ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಮನವಿ ಊಟ ನೀಡಲು ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ವಿಚಾರವಾಗಿ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಅರ್ಜಿ ಗಮನಿಸಿದ ನ್ಯಾಯಪೀಠ, ಮನೆ ಊಟ ನೀಡುವುದಕ್ಕೆ ವಿರೋಧಿಸಲು ನೀವು ಯಾರು ಎಂದು ಅರ್ಜಿದಾರನ್ನು ಪ್ರಶ್ನಿಸಿತು. ಅದಕ್ಕೆ ಅರ್ಜಿದಾರರ ಪರ ವಕೀಲರು, ಈ ವಿಚಾರವಾಗಿ ಅರ್ಜಿದಾರರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ, ಆ ಮನವಿಯನ್ನು ಪರಿಗಣಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಪ್ರಚಾರಕ್ಕಾಗಿ ಇಂತಹ ಅರ್ಜಿ ಹಾಕಿದ್ದೀರಾ? ಬೇಕಿದ್ದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿ. ಅಷ್ಟಕ್ಕೂ ಮನೆಯ ಊಟ ಕೊಡಲು ಆದೇಶ ಮಾಡಿದರೆ ಆಗ ಅದನ್ನು ಪ್ರಶ್ನಿಸಿಕೊಂಡು ಬನ್ನಿ. ಈ ಹಂತದಲ್ಲಿ ಮನೆಯೂಟ ಕೊಡುವುದನ್ನು ವಿರೋಧಿಸಲು ನಿಮಗ್ಯಾವ ಅಧಿಕಾರವಿದೆ? ಈ ಅರ್ಜಿಯನ್ನು ದಂಡ ಹಾಕಿ ವಜಾ ಮಾಡಲಾಗುವುದು’ ಎಂದು ಎಚ್ಚರಿಸಿತು.
ಇದಕ್ಕೆ, ಅರ್ಜಿದಾರರ ಮನವಿಯ ಬಗ್ಗೆ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಲು ಸಮಯಾವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಒಂದು ವಾರ ಮುಂದೂಡಿತು.