Advertisement

ಸಂಪುಟಕ್ಕೆ ಮೈನರ್‌ ಸರ್ಜರಿ: ಇಬ್ಬರು ಹೊರಗೆ 6 ಮಂದಿ ಒಳಗೆ

06:00 AM Dec 22, 2018 | |

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದ ಬಳಿಕ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಬಹುತೇಕ ಖಚಿತವಾಗಿದ್ದು, ವಿಸ್ತರಣೆ ಜತೆಗೆ ಹಾಲಿ ಇಬ್ಬರು ಸಚಿವರನ್ನು ಕೈಬಿಟ್ಟು ಸಂಪುಟ ಪುನಾರಚನೆಗೆ ಕಾಂಗ್ರೆಸ್‌ ಮುಂದಾದಂತಿದೆ.

Advertisement

ದೆಹಲಿಯಲ್ಲಿ ಶುಕ್ರವಾರ ಇಡೀ ದಿನ ರಾಜ್ಯ ಕಾಂಗ್ರೆಸ್‌ ನಾಯಕರು ಕಸರತ್ತು ನಡೆಸಿ ಅಂತಿಮವಾಗಿ ಸಂಪುಟ ವಿಸ್ತರಣೆ ಮಾತ್ರವಲ್ಲದೇ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಹಾಲಿ ಸಚಿವರಾದ ರಮೇಶ್‌ ಜಾರಕಿಹೊಳಿ ಹಾಗೂ ಆರ್‌.ಶಂಕರ್‌ ಅವರನ್ನು ಕೈಬಿಟ್ಟು ಆರು ಮಂದಿ ಹೊಸಬರಿಗೆ ಸಚಿವ ಸ್ಥಾನ ನೀಡಲು ನಿರ್ಧಾರವಾದಂತಾಗಿದ್ದು, ಶನಿವಾರ ಸಂಜೆ ರಾಜಭವನದಲ್ಲಿ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಇನ್ನೊಂದೆಡೆ ಜೆಡಿಎಸ್‌ ಕಾದು ನೋಡುವ ತಂತ್ರದ ಮೊರೆ ಹೋಗಿದ್ದು, ಸದ್ಯದ ಮಟ್ಟಿಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.

ಸದ್ಯದ ಮಾಹಿತಿಯಂತೆ ರಮೇಶ್‌ ಜಾರಕಿಹೊಳಿ ಕೈಬಿಡಲು ನಿರ್ಧರಿಸಿದ್ದರೂ, ನಾಯಕ ಸಮುದಾಯಕ್ಕೆ ಅನ್ಯಾಯವಾಗದಂತೆ ಬೆಳಗಾವಿಯ ರಾಜಕೀಯದಲ್ಲೂ ಹಿನ್ನಡೆಯಾಗದಂತೆ ತಡೆಯಲು ಅವರ ಸಹೋದರ ಸತೀಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲು ನಿರ್ಧರಿಸಿದಂತಿದೆ. ಇನ್ನೊಂದೆಡೆ ಆರ್‌. ಶಂಕರ್‌ ಅವರನ್ನು ಸಂಪುಟದಿಂದ ಕೈಬಿಟ್ಟರೂ ಕುರುಬ ಸಮುದಾಯಕ್ಕೆ ಹಿನ್ನಡೆಯಾಗದಂತೆ ಎಸ್‌.ಎಸ್‌. ಶಿವಳ್ಳಿ ಹಾಗೂ ಎಂಟಿಬಿ ನಾಗರಾಜ್‌ ಇಬ್ಬರಿಗೂ ಸಚಿವ ಸ್ಥಾನ ನೀಡಲು ತೀರ್ಮಾನವಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯಕಾಂಗ್ರೆಸ್‌ ಉಸ್ತುವಾರಿಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಚಿವ ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಲ್ಲಿ ಶುಕ್ರವಾರ ತಡರಾತ್ರಿವರೆಗೆ ತೀವ್ರ ಕಸರತ್ತು ನಡೆಸಿ ಅಂತಿಮವಾಗಿ ಒಂದು ಪಟ್ಟಿ ಸಿದಟಛಿಪಡಿಸಿದ್ದಾರೆ.

ಉಳಿದಂತೆ ಪರಿಶಿಷ್ಟ ಜಾತಿ ಎಡಗೈ ಸಮುದಾಯದಿಂದ ಆರ್‌.ಬಿ.ತಿಮ್ಮಾಪುರ ಇಲ್ಲವೇ ರೂಪಾ ಶಶಿಧರ್‌, ಪರಿಶಿಷ್ಟ ಪಂಗಡದ ಕೋಟಾದಡಿ ಪಿ.ಟಿ.ಪರಮೇಶ್ವರ ನಾಯ್ಕ ಅಥವಾ ತುಕಾರಾಂ, ಅಲ್ಪಸಂಖ್ಯಾತ ಸಮುದಾಯದಡಿ ರಹೀಂ ಖಾನ್‌ ಇಲ್ಲವೇ ತನ್ವೀರ್‌ ಸೇಠ್ ಅಥವಾ ರೋಷನ್‌ ಬೇಗ್‌ ಅವರಿಗೆ ಸಚಿವ ಸ್ಥಾನ ಒಲಿಯುವ ನಿರೀಕ್ಷೆ ಇದೆ. ಲಿಂಗಾಯತರ ಕೋಟಾದಡಿ ಬಿ.ಸಿ.ಪಾಟೀಲ್‌,ಎಂ.ಬಿ.ಪಾಟೀಲ್‌, ಸಂಗಮೇಶ್‌ ಅವರ ಪೈಕಿ ಕೆಲವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಜಾತಿ ಹಾಗೂ ಜಿಲ್ಲಾ ಪ್ರಾತಿನಿಧ್ಯದ ಲೆಕ್ಕಾಚಾರದಲ್ಲೇ ಸಂಪುಟ ಪುನಾರಚನೆಯ ಸಂಭಾವ್ಯರ ಪಟ್ಟಿ ಸಿದಟಛಿಪಡಿಸಲಾಗಿದ್ದು,ಅಂತಿಮ ಕ್ಷಣದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. 

ಕಾದು ನೋಡುವ ತಂತ್ರ
ಈ ಎಲ್ಲಾ ವಿದ್ಯಮಾನದ ನಡುವೆ ಜೆಡಿಎಸ್‌ಕಾದು ನೋಡುವ ತಂತ್ರದ ಮೊರೆ ಹೋಗಿದೆ. ಕಾಂಗ್ರೆಸ್‌ನ ಪಾಲಿನ ಸಚಿವ ಸ್ಥಾನ ಭರ್ತಿಗೆ ಸಂಬಂಧಪಟ್ಟಂತೆ ರಾಜ್ಯ ಕಾಂಗ್ರೆಸ್‌ ನಾಯಕರು ಬಿರುಸಿನ ಚಟುವಟಿಕೆಯಲ್ಲಿ ನಿರತರಾಗಿದ್ದರೂ, ಜೆಡಿಎಸ್‌ನಲ್ಲಿ ಹೆಚ್ಚಿನ ಉತ್ಸಾಹ ಕಂಡುಬರಲಿಲ್ಲ. ಮುಂದೆ “ಆಪರೇಷನ್‌ ಕಮಲ’ ಪ್ರಯತ್ನ ನಡೆದರೆ ಆ ಸಂದರ್ಭದಲ್ಲಿ ಶಾಸಕರನ್ನು ಸೆಳೆಯಲು ಎರಡು ಸಚಿವ ಸ್ಥಾನವನ್ನು ಭರ್ತಿ ಮಾಡದೆ ಹಾಗೇ ಉಳಿಸಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ. 

Advertisement

ಜಯಮಾಲಾ ಸೇಫ್
ಸಚಿವೆ ಜಯಮಾಲಾ ಅವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಚರ್ಚೆಯಾದರೂ ಕೆ.ಸಿ. ವೇಣುಗೋಪಾಲ್‌ ಅವರ ಪರವಾಗಿದ್ದ ಪರಿಣಾಮವಾಗಿ ಸಂಪುಟದಲ್ಲೇ ಮುಂದುವರಿಯುವ ಸಾಧ್ಯತೆ ಇದೆ. ವೆಂಕಟರಮಣಪ್ಪ ಅವರನ್ನು ಕೈಬಿಡುವ ಚಿಂತನೆಯಿದ್ದರೂ ಭೋವಿ ಸಮುದಾಯಕ್ಕೆ ಪ್ರಾತಿನಿಧ್ಯ ತಪ್ಪುವ ಲೆಕ್ಕಾಚಾರದಿಂದ ಅವರನ್ನು ಸಂಪುಟದಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ.
ಇನ್ನು ಉಪ್ಪಾರ ಸಮುದಾಯದ ಸಿ.ಪುಟ್ಟರಂಗಶೆಟ್ಟಿ ಅವರನ್ನು ಕೈಬಿಡುವ ವಿಚಾರದಲ್ಲೂ ಹಿಂದುಳಿದ ವರ್ಗಗಳನ್ನು ಕಡೆಗಣಿಸಿದ
ನಿಂದನೆಗೆ ಗುರಿಯಾಗುವ ಭೀತಿ ಹಿನ್ನೆಲೆಯಲ್ಲಿ ಆ ಚಿಂತನೆಯನ್ನು ಕೈಬಿಡಲಾಗಿದೆ ಎಂದು ಹೇಳಲಾಗಿದೆ. ಒಂದೊಮ್ಮೆ ಎಂ.ಬಿ. 
ಪಾಟೀಲ್‌, ಶಾಮನೂರು ಶಿವಶಂಕರಪ್ಪ, ಬಿ.ಸಿ.ಪಾಟೀಲ್‌ ಅವರಿಗೆ ಸಚಿವ ಸ್ಥಾನ ಸಿಗದಿದ್ದರೆ, ರಮೇಶ್‌ ಜಾರಕಿಹೊಳಿ 
ಯವರನ್ನು ಸಂಪುಟದಿಂದ ಕೈಬಿಟ್ಟರೆ ಮುಂದೆ ಮೈತ್ರಿ ಸರ್ಕಾರಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಬಿಜೆಪಿ ನಾಯಕರು ಅವರ
ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ರಮೇಶ್‌ ಜಾರಕಿಹೊಳಿ
ಬಂಡಾಯ ನಾಯಕನೆಂದು ಬಿಂಬಿತರಾಗಿದ್ದಾರೆ. ಹಲವು ಸಂಪುಟ ಸಭೆಗೆ ಗೈರಾಗಿದ್ದು. ಬಿಜೆಪಿ ನಾಯಕ ಸಂಪರ್ಕದಲ್ಲಿರುವ ಮೂಲಕ ಪದೇ ಪದೇ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು. ಸಚಿವ ಡಿ.ಕೆ. ಶಿವಕುಮಾರ್‌, ಶಾಸಕ ಲಕ್ಷ್ಮೀ ಹೆಬ್ಟಾಳ್ಕರ್‌ ಅವರೊಂದಿಗೆ ಸಂಘರ್ಷಕ್ಕಿಳಿದಿದ್ದು.

ಆರ್‌. ಶಂಕರ್‌
ಅದಕ್ಷತೆ ಆರೋಪ. ನಿಷ್ಕ್ರಿಯ ಕಾರ್ಯ ನಿರ್ವಹಣೆ. ಅನುಭವದ ಕೊರತೆ. ಕುರುಬ ಸಮುದಾಯ ಪ್ರಭಾವಿ ನಾಯಕರಿಗೆ ಸ್ಥಾನ ಕಲ್ಪಿಸಲು ಇವರನ್ನು ಬದಲಿಸಲು ಹೈಕಮಾಂಡ್‌ ನಿರ್ಧರಿಸಿದೆ.

ಜಾತಿ- ಜಿಲ್ಲಾ ಪ್ರಾತಿನಿಧ್ಯ ಲೆಕ್ಕಾಚಾರ
ಸತೀಶ್‌ ಜಾರಕಿಹೊಳಿ: ವಾಲ್ಮೀಕಿ ಸಮುದಾಯ ಹಾಗೂ ಬೆಳಗಾವಿ ಜಿಲ್ಲಾ ಪ್ರಾತಿನಿಧ್ಯ (ಸಚಿವ ರಮೇಶ್‌ ಜಾರಕಿಹೊಳಿ ಕೈ ಬಿಡುವ ಹಿನ್ನೆಲೆ ಹಾಗೂ ಸಹೋದರ)
ಆರ್‌.ಬಿ. ತಿಮ್ಮಾಪುರ: ಪರಿಶಿಷ್ಟ ಜಾತಿಯ ಎಡಗೈ ಸಮುದಾಯ, ಬಾಗಲಕೋಟೆ ಜಿಲ್ಲಾ ಪ್ರಾತಿನಿಧ್ಯ
ರೂಪಾ ಶಶಿಧರ್‌: ಪರಿಶಿಷ್ಟ ಜಾತಿಯ ಎಡಗೈ ಸಮುದಾಯ, ಕೋಲಾರ ಜಿಲ್ಲಾ ಪ್ರಾತಿನಿಧ್ಯ
ಎಂಟಿಬಿ ನಾಗರಾಜ್‌: ಕುರುಬ ಸಮುದಾಯ (ಆರ್‌. ಶಂಕರ್‌ ಕೈಬಿಡುವ ಹಿನ್ನಲೆ), ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಾತಿನಿಧ್ಯ
ಸಿ.ಎಸ್‌.ಶಿವಳ್ಳಿ– ಕುರುಬ ಸಮುದಾಯ (ಆರ್‌.ಶಂಕರ್‌ ಕೈಬಿಡುವ ಹಿನ್ನಲೆ), ಧಾರವಾಡ ಜಿಲ್ಲಾ ಪ್ರಾತಿನಿಧ್ಯ
ಬಿ.ಸಿ. ಪಾಟೀಲ್‌: ಲಿಂಗಾಯಿತ ಸಮುದಾಯ ಹಾಗೂ ಹಾವೇರಿ ಜಿಲ್ಲಾ ಪ್ರಾತಿನಿಧ್ಯ (ಆರ್‌. ಶಂಕರ್‌ ಕೈಬಿಡುವ ಹಿನ್ನೆಲೆ )
ಎಂ.ಬಿ. ಪಾಟೀಲ್‌: ಲಿಂಗಾಯಿತ ಸಮುದಾಯ 
ರಹೀಂ ಖಾನ್‌: ಅಲ್ಪಸಂಖ್ಯಾತ ಪ್ರಾತಿನಿಧ್ಯ
ತುಕಾರಾಂ: ವಾಲ್ಮೀಕಿ ಸಮುದಾಯ ಹಾಗೂ ಬಳ್ಳಾರಿ ಜಿಲ್ಲಾ ಪ್ರಾತಿನಿಧ್ಯ

Advertisement

Udayavani is now on Telegram. Click here to join our channel and stay updated with the latest news.

Next