Advertisement
ಸ್ಪೀಕರ್, ಮುಖ್ಯಮಂತ್ರಿಗಳ ನಡೆ ಹಾಗೂ ಸುಪ್ರೀಂಕೋರ್ಟ್ ನೀಡಲಿರುವ ಆದೇಶ ನಿರ್ಣಾಯಕವೆನಿಸಿದ್ದು, ಮಂಗಳವಾರ ಹಾಗೂ ಬುಧವಾರ ಮಹತ್ವದ ಬೆಳವಣಿಗೆಗಳಾಗುವ ನಿರೀಕ್ಷೆಯಿದೆ. ವರಿಷ್ಠರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸೂಚನೆಯಂತೆಯೇ ಮುಂದುವರಿದು ಅಂತಿಮ ಗುರಿ ತಲುಪುವ ಉತ್ಸಾಹದಲ್ಲಿದೆ ರಾಜ್ಯ ಬಿಜೆಪಿ.
Related Articles
Advertisement
ಆದರೆ, ರಾತ್ರೋರಾತ್ರಿ ಬಿಜೆಪಿಯ ಕೆಲ ನಾಯಕರು ಎಂ.ಟಿ.ಬಿ.ನಾಗರಾಜ್ ಅವರನ್ನು ಸಂಪರ್ಕಿಸಿ ಭಾನುವಾರ ಬೆಳಗ್ಗೆ ಮುಂಬೈನಲ್ಲಿ ಅತೃಪ್ತರಿರುವ ಹೋಟೆಲ್‌ಗೆ ತಲುಪಿಸುತ್ತಿದ್ದಂತೆ ಬಿಜೆಪಿ ನಿರಾಳವಾಯಿತು. ಸಂಜೆ ಹೊತ್ತಿಗೆ ಎಂ.ಟಿ.ಬಿ.ನಾಗರಾಜ್ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ಅತೃಪ್ತ ಶಾಸಕರು ಒಟ್ಟಿಗೆ ಇರುವುದಾಗಿ ಪ್ರಕಟಿಸುವ ಮೂಲಕ ಗೊಂದಲಗಳಿಗೆ ತೆರೆ ಬಿತ್ತು. ಈ ಬೆಳವಣಿಗೆಯಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿ ಇತರ ನಾಯಕರಲ್ಲೂ ಸಂತಸದ ಕಳೆ ಮೂಡಿದ್ದು ಕಂಡು ಬಂತು.
ಮೈತ್ರಿ ಪಕ್ಷಗಳ ಬಹಳಷ್ಟು ಶಾಸಕರಲ್ಲಿ ಮೈತ್ರಿ ರಚನೆ ಹಾಗೂ ನಂತರದ ಆಡಳಿತ ನಿರ್ವಹಣೆ ಬಗ್ಗೆ ಅಸಮಾಧಾನವಿತ್ತು. ಹಾಗಾಗಿ, ಈ ಅತೃಪ್ತರ ನೆರವಿನೊಂದಿಗೆ ಮೈತ್ರಿ ಸರ್ಕಾರಕ್ಕೆ ಸಂಖ್ಯಾಬಲವಿಲ್ಲದಿರುವುದನ್ನು ಸಾಬೀತುಪಡಿಸುವ ಪ್ರಯತ್ನಕ್ಕೆ ಬಿಜೆಪಿ ಈ ಹಿಂದೆ ನಾಲ್ಕೈದು ಬಾರಿ ಪ್ರಯತ್ನಿಸಿದರೂ ಫಲ ನೀಡಿರಲಿಲ್ಲ. ಆಗೆಲ್ಲಾ ಬಿಜೆಪಿಗೆ “ಆಪರೇಷನ್ ಕಮಲ’ದ ಕಳಂಕ ಮತ್ತೆ ಮೆತ್ತಿಕೊಂಡಿತ್ತು. ಹಾಗಾಗಿ, ಸರ್ಕಾರ ರಚನೆ ಸಂಬಂಧ ಯಾವುದೇ ಪ್ರಯತ್ನ ನಡೆದರೂ ರಾಷ್ಟ್ರಮಟ್ಟದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದ ರೀತಿಯಲ್ಲಿ ಮುಂದುವರಿಯಬೇಕು ಎಂಬ ಎಚ್ಚರಿಕೆಯನ್ನು ಬಿಜೆಪಿ ಹೈಕಮಾಂಡ್ ರಾಜ್ಯಬಿಜೆಪಿಗೆ ಸೂಚಿಸಿತ್ತು.
ವರಿಷ್ಠರಿಗೆ ತೃಪ್ತಿ: ಅದರಂತೆಯೇ ರಾಜ್ಯದಲ್ಲಿ ಕಳೆದ ಎರಡು ವಾರಗಳಲ್ಲಿ ಮೈತ್ರಿ ಸರ್ಕಾರ ಸಂಖ್ಯಾಬಲ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾದರೂ ಅದಕ್ಕೆ ಬಿಜೆಪಿ ಕಾರಣವೆಂಬ ಅಪಖ್ಯಾತಿಯಾಗಲಿ, ಅದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ನಾಯಕರು ನೇರವಾಗಿ ಪಾಲ್ಗೊಂಡಿದ್ದಾಗಲಿ ಮೇಲ್ನೋಟಕ್ಕೆ ಕಾಣಲಿಲ್ಲ. ಅಷ್ಟರ ಮಟ್ಟಿಗೆ ಬಿಜೆಪಿ ಎಲ್ಲ ಬೆಳವಣಿಗೆಗಳಿಂದ ಅಂತರ ಕಾಯ್ದುಕೊಂಡಿರುವಂತೆ ಬಿಂಬಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದು ವರಿಷ್ಠರಿಗೂ ಸಮಾಧಾನ ತಂದಂತಿದೆ. ಹಾಗಾಗಿ, ಮುಂದೆಯೂ ಇದೇ ರೀತಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಮುಂದುವರಿಯುಂತೆ ವರಿಷ್ಠರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಹೈಕಮಾಂಡ್‌ಗೆ ನಿರಂತರ ಮಾಹಿತಿ: ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ನಿಯಮಿತವಾಗಿ ವರಿಷ್ಠರಿಗೆ ಮಾಹಿತಿ ರವಾನೆಯಾಗುತ್ತಿತ್ತು. ಪ್ರತಿ ಬೆಳವಣಿಗೆಗೂ ಪಕ್ಷ ನಡೆದುಕೊಂಡ ರೀತಿ ಹಾಗೂ ಮುಂದೆ ಕೈಗೊಳ್ಳಬೇಕಾದ ನಿಲುವಿನ ಬಗ್ಗೆಯೂ ಹೈಕಮಾಂಡ್‌ಗೆ ತಿಳಿಸಿ ಸಲಹೆ, ಸೂಚನೆ ಪಡೆಯಲಾಗುತ್ತಿತ್ತು.
ಇನ್ನೂ ಕೆಲವರ ರಾಜೀನಾಮೆ: ಮಹಿಳಾ ಶಾಸಕಿಯರೂ ಸೇರಿ ಇನ್ನೂ ಐದಾರು ಮಂದಿ ರಾಜೀನಾಮೆ ನೀಡುವ ಲೆಕ್ಕಾಚಾರದಲ್ಲಿದ್ದಾರೆ. ಎಂ.ಟಿ.ಬಿ.ನಾಗರಾಜ್, ಕೆ.ಸುಧಾಕರ್ ರಾಜೀನಾಮೆ ನೀಡಿದ ದಿನವೇ ಕೆಲವರು ರಾಜೀನಾಮೆ ನೀಡಬೇಕಿತ್ತು. ಆದರೆ, ಆ ದಿನ ಕಾಂಗ್ರೆಸ್ ನಾಯಕರು ಸುಧಾಕರ್ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿ ಕೊಠಡಿಯಲ್ಲಿ ಹಿಡಿದಿಟ್ಟುಕೊಂಡ ಘಟನೆ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಸೋಮವಾರ ಇಲ್ಲವೇ ಮಂಗಳವಾರ ಅವಕಾಶ ಸಿಕ್ಕಾಗ ಇನ್ನೂ ಕೆಲ ಅತೃಪ್ತರು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ.
ಕೆಲ ಆಯ್ಕೆ: ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚಿಸುವುದಾದರೆ ಸೋಮವಾರವೇ ಈ ಪ್ರಕ್ರಿಯೆ ನಡೆಸುವಂತೆ ಒತ್ತಡ ಹೇರುವುದು. ಸುಪ್ರೀಂಕೋರ್ಟ್ ಮಂಗಳವಾರ ನೀಡುವ ಆದೇಶ ಗಮನಿಸಿ, ಮುಂದುವರಿಯುವುದು. ಸ್ಪೀಕರ್ ಅನಿರೀಕ್ಷಿತ ನಡೆಗೆ ಮುಂದಾದರೆ ಅವರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸುವುದು. ಈ ಸಂಬಂಧ ಈಗಾಗಲೇ ನ್ಯಾಯಾಲಯದ ಕೆಲ ತೀರ್ಪು, ನಿರ್ದೇಶನಗಳ ಪರಾಮರ್ಶನ ಕಾರ್ಯ ನಡೆದಿದೆ ಎನ್ನಲಾಗಿದೆ.
* ಎಂ. ಕೀರ್ತಿಪ್ರಸಾದ್