Advertisement

HC: ಕಲ್ಲಡ್ಕ ಭಟ್ಟರ ಭಾಷಣದ ಪೂರ್ಣಪಾಠ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶನ

12:11 AM Jan 20, 2024 | Team Udayavani |

ಬೆಂಗಳೂರು: ಮಂಡ್ಯದ ಶ್ರೀರಂಗಪಟ್ಟಣದಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ, ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಮಾಡಿದ ಭಾಷಣದ ಪೂರ್ಣಪಾಠವನ್ನು ಸಲ್ಲಿಸುವಂತೆ ಹೈಕೋರ್ಟ್‌ ರಾಜ್ಯ ಸರರಾರಕ್ಕೆ ನಿರ್ದೇಶನ ನೀಡಿದೆ.

Advertisement

ಭಟ್ಟರ ವಿರುದ್ಧ ದಾಖಲಿಸಿರುವ ಎಫ್ಐಆರ್‌ ರದ್ದುಗೊಳಿಸಬೇಕು ಮತ್ತು ವಿಚಾರಣೆಗೆ ತಡೆ ನೀಡಬೇಕು ಎಂದು ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಿತು.

ಕಲ್ಲಡ್ಕ ಪ್ರಭಾಕರ ಭಟ್‌ ಪರ ಹಿರಿಯ ವಕೀಲ ಅರುಣ್‌ ಶ್ಯಾಂ ವಾದಿಸಿ, ದೂರುದಾರರು ಭಾಷಣದ ಮಧ್ಯದಿಂದ ಪದಗಳನ್ನು ಹೆಕ್ಕಿ ದೂರು ನೀಡಿದ್ದಾರೆ. ದೂರುದಾರರು ರಾಜಕೀಯ ಕಾರ್ಯಕರ್ತೆಯಾಗಿದ್ಧಾರೆ. ಭಾಷಣದ ಕೆಲವು ಪದಗಳನ್ನು ಹೆಕ್ಕಿ ತೆಗೆದು ಅದಕ್ಕೆ ಅಪರಾಧದ ಬಣ್ಣ ನೀಡಲಾಗಿದೆ. ಈ ಹಿಂದೆ ಸರಕಾರವೇ ಹೈಕೋರ್ಟ್‌ನಲ್ಲಿ ಪ್ರಭಾಕರ ಭಟ್ಟರನ್ನು ಬಂಧಿಸುವುದಿಲ್ಲ ಎಂದು ಹೇಳಿದೆ. ಪೊಲೀಸರು ರಾಜಕೀಯ ಒತ್ತಡದಿಂದ ಪ್ರಕರಣ ದಾಖಲಿಸಿದ್ಧಾರೆ ಎಂಬುದು ಸರಕಾರಕ್ಕೆ ಮನವರಿಕೆ ಆಗಿದೆ. ಸುಳ್ಳು ದೂರನ್ನು ಉದ್ದೇಶಪೂರ್ವಕವಾಗಿ ದಾಖಲಿಸಿದ್ಧಾರೆ. ಹಾಗಾಗಿ ತತ್‌ಕ್ಷಣಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿಕೊಂಡರು.

ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್‌. ಬಾಲನ್‌, ಕಲ್ಲಡ್ಕ ಪ್ರಭಾಕರ ಭಟ್‌ ದ್ವೇಷ ಭಾಷಣ ಮಾಡುತ್ತಿರುತ್ತಾರೆ. ರಾಜ್ಯಾದ್ಯಂತ ದ್ವೇಷ ಭಾಷಣ ಮಾಡುತ್ತಾ ಕೋಮುಗಲಭೆ ಸೃಷ್ಟಿಸಿ ಹಿಂಸಾಚಾರಗಳನ್ನು ಮಾಡಿದ ಇತಿಹಾಸ ಇದೆ. ಈವರೆಗೆ ಅವರ ವಿರುದ್ದ ದಾಖಲಾದ ದೂರುಗಳನ್ನು ಪೀಠ ತರಿಸಿಕೊಳ್ಳಬೇಕು. ಮುಸ್ಲಿಮರಿಗೆ ದಿನಕ್ಕೊಬ್ಬ ಗಂಡ ಎಂದು ಆರೋಪಿ ಹೇಳಿರುವುದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ. ಹಾಗಾಗಿ ರಾಜ್ಯಾದ್ಯಂತ ಮುಸ್ಲಿಂ ಸಮುದಾಯ ಬೀದಿಗಿಳಿದು ಪ್ರತಿಭಟನೆ ನಡೆಸಿದೆ ಎಂದು ವಾದಿಸಿದರು.

ಸುಪ್ರಿಂ ಕೋರ್ಟ್‌ ತೀರ್ಪುಗಳು, ಕಾನೂನುಗಳು ಈ ರೀತಿಯ ದ್ವೇಷ ಭಾಷಣಕ್ಕೆ ಅವಕಾಶ ಕೊಡುವುದಿಲ್ಲ. ಆರೋಪಿ ಪರ ವಕೀಲರು ಭಾಷಣವನ್ನು ಬರಹ ರೂಪದಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ಧಾರೆ. ಆ ಕೆಲಸವನ್ನು ಸರಕಾರ ಮಾಡಬೇಕೇ ಹೊರತು ಆರೋಪಿ ಪರ ವಕೀಲರಲ್ಲ. ಸರಕಾರಕ್ಕೆ ಈ ನಿಟ್ಟಿನಲ್ಲಿ ನಿರ್ದೇಶನ ನೀಡಬೇಕು. ಅದಲ್ಲದೆ, ಆರೋಪಿಯ ಪೂರ್ತಿ ಭಾಷಣವನ್ನು ಕಲಾಪದಲ್ಲಿ ಕೇಳಲು ಕೋರ್ಟ್‌ನಲ್ಲಿ ವೀಡಿಯೋ ಪ್ರದರ್ಶನಕ್ಕೆ ಅವಕಾಶ ಕೊಡಬೇಕು. ಆರೋಪಿಯ ಪ್ರಕರಣಕ್ಕೆ ತಡೆಯಾಜ್ಞೆ ನೀಡಬಾರದು ಎಂದು ಬಾಲನ್‌ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next