Advertisement
ಪ್ಯಾನಲ್‌ಗೆ ಹೆಸರು ಸೇರ್ಪಡೆ, ಟಿಕೆಟ್ ನೀಡುವಿಕೆ, ಹೈಕಮಾಂಡ್ ಅಥವಾ ವರಿಷ್ಠರ ಮಟ್ಟದಲ್ಲಿ ಪ್ರಭಾವ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳ ಆಕಾಂಕ್ಷಿಗಳು, ಶಾಸಕರು “ಉಸ್ತುವಾರಿ’ಗಳ ಮೊರೆ ಹೋಗುತ್ತಾರೆ. ಕಾಂಗ್ರೆಸ್‌ನ ಪರಮೋಚ್ಚ ಸಿಡಬ್ಲೂಸಿ (ಕಾಂಗ್ರೆಸ್ ವರ್ಕಿಂಗ್ ಕಮಿಟಿ) ಅಥವಾ ಬಿಜೆಪಿಯ ಸಂಸದೀಯ ಮಂಡಳಿ, ಕೇಂದ್ರ ರಾಜಕೀಯ ಸಮಿತಿಯಲ್ಲಿ ಸದಸ್ಯರಾದವರು ರಾಜ್ಯ ಉಸ್ತುವಾರಿ ಆದರಂತೂ ಸ್ವಲ್ಪ “ಡಿಮ್ಯಾಂಡ್’ ಜಾಸ್ತಿ ಎಂದು ಹೇಳಬಹುದು.
Related Articles
Advertisement
ಜನತಾ ಪಕ್ಷ :
ರಾಜ್ಯದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ರಾಜ್ಯ ಉಸ್ತುವಾರಿಗಳ ನೇಮಕ ಸಂಪ್ರದಾಯ ಇದೆಯಾದರೂ ಜನತಾಪಕ್ಷ, ಜನತಾದಳದಲ್ಲಿ ಇರಲಿಲ್ಲ. ಆದರೆ ರಾಜ್ಯದಲ್ಲಿ ಜನತಾಪಕ್ಷ, ಜನತಾದಳ ಆಡಳಿತದಲ್ಲಿದ್ದಾಗ ದೆಹಲಿಯಿಂದ ವೀಕ್ಷಕರಾಗಿ ಹಿರಿಯ ನಾಯಕರು ಆಗಮಿಸುತ್ತಿದ್ದರು. 1983ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಎಚ್.ಡಿ.ದೇವೇಗೌಡ, ಎಸ್.ಬಂಗಾರಪ್ಪ, ಎಸ್.ಆರ್.ಬೊಮ್ಮಾಯಿ, ರಾಚಯ್ಯ ಅವರಂತಹ ಘಟಾನುಘಟಿಗಳ ಹೆಸರು ಇದ್ದಾಗ ಕೇಂದ್ರದಿಂದ ವೀಕ್ಷಕರಾಗಿ ಬಂದಿದ್ದ ಬಿಜು ಪಟ್ನಾಯಕ್, ಮಧು ದಂಡವತೆ ಅವರು ರಾಮಕೃಷ್ಣ ಹೆಗಡೆ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರು.
ಆಗ ಜನತಾಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಅವರ ಪ್ರತಿನಿಧಿಯಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಕೃಷ್ಣ ಹೆಗಡೆ ಅವರೂ ವೀಕ್ಷಕರಾಗಿಯೇ ಬಂದಿದ್ದರು. ಆದರೆ ಮೂವರ ನಡುವೆ ಸ್ಪರ್ಧೆಯಲ್ಲೇ ಇರದಿದ್ದ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರು. ರಾಮಕೃಷ್ಣ ಹೆಗಡೆ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿದ್ದ ಸಂಪರ್ಕ, ವೀಕ್ಷಕರಾಗಿ ಬಂದಿದ್ದವರ ಜತೆಗಿದ್ದ ಸ್ನೇಹವೂ ಆಗ ಪೂರಕವಾಯಿತು ಎಂಬ ಮಾತುಗಳೂ ಇವೆ. ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಏನೇ ಸಮಸ್ಯೆ ಎದುರಾದರೂ ಶರದ್ ಯಾದವ್ ಸಂಧಾನಕಾರರಾಗಿ ಬರುತ್ತಿದ್ದರು.
ಶೋ ಮ್ಯಾನ್ :
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಅಧಿಕಾರ ಇದ್ದಾಗ ರಾಜ್ಯ ಉಸ್ತುವಾರಿಗಳಿಗೆ ಕೆಲಸ ಕಡಿಮೆ. ಏಕೆಂದರೆ ಪ್ರಧಾನಿ ಹಾಗೂ ರಾಷ್ಟ್ರೀಯ ಅಧ್ಯಕ್ಷರು ಮುಖ್ಯಮಂತ್ರಿ ಬದಲಾವಣೆ ಸೇರಿ ಹಲವು ತೀರ್ಮಾನ ದಿಢೀರ್ ಆಗಿ ತೆಗೆದುಕೊಳ್ಳುವುದೂ ಉಂಟು. ಕೇಂದ್ರದಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೆ ಯಾವುದೇ ತೀರ್ಮಾನ ರಾಜ್ಯ ನಾಯಕರ ಮಟ್ಟದಲ್ಲಿ ಸಮಾಲೋಚನೆ ನಂತರವೇ ಆಗಲಿದೆ. ಇನ್ನು ರಾಜ್ಯದಲ್ಲಿ ಪ್ರಬಲ ನಾಯಕರು ಇದ್ದಾಗ “ಉಸ್ತುವಾರಿ’ಗಳು ಶೋ ಮ್ಯಾನ್ ಅಷ್ಟೇ. ಉದಾಹರಣೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನೇರವಾಗಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರ ಸಂಪರ್ಕದಲ್ಲಿದ್ದರು. ಆಗ ಇಲ್ಲಿ ಕೆ.ಸಿ.ವೇಣುಗೋಪಾಲ್ ಉಸ್ತುವಾರಿಯಾಗಿದ್ದರೂ ಸಲಹೆಗಷ್ಟೇ ಸೀಮಿತ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅರುಣ್‌ಸಿಂಗ್ ಉಸ್ತುವಾರಿ ಆಗಿದ್ದರಾದರೂ ಯಡಿಯೂರಪ್ಪ ತೀರ್ಮಾನ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲ ರಾಜ್ಯದಲ್ಲಿ ಅನಂತಕುಮಾರ್ ಕೇಂದ್ರ ಸಚಿವರಾ ಗಿದ್ದಾಗಲೂ ರಾಜ್ಯ ಉಸ್ತುವಾರಿಗಳಿಗೆ ಹೆಚ್ಚು ಕೆಲಸ ಇರುತ್ತಿರಲಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾರೆ.
ಕಾಂಗ್ರೆಸ್:
70-80ರ ದಶಕದಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಹಿಡಿತ ಹೊಂದಿದ್ದ ಮೋತಿಲಾಲ್ ವೋರಾ, ಎಂ.ಎಲ್. ಪೋತೇದಾರ್, ಕರುಣಾಕರನ್ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಮಟ್ಟಿಗೆ ನಿರ್ಧಾರ ಮಾಡುವ “ಶಕ್ತಿ’ ಹೊಂದಿದ್ದರು. ದೇವರಾಜ ಅರಸು ಎರಡನೇ ಬಾರಿ, ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಲಿ ಮೊದಲ ಬಾರಿ ಮುಖ್ಯಮಂತ್ರಿಗಳಾಗಲು ಉಸ್ತುವಾರಿಗಳ ಕೃಪೆ ಇತ್ತು ಎಂದು ಹಿರಿಯ ಕಾಂಗ್ರೆಸ್ಸಿಗರು ನೆನಪಿಸಿಕೊಳ್ಳುತ್ತಾರೆ.
ಕಾಂಗ್ರೆಸ್‌ನಲ್ಲಿ ಗುಲಾಂ ನಬಿ ಆಜಾದ್, ಎ.ಕೆ.ಆ್ಯಂಟನಿ, ದಿಗ್ವಿಜಯ್‌ಸಿಂಗ್, ಪೃಥ್ವಿರಾಜ್ ಚೌಹಾಣ್, ವಯಲಾರ್ ರವಿ, ಕೆ.ಸಿ.ವೇಣುಗೋಪಾಲ್ ರಾಜ್ಯ ಉಸ್ತುವಾರಿಗಳಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ರಣದೀಪ್ ಸಿಂಗ್ ಸುಜೇìವಾಲಾ ರಾಜ್ಯ ಉಸ್ತುವಾರಿಯಾಗಿದ್ದಾರೆ.
2018ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದಾಗ ಕಾಂಗ್ರೆಸ್‌ನಲ್ಲಿ ರಾಜ್ಯ ಉಸ್ತುವಾರಿಯಾಗಿ ಕೆ.ಸಿ.ವೇಣುಗೋಪಾಲ್ ಇದ್ದರೂ ಎಐಸಿಸಿಯಿಂದ ಗುಲಾಂ ನಬಿ ಆಜಾದ್ ಅವರನ್ನು ವೀಕ್ಷಕ ಜತೆಗೆ ಸಮನ್ವಯಕಾರರನ್ನಾಗಿ ಕಳುಹಿಸಲಾಯಿತು. ಮಲ್ಲಿಕಾರ್ಜುನ ಖರ್ಗೆ ಅವರ ಜತೆಗೂಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಮಾತುಕತೆ ನಡೆಸಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದೇ ರೀತಿ 2004ರಲ್ಲಿಯೂ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿ ಚುನಾವಣೆಗೆ ಹೋದಾಗ ಕಾಂಗ್ರೆಸ್‌ಗೆ ಮತ್ತೆ ಬಹುಮತ ಬರದೆ ಜೆಡಿಎಸ್ ಜತೆ ಸೇರಿ ಸಮ್ಮಿಶ್ರ ಸರಕಾರ ರಚನೆ ಮಾಡಬೇಕಾದಾಗಲೂ ರಾಜ್ಯ ಉಸ್ತುವಾರಿ ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಬೇರೊಬ್ಬರಿಗೆ ಹೊಣೆಗಾರಿಕೆ ನೀಡಲಾಗಿತ್ತು. ಆಗ ಧರ್ಮಸಿಂಗ್ ಮುಖ್ಯಮಂತ್ರಿಯಾದರು. 2013ರಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಾಗ ದಿಗ್ವಿಜಯ್‌ಸಿಂಗ್ ರಾಜ್ಯ ಉಸ್ತುವಾರಿಯಾದರೂ ಎ.ಕೆ.ಆ್ಯಂಟನಿ ವೀಕ್ಷಕರಾಗಿದ್ದªರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.
ಬಿಜೆಪಿ :
ಬಿಜೆಪಿಯ ಅರುಣ್ ಜೇಟ್ಲಿ ಚುನಾವಣ ತಂತ್ರಗಾರಿಕೆಯಲ್ಲಿ ಎತ್ತಿದ ಕೈ. ಅವರು ರಾಜ್ಯ ಉಸ್ತುವಾರಿಯಾಗಿ ದೆಹಲಿಯಿಂದ ಬರುವ ಮುನ್ನ ರಾಜ್ಯದ 224 ಕ್ಷೇತ್ರಗಳ ಸಮುದಾಯವಾರು ಸ್ಥಿತಿಗತಿಗಳ ಡೇಟಾ ಸಹಿತ ಬರುತ್ತಿದ್ದರು. 2008ರಲ್ಲಿ ಕುಮಾರಸ್ವಾಮಿ -ಯಡಿಯೂರಪ್ಪ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ರಚನೆ ಹಿಂದಿನ ರೂವಾರಿ ಅರುಣ್‌ಜೇಟ್ಲಿ. ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎದುರಾಗಬಹುದಾದ ಕಾನೂನಾತ್ಮಕ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳ ಬಗ್ಗೆ ಮೊದಲೇ ಅಧ್ಯಯನ ನಡೆಸಿ ಸೂಕ್ತ ಪರಿ ಹಾರದೊಂದಿಗೆ ಆಗಮಿಸುತ್ತಿದ್ದದ್ದು ಅವರ ವಿಶೇಷತೆ.
ಅದೇ ರೀತಿ ಸುಷ್ಮಾ ಸ್ವರಾಜ್ ಅವರು ಸಹ ಕರ್ನಾಟಕದ ರಾಜಕೀಯ ಪಲ್ಸ್ ಅರಿತಿದ್ದರು. ಬಳ್ಳಾರಿ ಗಣಿ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರ ಮೇಲೆ ಹಿಡಿತ ಹೊಂದಿದ್ದರು. ಒಮ್ಮೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಜನಾರ್ದನರೆಡ್ಡಿ ಸಹೋದರರು ಮುನಿಸಿಕೊಂಡು, ಕೆಲವು ಶಾಸಕರು ಹೈದರಾಬಾದ್ ಪ್ರವಾಸಕ್ಕೆ ಹೋದಾಗ ಸಂಧಾನ ಮಾತುಕತೆ ನಡೆದಿದ್ದು ಸುಷ್ಮಾ ಸ್ವರಾಜ್ ಸಮ್ಮುಖದಲ್ಲಿ. ಸುಷ್ಮಾ ಅವರು ರಾಜ್ಯದ ಎಲ್ಲ ನಾಯಕರ ಜತೆ ಉತ್ತಮ ಸಂಬಂಧ ಹೊಂದಿದ್ದರು. ಅವರ ಮಾತಿಗೆ ಹಿರಿಯ ನಾಯಕರು ವಿರೋಧ ವ್ಯಕ್ತಪಡಿ ಸುತ್ತಿರಲಿಲ್ಲ. ಬಳ್ಳಾರಿಗೆ ಪ್ರತೀ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಬರು ವ ಮೂಲಕ ಆ ಭಾಗದಲ್ಲಿ ಒಂದು ರೀತಿಯ ಮನೆ ಮಗಳಂತೆಯೇ ಆಗಿದ್ದರು. ಇನ್ನು ರಾಜನಾಥ್ ಸಿಂಗ್, ಧರ್ಮೇಂದ್ರ ಪ್ರಧಾನ್, ಅರುಣ್ ಸಿಂಗ್ ಅವರೂ ರಾಜ್ಯ ಉಸ್ತುವಾರಿಗಳಾಗಿ ಕೆಲಸ ಮಾಡಿ ರಾಜಕೀಯ ತಂತ್ರಗಾರಿಕೆಯಲ್ಲಿ ತಮ್ಮದೇ ಆದ ಪಾತ್ರ ವಹಿಸಿದ್ದಾರೆ.
-ಎಸ್.ಲಕ್ಷ್ಮೀ ನಾರಾಯಣ