Advertisement

ರಾಜ್ಯ ಕಾಂಗ್ರೆಸ್‌ ನಾಯಕರ ಮೇಲೆ ಹೈಕಮಾಂಡ್‌ ಕಣ್ಣು

09:55 AM Nov 25, 2019 | mahesh |

ಬೆಂಗಳೂರು: ರಾಜ್ಯದ ಹದಿನೈದು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯತ್ತ ಕಾಂಗ್ರೆಸ್‌ ಹೈಕಮಾಂಡ್‌ ನಿಗಾ ವಹಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಹಿತ ಹಲವು ನಾಯಕರ ಕಾರ್ಯವೈಖರಿ ಮೇಲೆ ಕಣ್ಣಿಟ್ಟಿದೆ.

Advertisement

ಕಾಂಗ್ರೆಸ್‌ ನಾಯಕರು ಶ್ರಮ ಹಾಕಿದರೆ ಕನಿಷ್ಠ ಎಂಟು ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ. ಆದರೆ ಸಂಪನ್ಮೂಲ ಹಾಗೂ ಸಮನ್ವಯ ಕೊರತೆ, ನಾಯಕರ ನಡುವಿನ ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಹಿನ್ನಡೆಯುಂಟಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹೈಕಮಾಂಡ್‌ ರಾಜ್ಯ ನಾಯಕರ ಚಲನವಲನ ಗಮನಿಸುತ್ತಿದೆ.

ಬಿಜೆಪಿಗೆ ಪ್ರತ್ಯಕ್ಷ, ಪರೋಕ್ಷ ಸಹಕಾರವಾಗುವಂತೆ ಕೆಲವರು ಕೆಲಸ ಮಾಡುತ್ತಿರುವ ಬಗ್ಗೆಯೂ ದೂರುಗಳು ಹೋಗಿದ್ದು, ಉಪ ಚುನಾವಣೆ ಫ‌ಲಿತಾಂಶವನ್ನು ಗಂಭೀರವಾಗಿ ತೆಗೆದು ಕೊಳ್ಳಲಾಗುವುದು ಎಂಬ ಸಂದೇಶ ರವಾನಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ರಾಜ್ಯ ನಾಯಕರು ಸೂಕ್ತ ಕಾರ್ಯತಂತ್ರದೊಂದಿಗೆ ಕೆಲಸ ಮಾಡಿದರೆ ಗೋಕಾಕ್‌, ಅಥಣಿ, ಕಾಗವಾಡ, ಹಿರೇಕೆರೂರು, ರಾಣೆಬೆನ್ನೂರು, ಹುಣಸೂರು, ಕೆ.ಆರ್‌. ಪೇಟೆ, ಶಿವಾಜಿನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಬಹುದು. ಯಶವಂತಪುರ, ಚಿಕ್ಕ ಬಳ್ಳಾಪುರ, ಮಹಾಲಕ್ಷ್ಮಿಲೇಔಟ್‌ ಕ್ಷೇತ್ರಗಳಲ್ಲೂ ಮೇಲುಗೈ ಸಾಧಿಸಲು ಸಾಕಷ್ಟು ಅವಕಾಶ ವಿದೆ ಎಂಬ ಲೆಕ್ಕಾಚಾರ ಪಕ್ಷದ್ದು. ಆದರೆ ಪ್ರತಿ ಯೊಬ್ಬ ನಾಯಕರು ವೈಯಕ್ತಿಕ ಲೆಕ್ಕಾಚಾರ ಇಟ್ಟುಕೊಂಡರೆ ಕಾಂಗ್ರೆಸ್‌ ಮೂರ್‍ನಾಲ್ಕು ಸ್ಥಾನ ಗೆಲ್ಲುವುದು ಕಷ್ಟವಾಗಬಹುದು ಎಂಬ ಮಾಹಿತಿ ಹೈಕಮಾಂಡ್‌ಗೆ ರವಾನೆಯಾಗಿದೆ.

ಬಿಎಸ್‌ವೈಗೂ ಆತಂಕ
ಗೋಕಾಕ್‌, ಹುಣಸೂರು, ಕೆ.ಆರ್‌. ಪೇಟೆ, ಚಿಕ್ಕಬಳ್ಳಾಪುರ, ಯಶವಂತಪುರ, ರಾಣೆಬೆನ್ನೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ತೀವ್ರ ಪೈಪೋಟಿಯಿದೆ ಎಂಬ ಮಾಹಿತಿ ಸಿಎಂ ಯಡಿಯೂರಪ್ಪ
ಅವರನ್ನು ಆತಂಕಕ್ಕೆ ಈಡು ಮಾಡಿದ್ದು , ಸಚಿವರ ಸಭೆ ನಡೆಸಿ ಈ ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನ ಹರಿಸಿ ಎಂದು ಸೂಚನೆ ನೀಡಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಮತ ಸೆಳೆಯಬಲ್ಲ ನಾಯಕರಿದ್ದರೆ ಅವರನ್ನು ಪಕ್ಷಕ್ಕೆ ಕರೆಯುವಂತೆಯೂ ಸೂಚಿಸಿದ್ದಾರೆ ಎನ್ನಲಾಗಿದೆ.

Advertisement

ಬೇಗ್‌ ಒಪ್ಪಂದ ?
ಶಿವಾಜಿನಗರದಲ್ಲಿ ಸ್ಪರ್ಧೆ ಮಾಡದ ಮಾಜಿ ಸಚಿವ ರೋಶನ್‌ ಬೇಗ್‌ ಬೆಂಬಲಕ್ಕೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪ್ರಯತ್ನಿಸಿದರೂ ಸಫ‌ಲವಾಗಿಲ್ಲ. ಅಂತಿಮವಾಗಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಒಪ್ಪಂದ ವಾಗಿದೆ. ಮುಂದಿನ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಭರವಸೆ ಜತೆಗೆ ಕಾಂಗ್ರೆಸ್‌ನ ಪಾಲಿಕೆ ಸದಸ್ಯರು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ. ಬೇಗ್‌ ತಮ್ಮ ಮೇಲಿನ ಆರೋಪ ಪ್ರಕರಣ ಖುಲಾಸೆ ಮಾಡಿಕೊಂಡ ಅನಂತರ ಅವರು ಅಥವಾ ಅವರ ಪುತ್ರನಿಗೆ ವಿಧಾನಪರಿಷತ್‌ ಸ್ಥಾನ ನೀಡುವ ಭರ ವಸೆಯೂ ದೊರೆತಿದೆ ಎಂದು ಹೇಳಲಾಗಿದೆ.

- ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next