Advertisement

ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಿಕೊಂಡ ಹೈಕೋರ್ಟ್‌

12:01 PM Jun 09, 2018 | Team Udayavani |

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿ ರಾಜ್ಯದ ಹಲವು ಕಾರಾಗೃಹಗಳಲ್ಲಿ ಸಾಮರ್ಥಯಕ್ಕಿಂತ ಹೆಚ್ಚು ಪಟ್ಟು ಕೈದಿಗಳಿರುವುದರಿಂದ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರ ಹಲವು ಬಾರಿ ಚರ್ಚೆಗೆ ಗ್ರಾಸವಾಗಿದೆ. ಇದೀಗ ಈ ವಿಚಾರದ ಬಗ್ಗೆ ಹೈಕೋರ್ಟ್‌ ಕೂಡ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.

Advertisement

ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ರಾಜ್ಯದ ಕಾರಾಗೃಹಗಳಲ್ಲಿ ಸಾಮರ್ಥಯಕ್ಕಿಂತ ಹೆಚ್ಚುಪಟ್ಟು ಕೈದಿಗಳು ಇರುವುದರಿಂದ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಸೇರಿ ಇನ್ನಿತರೆ  ಸಮಸ್ಯೆಗಳನ್ನು ತಪ್ಪಿಸಲು, ಜತೆಗೆ ಖಾಲಿ ಇರುವ ಜೈಲು ಸಿಬ್ಬಂದಿ ನೇಮಕ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ ಪಿಐಎಲ್‌ನಲ್ಲಿ ಕೋರಿದೆ.

ಅರ್ಜಿಯಲ್ಲಿ ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ, ಗೃಹ ಇಲಾಖೆ, ಕಾರಾಗೃಹ ಇಲಾಖೆ ಡಿಜಿಪಿ, ನಗರ ಪೊಲೀಸ್‌ ಆಯುಕ್ತರು, ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಹೈಕೋರ್ಟ್‌ ಕಾನೂನು ಸೇವಾ ಪ್ರಾಧಿಕಾರವನ್ನು ಪ್ರತಿವಾದಿಗಳನ್ನಾಗಿ ಪರಿಗಣಿಸಲಾಗಿದೆ. ಜ.12ಕ್ಕೆ ಅರ್ಜಿ ವಿಚಾರಣೆಗೆ ನಿಗದಿಯಾಗಿದೆ.
 
ದೇಶದ 1382 ಕಾರಾಗೃಹಗಳು ಅಮಾನವೀಯ ಸ್ಥಿತಿಯಲ್ಲಿರುವ ಕುರಿತ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ಗೆ ವಿಚಾರಣೆ ವೇಳೆ ಅಮಿಕಸ್‌ ಕ್ಯೂರಿ, ದೇಶದ ಹಲವು ಕಾರಾಗೃಹಗಳಲ್ಲಿ ನಿಗದಿ ಪ್ರಮಾಣಕ್ಕಿಂತ ಶೇ 100 ರಿಂದ 150 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಕೈದಿಗಳನ್ನು ಇಡಲಾಗಿತ್ತು.

ಸಕ್ಷಮ ಪ್ರಾಧಿಕಾರಿಗಳು ಈ ಸಮಸ್ಯೆ ಪರಿಹರಿಸಲು ಯತ್ನಿಸಿಲ್ಲ. ಜತೆಗೆ ಕಾರಾಗೃಹ ಸಿಬ್ಬಂದಿ ಕೊರತೆಯಿಂದಲೂ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಲ್ಲದೆ, ಮಹಿಳಾ ಕೈದಿಗಳು ಹಾಗೂ ಅವರ ಮಕ್ಕಳಿಗೆ ಕಲ್ಪಿಸಬೇಕಾದ ಸೌಕರ್ಯಗಳು, ಇನ್ನಿತರೆ ಜೈಲು ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೋರ್ಟ್‌ ಗಮನಕ್ಕೆ ತಂದಿದ್ದರು. 

ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂಕೋರ್ಟ್‌, ಜೈಲು ಸುಧಾರಣೆ, ನಿಗದಿಗಿಂತ ಹೆಚ್ಚು  ಪ್ರಮಾಣದ ಕೈದಿಗಳಿರುವ ಕುರಿತು ರಾಜ್ಯಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅಗತ್ಯ ಕ್ರಮಗಳು ಕೈಗೊಳ್ಳಲು ಮುಂದಾಗುವಂಂತೆ ಮೇ 8ರ ಆದೇಶದಲ್ಲಿ ತಿಳಿಸಿತ್ತು. ಈ ಆದೇಶ ಹಿನ್ನೆಲೆಯಲ್ಲಿ  ಸುಪ್ರೀಂಕೋರ್ಟ್‌ ಎಲ್ಲ ಹೈಕೋರ್ಟ್‌ಗಳಿಗೆ ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಆದೇಶಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next