Advertisement

ಹೈಕೋರ್ಟ್‌ ಮೆಟ್ಟಿಲೇರಿ ಅನುದಾನ ತರಿಸಿದ‌ ಗ್ರಾಮಸ್ಥರು

01:00 AM Mar 20, 2019 | Harsha Rao |

ಕಡಬ: ಮೂಲಸೌಕರ್ಯಕ್ಕಾಗಿ ಜನಪ್ರತಿನಿಧಿಗಳಿಗೆ ದುಂಬಾಲು ಬಿದ್ದು ಬೇಸತ್ತಿದ್ದ ಕಡಬ ತಾಲೂಕಿನ ಕೊಂಬಾರು ಗ್ರಾಮಸ್ಥರು ಉಚ್ಚ ನ್ಯಾಯಾಲಯದ  ಮೆಟ್ಟಿಲೇರಿ ಸತತ 4 ವರ್ಷ ಕಾನೂನು ಹೋರಾಟ ನಡೆಸಿ ಕೊನೆಗೂ ಯಶ ಸಾಧಿಸಿದ್ದಾರೆ. ಕೋರ್ಟ್‌ ಸೂಚನೆಯಂತೆ ಸರಕಾರದಿಂದ ಅನುದಾನ ತರಿಸಿ ವಿಶೇಷ ಸಾಧನೆ ಮಾಡಿದ್ದಾರೆ.

Advertisement

ಕೊಂಬಾರು ಗ್ರಾಮದ ಮೆಟ್ಟುತ್ತಾರು ಸೇತುವೆ ನಿರ್ಮಾಣ ಹಾಗೂ ಕೂಡು ರಸ್ತೆ ಕಾಮಗಾರಿಗೆ 40 ಲಕ್ಷ ರೂ. ಅನುದಾನ ಮಂಜೂರು ಮಾಡಿರುವುದಾಗಿ ಸರಕಾರವು ಮಾ. 14ರಂದು ಉಚ್ಚ ನ್ಯಾಯಾಲಯಕ್ಕೆ ಉತ್ತರ ನೀಡಿದೆ.
ಕೋರ್ಟ್‌ ಮೆಟ್ಟಿಲೇರಿದ ಗ್ರಾಮಸ್ಥ ಕೊಂಬಾರು ಗ್ರಾಮದ ಭುವನೇಶ್ವರ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ| ಎಸ್‌. ಸುನಿಲ್‌ ದತ್‌ ಯಾದವ್‌ ಅವರಿದ್ದ  ಏಕ ಸದಸ್ಯ ಪೀಠ ವಿಲೇವಾರಿ ಮಾಡಿ ಕಾಮಗಾರಿ ಕೂಡಲೇ ಪ್ರಾರಂಭಿಸುವಂತೆ ಆದೇಶ ನೀಡಿದೆ.

ಕೊಂಬಾರು ಗ್ರಾಮದ ಮೆಟ್ಟುತ್ತಾರಿನಲ್ಲಿ ಸೇತುವೆ ಹಾಗೂ ಮಣಿಭಾಂಡ, ಮೆಟ್ಟುತ್ತಾರು, ಪೆರಂದೋಡಿ ಅಮೂcರು, ತೇರೆಬೀದಿ ಸಂಪರ್ಕ ರಸ್ತೆಯ ಬಗ್ಗೆ  ಸ್ಥಳೀಯ ಅಮೂcರು ನಿವಾಸಿ ಭುವನೇಶ್ವರ ಗೌಡ ಅವರು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿ, ಈ ಪ್ರದೇಶದ ಜನ ಸರ್ವ ಋತು ಸಂಪರ್ಕ ರಸ್ತೆ ಇಲ್ಲದ ಕಾರಣ ಹಲವಾರು ದಶಕಗಳಿಂದ ಅನುಭವಿಸುತ್ತಿರುವ ಸಮಸ್ಯೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದರು.ಇವುಗಳಿಗಾಗಿ ಪ್ರಧಾನಮಂತ್ರಿಗಳಿಂದ ಹಿಡಿದು ಎಲ್ಲ ಜನಪ್ರತಿನಿಧಿಗಳ ಬಳಿ ಹಲವು ದಶಕಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಅರ್ಜಿಯಲ್ಲಿ  ದೂರಿಕೊಂಡಿದ್ದರು.

ಸುಪ್ರೀಂ ಕೋರ್ಟ್‌ ವರೆಗೂ ಹೋಗಿತ್ತು
2015ರಲ್ಲಿ ಒಮ್ಮೆ ರಿಟ್‌ ಅರ್ಜಿ ಪುರಸ್ಕರಿಸಿದ ಹೈಕೋರ್ಟ್‌ ಒಂದು ತಿಂಗಳ ಒಳಗೆ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಸರಕಾರಕ್ಕೆ ಆದೇಶಿಸಿದ್ದರೂ ಜಿ.ಪಂ. ಆಗಲಿ ಸರಕಾರವಾಗಲಿ ಕ್ರಮ ಕೈಗೊಂಡಿರಲಿಲ್ಲ.  ಈ ಕುರಿತು ಅರ್ಜಿದಾರರು ಮತ್ತೆ ಕೋರ್ಟ್‌ನ ಗಮನಸೆಳೆದಾಗ ಸರಕಾರ ಅನುದಾನದ ಕೊರತೆಯ ಕಾರಣ ನೀಡಿತ್ತು. ಈ ನಡುವೆ ಅರ್ಜಿದಾರರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿ ನ್ಯಾಯ ಕೋರಿದ್ದರು.

ಅರ್ಜಿಯನ್ನು ಹೈಕೋರ್ಟ್‌ನಲ್ಲಿಯೇ ಬಗೆಹರಿಸಿ
ಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದ ಹಿನ್ನೆಲೆಯಲ್ಲಿ 2017ರಲ್ಲಿ ಮತ್ತೂಂದು ರಿಟ್‌ ಅರ್ಜಿ ಸಲ್ಲಿಸಿ ಹೈಕೋರ್ಟಿನ ಕದ ತಟ್ಟಿದರು.

Advertisement

ಮಾ. 7ರಂದು ರಿಟ್‌ ಅರ್ಜಿ ವಿಚಾರಣೆ ಕೈಗೊಂಡ ಹೈಕೋರ್ಟ್‌ ಮಾ. 14ರಂದು ಸರಕಾರದ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡಬೇಕೆಂದು ಆದೇಶ ನೀಡಿತ್ತು. ಅದರಂತೆ ಮಾ. 14ರಂದು ಸರಕಾರಿ ವಕೀಲರ ಮೂಲಕ ಹಾಜರಾದ ಸರಕಾರಿ ಅಧಿಕಾರಿ ವೃಂದ ಕಾಮಗಾರಿಯನ್ನು ಚುನಾವಣೆ ನೀತಿಸಂಹಿತೆ ಮುಕ್ತಾಯದ ಬಳಿಕ ಅನುಷ್ಠಾನಕ್ಕೆ ತರಲಾಗುವುದು ಎಂದು ನ್ಯಾಯ ಪೀಠಕ್ಕೆ ತಿಳಿಸಿದೆ. ರಿಟ್‌ ಅರ್ಜಿದಾರರ ಪರ ವಕೀಲರಾದ ಪ್ರವೀಣ್‌ ಕುಮಾರ್‌ ಕೆ.ಎನ್‌. ಅವರು ವಾದ ಮಂಡಿಸಿದ್ದರು.

10 ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಮನ್ನಣೆ ಲಭಿಸದಿದ್ದಾಗ ಹೈಕೋರ್ಟ್‌ ಮೆಟ್ಟಿಲೇರಿದೆವು. ಕೊನೆಗೂ ನಮಗೆ ನ್ಯಾಯ ಲಭಿಸಿರುವುದು ಬಹಳ ಸಂತೋಷದ ವಿಚಾರ ಎಂದು ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಹೊಳ್ಳಾರು ಹರ್ಷ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳು ಸ್ಪಂದಿಸದಿದ್ದಾಗ ಅನಿವಾರ್ಯವಾಗಿ ಕೋರ್ಟ್‌ ಮೆಟ್ಟಿಲೇರಬೇಕಾಯಿತು. ನಾಲ್ಕು ವರ್ಷಗಳ ಹೋರಾಟದ ಬಳಿಕ ಜಯ ಸಿಕ್ಕಿದೆ.  ಕಾನೂನು ಹೋರಾಟದಲ್ಲಿ ಮೂಲತಃ ಕೊಂಬಾರು ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿರುವ ನ್ಯಾಯವಾದಿ ಪ್ರವೀಣ್‌ ಕುಮಾರ್‌ ಕೆ.ಎನ್‌. ಅವರು ಯಾವುದೇ ಶುಲ್ಕ ಪಡೆಯದೇ ಕಾನೂನು ನೆರವು ನೀಡಿದ್ದಾರೆ.
-ಭುವನೇಶ್ವರ ಗೌಡ, ಕೋರ್ಟ್‌ ಮೆಟ್ಟಿಲೇರಿದ ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next