಿದೆ ಎಂದು ಖುಷಿ ವ್ಯಕ್ತಪಡಿಸಿದರು.

Advertisement

ರೈಲ್ವೆ ಸೇವಾ ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್ ಮಾತನಾಡಿ, ಎಲ್ಲವೂ ಅಂದು ಕೊಂಡಂತಾದರೆ ಈ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯ ಕೃಷಿ, ಕೈಗಾರಿಕೆ, ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯಾಗಲಿದೆ ಎಂದರು. ಅಲ್ಲದೇ ಪ್ರವಾಸೋದ್ಯಮ ಬೆಳವಣಿಗೆ ಕಾಣಲಿದೆ. ಅಲಗೇರಿ ವಿಮಾನ ನಿಲ್ದಾಣ ಆಗುತ್ತಿದ್ದಂತೆ ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗದ ಮಹತ್ವ ಹೆಚ್ಚಲಿದೆ. ಉತ್ತರ ಕರ್ನಾಟಕದ ಸಂಪರ್ಕ ಹೆಚ್ಚಿ ರಪ್ತು ಹೆಚ್ಚಾಗಲಿದೆ. ಬಂದರುಗಳ ಚಟುವಟಿಕೆ ವಿಸ್ತಾರವಾಗಲಿದೆ ಎಂದರು. ರೈಲ್ವೆ ಸೇವಾ ಸಮಿತಿ ಜಿಲ್ಲೆಯ ಎಲ್ಲಾ ರೈಲು ಎಲ್ಲಾ ಸ್ಟೇಶನ್ ಗಳಲ್ಲಿ ನಿಲ್ಲುವಂತೆ ಕ್ರಮಕ್ಕೆ ಕೊಂಕಣ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿದೆ. ಪ್ರವಾಸಿಗರ ತಂಗುದಾಣ ಕೊಠಡಿ ನಿರ್ಮಿಸುವಂತೆ, ಪ್ರಯಾಣಿಕರಿಗೆ ಸ್ಟೇಶನ್ ಗಳಲ್ಲಿ ಸೌಕರ್ಯ ಹೆಚ್ಚಿಸುವಂತೆ ಮನವಿ ಮಾಡಲಾಗಿದೆ ಎಂದರು.

ರೈಲ್ವೆ ಸೇವಾ ಸಮಿತಿಯ ಪ್ರಮುಖರಾದ ವೆಂಟು ಮಾಸ್ತರ ಶೀಳ್ಯ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next