ಬೆಂಗಳೂರು: ಮೂರು ಮಹಾನಗರ ಪಾಲಿಕೆಗಳು ಸೇರಿ ಈಗಾಗಲೇ ಚುನಾವಣೆ ನಡೆದಿರುವ ರಾಜ್ಯದ 105ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ 2018ರ ಸೆ.3ರಂದು ಹೊರಡಿಸಿದ ಅಧಿಸೂಚನೆ ವಿಚಾರವಾಗಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೈಕೋರ್ಟ್ ಶುಕ್ರವಾರ ಹೇಳಿದೆ.
ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಗಳು ನ್ಯಾ.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ
ನ್ಯಾಯಪೀಠದ ಎದುರು ಶುಕ್ರವಾರ ವಿಚಾರಣೆಗೆ ಬಂದಿತ್ತು. ಆದರೆ, ಇದೇ ಅಧಿಸೂಚನೆಗೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್‌ನ ಎರಡು “ಸಹವರ್ತಿ ನ್ಯಾಯಪೀಠಗಳು’ (ಕೋ-ಆರ್ಡಿ ನೇಟ್ ಬೆಂಚ್) ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿವೆ. ಹಾಗಾಗಿ,ತಾವೂ ಸಹ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ಹೇಳಿ ನ್ಯಾ. ಯಾದವ್ ಅರ್ಜಿಗಳನ್ನು ವಿಲೇವಾರಿ ಮಾಡಿದರು.
ಅಲ್ಲದೇ ರಿಟ್ ಅರ್ಜಿಗಳಲ್ಲಿ ಕೇಳಲಾಗಿದ್ದ ಕೋರಿಕೆಗಳನ್ನು ಮೇಲ್ಮನವಿಯಲ್ಲಿ ಪ್ರಸ್ತಾಪಿಸಲು ಅನುಮತಿ ನೀಡಬೇಕೆಂದು ಅರ್ಜಿದಾರರು ಕೇಳಿದ್ದಕ್ಕೆ ಅರ್ಜಿದಾರರಿಗೆ “ಆಯ್ಕೆಗಳು ಮುಕ್ತವಾ ಗಿವೆ’ ಎಂದಷ್ಟೇ ನ್ಯಾಯಪೀಠ ಹೇಳಿತು. ಸೆ.3 ರಂದು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದು ಗೊಳಿಸುವಂತೆ ಕೆಲವು ಅರ್ಜಿಗಳಲ್ಲಿ ಕೋರಲಾಗಿ ದ್ದರೆ, ಸೆ.6ರ ಪರಿಷ್ಕೃತ ಅಧಿಸೂಚನೆಯನ್ನು ಸರ್ಕಾರ ವಾಪಸ್ ಪಡೆದಿರುವುದನ್ನು ಕೆಲವು ಅರ್ಜಿದಾರರು ಪ್ರಶ್ನಿಸಿದ್ದರು.
ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ 2018ರ ಸೆ.3ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಈ ಹಿಂದೆಯೇ ನ್ಯಾ. ವಿನೀತ್ ಕೊಠಾರಿ ಹಾಗೂ ನ್ಯಾ. ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠಗಳು ನಿರ್ವಹಿಸಿವೆ. ಮತ್ತೇ ಅದೇ ಸ್ವರೂಪದ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸುವುದು ಸಮಂಜಸವಲ್ಲ ಎಂದು ಹೇಳಿ ನ್ಯಾ. ಸುನಿಲ್ ದತ್ ಯಾದವ್ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಿದರು.
ರಾಜ್ಯದ ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಮಹಾನಗರ ಪಾಲಿಕೆಗಳು ಸೇರಿದಂತೆ 105 ನಗರ ಸ್ಥಳೀಯ ಸಂಸ್ಥೆಗಳಿಗೆ 2018ರ ಆ.31ರಂದು ಚುನಾವಣೆ ನಡೆದು, ಸೆ.3ರಂದು ಫಲಿತಾಂಶ ಹೊರಬಿದ್ದಿತ್ತು. ಅದೇ ದಿನ (ಸೆ.3)ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಮಧ್ಯೆ ಮೊದಲ ಅಧಿಸೂಚನೆಯಲ್ಲಿ ಕೆಲವೊಂದು ಬದಲಾವಣೆ ಗಳನ್ನು ಮಾಡಿ ಸೆ.6ರಂದು ಪರಿಷ್ಕೃತ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆ.6ರ ಪರಿಷ್ಕೃತ ಅಧಿಸೂಚನೆ ವಾಪಸ್ ಪಡೆದು, ಸೆ.3ರಂದು ಹೊರಡಿಸಿದ್ದ ಮೂಲ ಅಧಿಸೂಚನೆ ಪ್ರಕಾರವೇ ಮುಂದುವರಿಯುವುದಾಗಿ ಅ.9ರಂದು ರಾಜ್ಯ ಸರ್ಕಾರ ಹೇಳಿತ್ತು. ಪರಿಷ್ಕೃತ ಅಧಿಸೂಚನೆ ಪ್ರಶ್ನಿಸಿ ಮತ್ತೇ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಆ ಅರ್ಜಿಗಳನ್ನು ಏಕಸದಸ್ಯ ನ್ಯಾಯಪೀಠ ಇತ್ಯರ್ಥಗೊಳಿಸಿ ಆದೇಶಿಸಿದೆ.