ಬೆಂಗಳೂರು: ಯಲಹಂಕದ ಸ್ಮಶಾನಕ್ಕೆ ಭೂಮಿ ಕಳೆದುಕೊಂಡಿರುವ ವ್ಯಕ್ತಿಗೆ ಪರ್ಯಾಯ ಭೂಮಿ ನೀಡುವ ಕುರಿತು ಯಾವುದೇ ಕ್ರಮವಹಿಸದ ರಾಜ್ಯಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಎಸ್.ವಿ.ಯೋಗೇಶ್ವರ್ ದಾಖಲಿಸಿದ್ದ ನ್ಯಾಯಾಂಗನಿಂದನೆ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ನೇತೃತ್ವದ ವಿಭಾಗೀಯಪೀಠ, ಮುಂದಿನ ಎರಡು ವಾರಗಳಲ್ಲಿ ಅರ್ಜಿದಾರರಿಗೆ ಪರ್ಯಾಯ ಭೂಮಿ ನೀಡುವ ಆದೇಶ ಪಾಲಿಸಬೇಕು. ಇಲ್ಲದಿದ್ದರೆ ಮುಂದಿನ ವಿಚಾರಣೆ ವೇಳೆ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಖುದ್ದು ಹಾಜರಾಗುವಂತೆ ಎಚ್ಚರಿಕೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರಿಗೆ ಭೂಮಿ ನೀಡುವ ತೀರ್ಮಾನ ಕುರಿತ ಕಡತ ಸಚಿವ ಸಂಪುಟದಲ್ಲಿ ಇನ್ನೂ ಚರ್ಚೆ ಆಗಿಲ್ಲ ಎಂಬ ಸರ್ಕಾರದ ಪರ ವಕೀಲರ ಮಾಹಿತಿ ಆಲಿಸಿ ಕೆಂಡಾಮಂಡಲವಾದ ನ್ಯಾಯಪೀಠ, ಅಧಿಕಾರಿಗಳು ಈ ಬಗ್ಗೆ ಯಾಕೆ ಗಮನಹರಿಸಿಲ್ಲ. ನ್ಯಾಯಾಲಯದ ಆದೇಶಗಳನ್ನು ಅತ್ಯಂತ ಹಗುರವಾಗಿ ಪರಿಗಣಿಸುವ ಈ ಧೋರಣೆ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತು.
ಜತೆಗೆ, ಮುಂದಿನ ಎರಡು ವಾರಗಳಲ್ಲಿ ಪರ್ಯಾಯ ಭೂಮಿ ನೀಡುವ ಆದೇಶ ಪಾಲನೆಯಾಗಬೇಕು. ಒಂದು ವೇಳೆ ವಿಫಲವಾದರೆ ಸರ್ಕಾರದ ಮುಖ್ಯಕಾರ್ಯದರ್ಶಿ ವಿಚಾರಣೆಗೆ ಹಾಜರಾಗಿ ಸ್ಪಷ್ಟೀಕರಣ ನೀಡಲಿ ಎಂದು ನಿರ್ದೇಶಿಸಿದ ನ್ಯಾಯಪೀಠ, ಸೆ.19ಕ್ಕೆ ವಿಚಾರಣೆ ಮುಂದೂಡಿತು.
ಯಶವಂತಪುರ ನಿವಾಸಿ ಎಸ್.ವಿ.ಯೋಗೀಶ್ವರ್ ಅವರಿಗೆ ಸೇರಿದ ಯಲಹಂಕ ಸಮೀಪದ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕೆಂದು ಬಿಬಿಎಂಪಿ ಸ್ವಾಧೀನಪಡಿಸಿಕೊಂಡಿತ್ತು. ಈ ಕ್ರಮ ಪ್ರಶ್ನಿಸಿ ಯೋಗೀಶ್ವರ್ ಹೈಕೋರ್ಟ್ ಮೊರೆಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, 8 ವಾರಗಳಲ್ಲಿ ಅರ್ಜಿದಾರನಿಗೆ ಪರ್ಯಾಯ ಭೂಮಿ ನೀಡುವಂತೆ 2017ರ ಜುಲೈನಲ್ಲಿ ಆದೇಶಿಸಿತ್ತು. ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂದು ಬಿಬಿಎಂಪಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದಾರೆ.