ಬೆಂಗಳೂರು: ತೀವ್ರ ರಾಜಕೀಯ ಚರ್ಚೆ ಹಾಗೂ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಮೇಲ್ಸೇತುವೆ ನಿರ್ಮಾಣ ಯೋಜನೆಗೆ ಹೈಕೋರ್ಟ್ ಶುಕ್ರವಾರ ತಾತ್ಕಾಲಿಕ ತಡೆ ನೀಡಿದೆ.
ಈ ಕುರಿತಂತೆ “ನಮ್ಮ ಬೆಂಗಳೂರು ಫೌಂಡೇಷನ್ ಮತ್ತು ಸಿಟಿಜನ್ ಆ್ಯಕ್ಷನ್ ಫೋರಂ’ ಮತ್ತಿತರರ ಸಂಸ್ಥೆಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆವರೆಗೆ “ಯೋಜನೆಗೆ ಕರೆದಿರುವ ಟೆಂಡರ್ ಅನ್ನು ಸರ್ಕಾರ ಅಂತಿಮಗೊಳಿಸುವಂತಿಲ್ಲ.
ಒಂದೊಮ್ಮೆ ಟೆಂಡ್ ಅಂತಿಮಗೊಳಿಸಿದ್ದರೂ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ’ ಎಂದು ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಜೂ.3ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಬಿ.ಎನ್.ಹರೀಶ್ ಬೆಂಗಳೂರು ಮಹಾನಗರ ಯೋಜನಾ ಸಮಿತಿ (ಬಿಎಂಪಿಸಿ) ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್‌ನ ವಿಭಾಗೀಯ ಪೀಠ 2017ರ ಅ.16ರಂದೇ ಈ ವಿಷಯದಲ್ಲಿ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ನೀಡಿದೆ.
ಆದರೆ ಸರ್ಕಾರ ಮೇಲ್ಸೇತುವೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಟೆಂಡರ್ ಕರೆದು, ಅವುಗಳನ್ನು ಅಂತಿಮಗೊಳಿಸುವ ಸಿದ್ಧತೆಯಲ್ಲಿದೆ ಎಂದರು. ಈ ಬಗ್ಗೆ ನ್ಯಾಯಪೀಠ ಪ್ರಶ್ನಿಸಿದಾಗ ಸರ್ಕಾರದ ಪರ ವಕೀಲರು, ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಮಧ್ಯಂತರ ಆದೇಶ ನೀಡುವ ಮೊದಲೇ ಟೆಂಡರ್ ಕರೆಯಲಾಗಿತ್ತು ಎಂದು ಉತ್ತರಿಸಿದರು.
ಆಗ ನ್ಯಾಯಪೀಠ, ಹಾಗಿದ್ದರೆ ಮುಂದಿನ ವಿಚಾರಣೆವರೆಗೆ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂದು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.