Advertisement

2500 ಕೋಟಿ ರೂ ಆರೋಪ: ಮಾಧ್ಯಮಗಳ ವಿರುದ್ಧವೇ ಯತ್ನಾಳ್ ಕಿಡಿ

07:00 PM May 07, 2022 | Team Udayavani |

ವಿಜಯಪುರ : ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಮಾರಂಭದಲ್ಲಿ ನಾನು ಮಾತನಾಡಿದ್ದನ್ನು ಕೆಲ ಮಾಧ್ಯಮಗಳು ತಿರುಚಿ ವರದಿ ಪ್ರಸಾರ ಮಾಡಿವೆ. ನಾನೇನು ಬಿಜೆಪಿ ಹೈಕಮಾಂಡ್ ಹಣ ಕೇಳಿದೆ ಎಂದು ಹೇಳಿದ್ದೇನೆಯೇ, ನೀವು ನನ್ನ ಹೇಳಿಕೆ ಪಡೆಯಬೇಡಿ ಎಂದು ಕೆಲವು ದೃಶ್ಯ ಮಾಧ್ಯಮಗಳ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶನಿವಾರ ಕಿರಿಕಾರಿದ್ದಾರೆ.

Advertisement

ಪಕ್ಷಕ್ಕೆ ಇರಿಸು ಮುರಿಸು ತಂದ ಹೇಳಿಕೆಗೆ ಪ್ರತಿಕ್ರಿಯೆ ಪಡೆಯಲು ಮುಂದಾದ ಪತ್ರಕರ್ತರ ವಿರುದ್ಧ ಹರಿಹಾಯ್ದ ಯತ್ನಾಳ್,  ನನ್ನ ಹೇಳಿಕೆಯನ್ನು ತಿರುಚುವವರು ನನ್ನ ಸಂದರ್ಶನ ತೆಗೆದುಕೊಳ್ಳಬೇಡಿ ಎಂದು ಆಕ್ಷೇಪಿಸಿದರು.

ಅಧಿಕಾರ, ಸ್ಥಾನಮಾನಕ್ಕಾಗಿ ಹಣ ಕೇಳುವವರು ರಾಜಕಾರಣಿಗಳೇ ಅಲ್ಲ.ನಮ್ಮ ಪ್ರಧಾನಿ ಮೋದಿ ಅವರಂಥ ನಾಯಕರು ಇರುವರೆಗೆ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಬಿಜೆಪಿ ಪಕ್ಷದಲ್ಲಿ ಇಂತದ್ದಕ್ಕೆಲ್ಲಾ ಅವಕಾಶ ನೀಡಲ್ಲ. ಕೇಂದ್ರ ಹೈಕಮಾಂಡ್ ಪಾರದರ್ಶಕವಾಗಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದರು.

ಸಾಮಾನ್ಯ ಅರ್ಥದಲ್ಲಿ ಹೇಳಿದ ನನ್ನ ಹೇಳಿಕೆಯನ್ನು ಮಾಧ್ಯಮದವರು ನಿಮಗೆ ಬೇಕಾದಂತೆ ವ್ಯಾಖ್ಯಾನ ಮಾಡಿದರೆ ಅದಕ್ಕೆ ನಾನು ಕಾರಣನಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ವಿಜಯೇಂದ್ರ ಪರ ಇರುವ ಕೆಲವು ದೃಶ್ಯ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿ ವರದಿ ಮಾಡುತ್ತಿವೆ. ನನ್ನ ಸಂದರ್ಶನ ತೆಗೆದುಕೊಳ್ಳಬೇಡಿ ಎಂದು ಹರಿಹಾಯ್ದರು.

ಯತ್ನಾಳ್ ಪಾರ್ಟಿ ಬಗ್ಗೆ ಹೇಳಿಲ್ಲ, ಇನ್ ಜನರಲ್ ಆಗಿ ಮಾತಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಸ್ಪಷ್ಟಪಡಿಸಿದ್ದಾರೆ. ಆದರೂ ಕೆಲ ಮಾಧ್ಯಮಗಳು ನನ್ನ ವಿರುದ್ಧ ಶಿಸ್ತುಕ್ರಮ ಎಂದು ಪ್ರಸಾರ ಮಾಡುತ್ತಿವೆ ಎಂದು ಹರಿಹಾಯ್ದರು.

Advertisement

ಶಿಸ್ತು ಸಮಿತಿ ಎಂದರೇನು, ಶಿಸ್ತು ಸಮಿತಿಗೆ ಶಿಫಾರಸ್ಸಾದರೆ ನನ್ನ ಕರೆಸುತ್ತಾರೆ, ಆಗ ಅದಕ್ಕೆ ಸೂಕ್ತ ಮಾಹಿತಿ ನೀಡುತ್ತೇನೆ. ಈ ಹಿಂದೆಯೂ ನನ್ನನ್ನು ಶಿಸ್ತು ಸಮಿತಿ ಮುಂದೆ ಕರೆಸಿದ್ದರು. ಅದೇನೂ ಆಗುವುದಿಲ್ಲ. ಮಾಧ್ಯಮದಲ್ಲಿ ಹೇಳಿದ್ದೆಲ್ಲ ಸತ್ಯವಲ್ಲ ಎಂದರು.

ಯಾರ್ಯಾರು ಹೈಕಮಾಂಡ್ ನವರು ಹಣ ಕೇಳಿದ್ದಾರೆಂದು ಹೇಳಿದ್ದೇನೆಯೇ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ ಅವರು, ಮಾಧ್ಯಮಗಳು ವಾಸ್ತವಿಕತೆ ಕುರಿತು ವರದಿ ಪ್ರಸಾರ ಮಾಡಬೇಕು. ಭವಿಷ್ಯದಲ್ಲಿ ನಾ ಹೇಳಿದ್ದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವೆ ಎಂದು ಯತ್ನಾಳ್ , ನನ್ನ ಹೇಳಿಕೆಯಿಂದ ರಾಜ್ಯದಲ್ಲಿ ಒಂದು ಚರ್ಚೆಯಾದರೂ ಆರಂಭವಾಗಿದೆ ಎಂದರು.

ರಾಮದುರ್ಗದಲ್ಲಿ 2500 ಕೋಟಿ ರೂ. ಹಣ ನೀಡಿದರೆ ಮುಖ್ಯಮಂತ್ರಿ ಮಾಡುತ್ತೇವೆ ಎಂಬ ಟೀಂ ಇದೆ ಎಂದು ಸಾಮಾನ್ಯ ಅರ್ಥದಲ್ಲಿ ಹೇಳಿದ್ದೇನೆಯೇ ಹೊರತು, ಯಾವುದೇ ಪಕ್ಷದ ಹೆಸರು ಹೇಳಿಲ್ಲ. ಈ ರೀತಿ ದಲ್ಲಾಳಿಗಳಿದ್ದಾರೆ, ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧವಿಲ್ಲ ಎಂದು ಹೇಳಿದ್ದೇನೆ. ಆದರೆ ಇದನ್ನು ಕೆಲ ದೃಶ್ಯ ಮಾಧ್ಯಮಗಳು ತಿರುಚಿ ವರದಿ ಮಾಡಿವೆ ಎಂದರು.

ಇಡೀ ದೇಶದಲ್ಲೇ ನಮ್ಮ ಬಿಜೆಪಿ ಹೈಕಮಾಂಡ್ ಅತ್ಯಂತ ಬಲಿಷ್ಠ ಹೈಕಮಾಂಡ್. ನಮ್ಮ ಪಕ್ಷದಂಥ ಸ್ಟ್ರಾಂಗ್ ಹೈಕಮಾಂಡ್ ಬೇರೆ ರಾಜಕೀಯ ಪಕ್ಷಗಳಲ್ಲಿಲ್ಲ. ಬಿಜೆಪಿ ಪಕ್ಷದಲ್ಲಿ ಇಂಥ ವ್ಯವಹಾರಗಳು ನಡೆಯುವುದಿಲ್ಲ. ಕೆಲ ದಲ್ಲಾಲಿಗಳು ಇಂಥ ವ್ಯವಹಾರ ಮಾಡುತ್ತಾರೆ, ಅದರ ಅನುಭವ ನನಗೂ ಆಗಿದೆ. ಸದರಿ ವೇದಿಕೆಯಲ್ಲಿ ಕೆಲ ಟಿಕೆಟ್ ಆಕಾಂಕ್ಷಿಗಳಿದ್ದರು. ಹೀಗಾಗಿ ಅವರನ್ನು ಉದ್ದೇಶಿಸಿ ಮಾತನಾಡುವಾಗ ದಲ್ಲಾಲಿಗಳ ಕರೆ ಬಂದಿದ್ದ ಕಾರಣ ಹೇಳಿದ್ದೇನೆ. ದಲ್ಲಾಲಿಗಳ ಮಾತನ್ನು ಯಾರೂ ಕೇಳಲ್ಲಾ, ಪಕ್ಷದ ಕಾರ್ಯಕರ್ತರು ಮುಖಂಡರೂ ಅಲ್ಲ ಎಂದಿದ್ದೇನೆ. ದಲ್ಲಾಲಿಗಳಿಂದ ಟಿಕೆಟ್ ಆಕಾಂಕ್ಷಿತರು ಮೋಸ…ಹೋಗದಿರಿ ಎಂದು ಸಲಹೆ ನೀಡಿದ್ದೇನೆ ಎಂದು ತಮ್ಮ ಹೇಳಿಕೆಗೆ ಸಮಜಾಯಿಸಿ ನೀಡಿದರು.

ರಾಜ್ಯದಲ್ಲಿ ಕೆಲ ಪಕ್ಷಗಳ ಕೆಲವು ಮುಖಂಡರು ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ ಭ್ರಷ್ಟಾಚಾರ ಆರೋಪದಲ್ಲಿ ಬಂಧನವಾದಾಗ, ಅಂದು ಮುಖ್ಯಮಂತ್ರಿ ಆಗಿದ್ದ ಬಿಜೆಪಿ ಮಹಾನ್ ನಾಯಕ ಡಿ.ಕೆ.ಶಿವಕುಮಾರ ಅವರಿಗೆ ಹೀಗಾಗಬಾರದಿತ್ತು, ಸತ್ಯ ಗೆಲ್ಲಲಿದ್ದು, ಶೀಘ್ರವೇ ಹೊರ ಬರುತ್ತಾರೆ ಎಂದಿದ್ದರು. ಇವರ ಇಂಥ ರಾಜಕೀಯ ಒಪ್ಪಂದದ ಕುರಿತು ನಾನು ಸದನದಲ್ಲೇ ಮಾತನಾಡಿದ್ದು ದಾಖಲಾಗಿದೆ ಎಂದರು.

ಪೂರ್ಣ ಹೊರ ಹಾಕಲಿ

ಪಿಎಸ್‍ಐ ನೇಮಕದ ಅಕ್ರಮ ಈಗ ಒಂದೊಂದಾಗಿ ಹೊರ ಬರುತ್ತಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಈ ಮಾಜಿ ಸಿಎಂ ಪುತ್ರ ಪ್ರಕರಣದಲ್ಲಿದ್ದಾರೆ, ಅವರ ಹೆಸರು ಹೇಳಿದರೆ ಸರ್ಕಾರ ಬೀಳುತ್ತದೆ ಎಂದಿದ್ದಾರೆ. ಅರ್ಧ ಮಾತ್ರ ಹೇಳುವ ಬದಲು ಯಾರು ಎಂಬುದನ್ನು ಪೂರ್ಣ ಹೊರ ಹಾಕಲಿ ಎಂದು ಆಗ್ರಹಿಸಿದರು.

ನನ್ನ ಬಗ್ಗೆ ಭಯ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ನನ್ನ ಬಗ್ಗೆ ಭಯವಿದೆ. ನಾನು ಮುಖ್ಯಮಂತ್ರಿ ಆದರೆ ಮತ್ತೆ ಅದೇ ಜಾಗಕ್ಕೆ ಹೋಬೇಕಾಗುತ್ತದೆ, ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯದಿಂದ  ನನ್ನ ವಿರುದ್ಧ ಮಾತನಾಡುತ್ತಾರೆ. ಅವರಿಗೆ ನನಗೆ ಅಧಿಕಾರ ಸಿಗುವ ಬಗ್ಗೆ ಏನೋ ಒಂದು ಸಂದೇಶ ಸಿಕ್ಕಿದ್ದು, ಇದಕ್ಕಾಗಿಯೇ ನನ್ನ ಬಗ್ಗೆ ಭಯಪಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next