ಬೆಂಗಳೂರು: “ರಾಷ್ಟ್ರೀಯ ತನಿಖಾ ತಂಡ’ (ಎನ್‌ಐಎ)ದ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ಬಾಂಗ್ಲಾದೇಶದವರು ಎನ್ನಲಾಗಿರುವ 12 ಮಂದಿಯ ಆಧಾರ್ ದಾಖಲೆಗಳ ಪರಿಶೀಲನೆಗೆ ಅನುಮತಿ ನೀಡಿ ಆದೇಶಿಸಿದೆ.
ಈ ವಿಚಾರವಾಗಿ ಎನ್‌ಐಎ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
2016ರ ಆಧಾರ್ ಕಾಯ್ದೆಯ ಸೆಕ್ಷನ್ 33ರಡಿ ಆಧಾರ್ ಕಾರ್ಡ್ ಹೊಂದಿರುವವರ ಖಾಸಗಿ ವೈಯಕ್ತಿಕ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಭಾರತೀಯ ವಿಶಿಷ್ಠ ಗುರುತು ಚೀಟಿ ಪ್ರಾಧಿಕಾರ (ಯುಐಡಿಐಎ) ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಎನ್‌ಐಎ ಹೈಕೋರ್ಟ್ ಮೆಟ್ಟಿಲೇರಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಷಯದ ಗಂಭೀರತೆ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಬಯಸುತ್ತದೆ.
ಬಾಂಗ್ಲಾದೇಶದ ಹಲವು ಪ್ರಜೆಗಳು ನಕಲಿ, ವಂಚನೆ ಮತ್ತು ದಾಖಲೆಗಳನ್ನು ತಿರುಚಿ ಆಧಾರ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಅವುಗಳ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಎನ್‌ಐಎ ಹೇಳಿದೆ.
ಹಾಗಾಗಿ, ಬಾಂಗ್ಲಾದೇಶದವರು ಎಂದು ಹೇಳಲಾಗುತ್ತಿರುವ 12 ಮಂದಿಯ ಆಧಾರ್ ದಾಖಲೆಗಳನ್ನು ಎರಡು ವಾರಗಳಲ್ಲಿ ಪರಿಶೀಲಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದೆ.