Advertisement

ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ತಾಯಿ- ಮಗು ಇಬ್ಬರಿಗೂ ಅಪಾಯ

12:26 PM Dec 02, 2020 | Sriram |

ಪ್ರತೀ ವಿವಾಹಿತ ಮಹಿಳೆಯು ತುಂಬ ಕಾತರ ಮತ್ತು ನಿರೀಕ್ಷೆಗಳೊಂದಿಗೆ ಎದುರುನೋಡುವ ಸಮಯ ಗರ್ಭಧಾರಣೆಯದು. ಅದು ತನಗೆ ಜನಿಸಲಿರುವ ಶಿಶುವಿನ ಬಗೆಗೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟುವ ಕಾಲ. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಕೆಲವು ಸ್ತ್ರೀಯರಿಗೆ ಈ ಅವಧಿ ಕಷ್ಟದಾಯಕವೂ ಆಗುವುದುಂಟು. ಇಂತಹ ಅನಾರೋಗ್ಯಗಳಲ್ಲಿ ಒಂದು ಅಧಿಕ ರಕ್ತದೊತ್ತಡ.ಗರ್ಭಧಾರಣೆಯ ಅವಧಿಯಲ್ಲಿ ಅಧಿಕ ರಕ್ತದೊತ್ತಡ ಎಂದರೇನು, ಅದು ಹೇಗೆ ಉಂಟಾಗುತ್ತದೆ, ಅದರಿಂದ ಸಂಭವಿಸಬಹುದಾದ ದುಷ್ಪರಿಣಾಮಗಳು ಯಾವುವು ಮತ್ತು ಪರಿಹಾರೋಪಾಯಗಳು ಏನು ಎಂಬುದನ್ನು ವಿವರಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

Advertisement

ಎಲ್ಲ ಗರ್ಭಿಣಿ ಸ್ತ್ರೀಯರನ್ನು ಗಣನೆಗೆ ತೆಗೆದುಕೊಂಡರೆ, ಶೇ.10ರಷ್ಟು ಮಂದಿಯಲ್ಲಿ ಅಧಿಕ ರಕ್ತದೊತ್ತಡವು ಸಂಕೀರ್ಣ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿರುತ್ತದೆ. ತಾಯಂದಿರ ಮರಣ ಪ್ರಕರಣಗಳಲ್ಲಿ ಸರಿಸುಮಾರು ಶೇ.17ರಷ್ಟು ಇದೇ ಸಮಸ್ಯೆಯಿಂದ ಉಂಟಾಗಿರುತ್ತವೆ, ಪ್ರಸವ ಸಂದರ್ಭದಲ್ಲಿ ಸಂಭವಿಸುವ ಮರಣ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುವ ತೊಂದರೆಗಳಲ್ಲಿ ತಡೆಯಲಾಗದ ರಕ್ತಸ್ರಾವ ಮೊದಲ ಸ್ಥಾನದಲ್ಲಿದ್ದರೆ ಆ ಬಳಿಕದ ಸ್ಥಾನ ಅಧಿಕ ರಕ್ತದೊತ್ತಡದ್ದಾಗಿದೆ. ಏಶ್ಯಾ ಮತ್ತು ಆಫ್ರಿಕ ಪ್ರದೇಶಗಳನ್ನು ಗಮನಿಸಿದರೆ, ಪ್ರತೀ ಹತ್ತರಲ್ಲಿ ಒಂದು ಪ್ರಸೂತಿ ಸಂದರ್ಭ ಮೃತ್ಯು ಪ್ರಕರಣವು ಅಧಿಕ ರಕ್ತದೊತ್ತಡಕ್ಕೆ ಸಂಬಂಧ ಹೊಂದಿರುತ್ತದೆ. ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡವು ದೇಹದ ಮೇಲೆ ಉಂಟುಮಾಡುವ ಪರಿಣಾಮಗಳು ಇತರ ಸಹಜ ಸ್ಥಿತಿಗಳಿಗಿಂತ ಬಹಳ ಹೆಚ್ಚು. ಇದರಿಂದಾಗಿ ಗರ್ಭಿಣಿ ಮತ್ತು ಆಕೆಯ ಗರ್ಭದಲ್ಲಿರುವ ಭ್ರೂಣ- ಇಬ್ಬರೂ ಸಂಕೀರ್ಣ ತೊಂದರೆಗಳಿಗೆ ಒಳಗಾಗುತ್ತಾರೆ.

ಗರ್ಭಾವಸ್ಥೆಯ ಅವಧಿಯಲ್ಲಿ ಸಹಜ ರಕ್ತದೊತ್ತಡ ಎಷ್ಟು? ಏನನ್ನು ನಿರೀಕ್ಷಿಸಬೇಕು?
ಗರ್ಭಾವಸ್ಥೆಯಲ್ಲಿ ಆಯಾ ಮಹಿಳೆಯ “ಸಹಜ’ ರಕ್ತ ದೊತ್ತಡ ಎಷ್ಟು ಎಂಬುದನ್ನು ನಿರ್ಧರಿಸುವುದಕ್ಕೆ ವೈದ್ಯರು ಆಯಾ ಮಹಿಳೆ ಗರ್ಭ ಧರಿಸಿದ ಬಳಿಕ ಮೊದಲ ಬಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ಆಕೆಯ ಮೂಲ ರಕ್ತ ದೊತ್ತಡವನ್ನು ಅಳೆದು ದಾಖಲಿಸುತ್ತಾರೆ. ಆ ಬಳಿಕ ವೈದ್ಯರು ಪ್ರತೀ ಭೇಟಿಯ ಸಂದರ್ಭದಲ್ಲಿಯೂ ಗರ್ಭಿಣಿಯ ರಕ್ತ ದೊತ್ತಡವನ್ನು ಅಳೆಯುತ್ತಾರೆ. ಸಹಜ ರಕ್ತದೊತ್ತಡವು 120/80 ಎಂಎಂಎಚ್‌ಜಿಯಷ್ಟು ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ.

ಗರ್ಭಾವಸ್ಥೆಯ ಅವಧಿಯಲ್ಲಿ ಎಷ್ಟು ರಕ್ತದೊತ್ತಡವನ್ನು ಅಧಿಕ ರಕ್ತದೊತ್ತಡ ಎಂದು  ಪರಿಗಣಿಸಲಾಗುತ್ತದೆ? ಯಾವಾಗ ಕಾಳಜಿ ವಹಿಸಬೇಕು?
ಗರ್ಭಾವಸ್ಥೆಯಲ್ಲಿ ಸಿಸ್ಟೋಲಿಕ್‌ ರಕ್ತದೊತ್ತಡವು 140 ಎಂಎಂಎಚ್‌ಜಿ ಅಥವಾ ಅದಕ್ಕಿಂತ ಹೆಚ್ಚು ಮತ್ತು ಡಯಾಸ್ಟೋಲಿಕ್‌ ರಕ್ತದೊತ್ತಡವು 90 ಎಂಎಂಎಚ್‌ಜಿ ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಅದನ್ನು ಅಧಿಕ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ.

ಗರ್ಭ ಧರಿಸಿದ ಆರಂಭದ ಅವಧಿಯಲ್ಲಿ, ಸಾಮಾನ್ಯವಾಗಿ 5 ವಾರಗಳಿಂದ ತೊಡಗಿ ದ್ವಿತೀಯ ತ್ತೈಮಾಸಿಕದ ಮಧ್ಯ ಭಾಗದ ವರೆಗೆ ಗರ್ಭಿಣಿಯ ರಕ್ತದೊತ್ತಡವು ಇಳಿಕೆಯಾಗಬಹುದು. ಗರ್ಭ ಧಾರಣೆಯಿಂದಾಗಿ ಬಿಡುಗಡೆಗೊಳ್ಳುವ ಹಾರ್ಮೋನ್‌ಗಳು ರಕ್ತನಾಳಗಳು ಹಿಗ್ಗಲು ಕಾರಣವಾಗುವುದರ ಪರಿಣಾಮವಿದು. ಇದರಿಂದಾಗಿ ರಕ್ತನಾಳಗಳ ಒಳಗೆ ರಕ್ತದ ಹರಿವಿಗೆ ಸಾಮಾನ್ಯ ಸ್ಥಿತಿಯಷ್ಟು ಪ್ರತಿರೋಧ ಇರುವುದಿಲ್ಲ.

Advertisement

20 ವಾರಗಳ ಬಳಿಕ, ಗರ್ಭ ಧಾರಣೆಯ ಅವಧಿ ಮುಂದುವರಿದಂತೆ ಕೆಲವು ಮಹಿಳೆಯರಲ್ಲಿ ಅಧಿಕ ರಕ್ತ ದೊತ್ತಡ ಉಂಟಾಗುತ್ತದೆ. ಇದರ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ತೃತೀಯ ತ್ತೈಮಾಸಿಕದಲ್ಲಿ.ಆದರೆ ಕೆಲವು ಗರ್ಭಿಣಿಯರಲ್ಲಿ, ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಅಧಿಕ ರಕ್ತದೊತ್ತಡದ ಪರಿ ಣಾಮಗಳು ಅದು ನಿಜವಾಗಿ ಅಧಿಕ ರಕ್ತದೊತ್ತಡ ಕಾಣಿಸಿ ಕೊಳ್ಳುವುದಕ್ಕೆ ಮುಂಚಿತವಾಗಿಯೇ ಅನುಭವಕ್ಕೆ ಬರ ಬಹುದು. ಇವುಗಳಲ್ಲಿ ಬಹಳ ಮುಖ್ಯವಾದದ್ದು ಮಗುವಿನ ಕುಂಠಿತ ಬೆಳವಣಿಗೆ. ಕೆಲವೊಮ್ಮೆ ರಕ್ತದೊತ್ತಡ ಅದುವರೆಗೆ ಸರಿಯಾಗಿದ್ದು ಏಕಾಏಕಿಯಾಗಿ ಫಿಟ್ಸ್‌ ಅಥವಾ ರಕ್ತಸ್ರಾವ, ಶಿಶು ಮರಣ ಇವೇ ಮೊದಲಾದ ತೊಂದರೆಗಳು ಕಾಣಿಸಿ ಕೊಳ್ಳುವುದರ ಮೂಲಕ ರಕ್ತದೊತ್ತಡ ಪ್ರತ್ಯಕ್ಷವಾಗಬಹುದು.

ಗರ್ಭಾವಸ್ಥೆಯ ಅವಧಿಯಲ್ಲಿ  ಅಧಿಕ ರಕ್ತದೊತ್ತಡ: ವಿವಿಧ ಸ್ವರೂಪಗಳು ಯಾವುವು?
ಗರ್ಭಾವಸ್ಥೆಯ ಅವಧಿಯಲ್ಲಿ ಅಧಿಕ ರಕ್ತದೊತ್ತಡವು ಹಲವು ಸ್ವರೂಪಗಳಲ್ಲಿ ಕಂಡುಬರುತ್ತದೆ. ಈ ವಿಧಗಳು ದೇಹದ ಮೇಲೆ ಬೀರುವ ಪರಿಣಾಮಗಳು ಕೂಡ ಬದಲಾಗುತ್ತವೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಅಧಿಕ ರಕ್ತದೊತ್ತಡದ ವಿಧಗಳು ಎಂದರೆ:- ಗರ್ಭಾವಧಿ ಅಧಿಕ ರಕ್ತದೊತ್ತಡ: ಅಧಿಕ ರಕ್ತದೊತ್ತಡವು ಗರ್ಭ ಧಾರಣೆಯ ದ್ವಿತೀಯ ಅವಧಿ (20 ವಾರಗಳ ಬಳಿಕ) ಗಮನಕ್ಕೆ ಬರುತ್ತದೆ; ಆದರೆ ಪ್ರಿಎಕ್ಲಾಂಪ್ಸಿಯಾ (ಕೆಳಗೆ ವಿವರಿಸಲಾಗಿದೆ)ದ ಯಾವುದೇ ಲಕ್ಷಣಗಳು ಇರುವುದಿಲ್ಲ. ಸಾಮಾನ್ಯವಾಗಿ ಇದು ಪ್ರಸವದ ಬಳಿಕ ಸರಿಹೋಗುತ್ತದೆ. ಇದು 30 ವಾರಗಳಿಗಿಂತ ಮುಂಚಿತವಾಗಿ ಪತ್ತೆಯಾದರೆ ಅದು ಪ್ರಿಎಕ್ಲಾಂಪ್ಸಿಯಾ ಆಗಿ ಪರಿವರ್ತನೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

– ಪ್ರಿಎಕ್ಲಾಂಪ್ಸಿಯಾ: ಗರ್ಭ ಧರಿಸಿದ 20 ವಾರಗಳ ಬಳಿಕ ಅಧಿಕ ರಕ್ತದೊತ್ತಡವು ಉಂಟಾದರೆ ಪ್ರಿಎಕ್ಲಾಂಪ್ಸಿಯಾ ಆಗಿ ಪರಿವರ್ತನೆ ಹೊಂದುತ್ತದೆ, ಇದು ಮೂತ್ರದಲ್ಲಿ ಅಧಿಕ (300 ಗ್ರಾಂ/ಲೀಟರ್‌) ಪ್ರೊಟೀನಿನ ಅಂಶ ಅಥವಾ ಮೂತ್ರಪಿಂಡಗಳು, ಪಿತ್ತಕೋಶ, ರಕ್ತ ಮತ್ತು ಮೆದುಳು ಸೇರಿದಂತೆ ಇತರ ಅಂಗಾಂಗಗಳ ಹಾನಿಯ ಚಿಹ್ನೆಗಳೊಂದಿಗೆ ಗುರುತಿಸಬಹುದು. ಪ್ರಿಎಕ್ಲಾಂಪ್ಸಿಯಾಕ್ಕೆ ಸಕಾಲದಲ್ಲಿ ಚಿಕಿತ್ಸೆ ಒದಗಿಸದಿದ್ದರೆ ತಾಯಿ ಮತ್ತು ಭ್ರೂಣ ಇಬ್ಬರಿಗೂ ಸಾವು ಸಹಿತ ಮೂಛೆ (ಎಕ್ಲಾಂಪ್ಸಿಯಾ)ದಂತಹ ಗಂಭೀರ ತೊಂದರೆಗಳು ಉಂಟಾಗುವ ಅಪಾಯವಿದೆ.

– ದೀರ್ಘ‌ಕಾಲಿಕ ಅಧಿಕ ರಕ್ತದೊತ್ತಡ: ಮಹಿಳೆ ಗರ್ಭ ಧರಿಸುವುದಕ್ಕೂ ಮುನ್ನವೇ ಅಧಿಕ ರಕ್ತದೊತ್ತಡ ಇದ್ದರೆ ಅದನ್ನು ದೀರ್ಘ‌ಕಾಲಿಕ ಅಧಿಕ ರಕ್ತದೊತ್ತಡ ಎಂಬುದಾಗಿ ಗುರುತಿಸಲಾಗುತ್ತದೆ ಮತ್ತು ಇದನ್ನು ರಕ್ತದೊತ್ತಡ ನಿಯಂತ್ರಕ ಔಷಧಗಳ ಮೂಲಕ ನಿಭಾಯಿಸಲಾಗುತ್ತದೆ. ಗರ್ಭ ಧಾರಣೆಯ ಬಳಿಕ 20 ವಾರಗಳ ಅವಧಿಯಲ್ಲಿ ಉಂಟಾಗುವ ಮತ್ತು ಅಥವಾ ಪ್ರಸವಾನಂತರ 3 ತಿಂಗಳುಗಳ ಬಳಿಕವೂ ಇರುವ ಅಧಿಕ ರಕ್ತದೊತ್ತಡವನ್ನು ದೀರ್ಘ‌ಕಾಲಿಕ ಎಂಬುದಾಗಿ ಪರಿಗಣಿಸಲಾಗುತ್ತದೆ.

– ದೀರ್ಘ‌ಕಾಲಿಕ ರಕ್ತದೊತ್ತಡದ ಜತೆಗೆ ಪ್ರಿಎಕ್ಲಾಂಪ್ಸಿಯಾ: ದೀರ್ಘ‌ಕಾಲಿಕ ಅಧಿಕ ರಕ್ತದೊತ್ತಡ (ಗರ್ಭ ಧಾರಣೆಗೂ ಮುನ್ನವೇ) ಹೊಂದಿರುವ ಮಹಿಳೆ ಗರ್ಭ ಧರಿಸಿದ ಬಳಿಕ ಕಂಡುಬರುವ ಪ್ರಿಎಕ್ಲಾಂಪ್ಸಿಯಾ.

ಗರ್ಭಾವಸ್ಥೆಯ ಅವಧಿಯಲ್ಲಿ ಅಧಿಕ  ರಕ್ತದೊತ್ತಡವು ಒಂದು ಸಮಸ್ಯೆ ಯಾಕೆ?
ಅಧಿಕ ರಕ್ತದೊತ್ತಡ ಹೊಂದಿರುವ ತಾಯಂದಿರು ಗರ್ಭಧಾರಣೆಗೆ ಮುನ್ನ, ಗರ್ಭಾವಸ್ಥೆಯ ಅವಧಿಯಲ್ಲಿ ಮತ್ತು ಶಿಶುಜನನದ ಬಳಿಕವೂ ಸಂಕೀರ್ಣ ಸಮಸ್ಯೆಗಳಿಗೆ ಒಳಗಾಗುವ ಅಪಾಯ ಹೊಂದಿರುತ್ತಾರೆ.

ಗರ್ಭಧಾರಣೆ ಸಂದರ್ಭದಲ್ಲಿ ಅಧಿಕ ರಕ್ತದೊತ್ತಡವು ತಾಯಿಯ ಆರೋಗ್ಯಕ್ಕೆ ಮಾತ್ರವಲ್ಲದೆ ಶಿಶುವಿನ ಮೇಲೂ ದುಷ್ಪರಿಣಾಮಗಳನ್ನು ಬೀರುವ ಅಪಾಯವಿದೆ.
1. ಗರ್ಭಸ್ಥ ಶಿಶುವಿನ ಬೆಳವಣಿಗೆಗೆ ಅಡ್ಡಿ: ತಾಯಿಮಾಸು ಅಥವಾ ಪ್ಲಾಸೆಂಟಾದಲ್ಲಿ ರಕ್ತದ ಹರಿವಿನ ಪ್ರಮಾಣ ಕಡಿಮೆಯಾಗುವುದರಿಂದ ಭ್ರೂಣಕ್ಕೆ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆ ಕಡಿಮೆಯಾಗಬಹುದು. ಇದರ ಪರಿಣಾಮವಾಗಿ ಭ್ರೂಣದ ಬೆಳವಣಿಗೆ ಕುಂದಬಹುದು (ಇಂಟ್ರಾಯೂಟರೈನ್‌ ಗ್ರೋಥ್‌ ರಿಸ್ಟ್ರಿಕ್ಷನ್ಸ್‌), ಶಿಶುವಿನ ಜನನ ಸಂದರ್ಭ ತೂಕ ಕಡಿಮೆಯಾಗಬಹುದು ಅಥವಾ ಅವಧಿಪೂರ್ವ ಹೆರಿಗೆಯಾಗಬಹುದು. ಅವಧಿ ಪೂರ್ವ ಜನನವು ಶಿಶುವಿಗೆ ಉಸಿರಾಟ ಸಮಸ್ಯೆ, ಸೋಂಕು ಮತ್ತು ಇತರ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಬಹುದು.

2. ತಾಯಿಮಾಸಿನ ಅಕಾಲಿಕ ಬೇರ್ಪಡೆ (ಅಬ್ರಪ್ಟಿವ್‌ ಪ್ಲಾಸೆಂಟಾ): ಪ್ರಿಎಕ್ಲಾಂಪ್ಸಿಯಾವು ಈ ಸ್ಥಿತಿ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಇದರಲ್ಲಿ ಪ್ರಸೂತಿಗೆ ಮುನ್ನವೇ ತಾಯಿಮಾಸು (ಪ್ಲಾಸೆಂಟಾ) ಗರ್ಭಕೋಶದ ಒಳಭಿತ್ತಿಯಿಂದ ಪ್ರತ್ಯೇಕಗೊಳ್ಳುತ್ತದೆ. ಇದರಿಂದಾಗಿ ತೀವ್ರ ರಕ್ತಸ್ರಾವ ಉಂಟಾಗಿ ಅದು ತಾಯಿ ಮತ್ತು ಮಗು ಇಬ್ಬರಿಗೂ ಪ್ರಾಣಾಪಾಯವನ್ನು ಉಂಟು ಮಾಡಬಹುದು.

3. ಎಕ್ಲಾಂಪ್ಸಿಯಾ : ಅಧಿಕ ರಕ್ತದೊತ್ತಡವು ಮಿದುಳಿನ ಮೇಲೆ ಬೀರುವ ದುಷ್ಪರಿಣಾಮದಿಂದಾಗಿ ಗರ್ಭಿಣಿಗೆ ನಡುಕ ಉಂಟಾಗಬಹುದು, ಮೂಛೆì ತಪ್ಪಬಹುದು ಅಥವಾ ಕೋಮಾ ಸ್ಥಿತಿಯೂ ಉಂಟಾಗಬಹುದು.

4. ಇತರ ಅಂಗಾಂಗಗಳಿಗೆ ಹಾನಿ: ಅಧಿಕ ರಕ್ತದೊತ್ತಡವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫ‌ಲವಾದರೆ ಪರಿಣಾಮವಾಗಿ ಕುರುಡು, ಮೂತ್ರಪಿಂಡ ವೈಫ‌ಲ್ಯ, ಹೃದಯಾಘಾತಗಳು ಉಂಟಾಗಬಹುದಾಗಿದ್ದು, ಇದು ಪ್ರಾಣಾಪಾಯಕಾರಿಯೂ ಆಗಿದೆ.

5. ಅವಧಿಪೂರ್ವ ಹೆರಿಗೆ: ಗರ್ಭಾವಸ್ಥೆಯಲ್ಲಿ ಪತ್ತೆಯಾದ ಅಧಿಕ ರಕ್ತದೊತ್ತಡದಿಂದ ಸಂಭಾವ್ಯ ಮಾರಕ ಸಂಕೀರ್ಣ ಸ್ಥಿತಿಗಳನ್ನು ತಡೆಯುವುದಕ್ಕಾಗಿ ಕೆಲವೊಮ್ಮೆ ಅವಧಿಪೂರ್ವ ಹೆರಿಗೆ ನಡೆಸಬೇಕಾಗಿ ಬರಬಹುದು.

6. ಭವಿಷ್ಯದಲ್ಲಿ ರಕ್ತನಾಳ ಸಂಬಂಧಿ ಹೃದ್ರೋಗಗಳು ಉಂಟಾಗುವ ಸಾಧ್ಯತೆ: ಪ್ರಿಎಕ್ಲಾಂಪ್ಸಿಯಾ ಕಾಣಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಹೃದಯ ಮತ್ತು ರಕ್ತನಾಳ ಸಂಬಂಧಿ ಕಾಯಿಲೆಗಳು ತಲೆದೋರುವ ಅಪಾಯವು ಹೆಚ್ಚಾಗುತ್ತದೆ. ಗರ್ಭಧರಿಸಿದ ಆರಂಭಿಕ ಘಟ್ಟದಲ್ಲಿ ತೀವ್ರ ಪ್ರಿಎಕ್ಲಾಂಪ್ಸಿಯಾ ಕಾಣಿಸಿಕೊಳ್ಳುವುದು ಅಥವಾ ಅದು ಪ್ರತೀ ಬಾರಿ ಗರ್ಭ ಧರಿಸಿದಾಗಲೂ ಉಂಟಾದರೆ ರಕ್ತನಾಳ ಸಂಬಂಧಿ ಹೃದ್ರೋಗಗಳು ಭವಿಷ್ಯದಲ್ಲಿ ಕಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅಧಿಕ ರಕ್ತದೊತ್ತಡವನ್ನು ಕ್ಷಿಪ್ರವಾಗಿ ಪತ್ತೆ ಹಚ್ಚಿ ಸಮರ್ಪಕವಾಗಿ ಚಿಕಿತ್ಸೆಗೊಳಪಡಿಸಿದರೆ ಬಹುತೇಕ ಮಹಿಳೆಯರು ಆರೋಗ್ಯಯುತ ಶಿಶುವಿಗೆ ಜನ್ಮ ನೀಡುವುದು ಸಾಧ್ಯವಿದೆ.

ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡವು ಏಕೆ ಉಂಟಾಗುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಇತರ ಅಧಿಕ ರಕ್ತದೊತ್ತಡ ಪ್ರಕರಣಗಳು ಅಧಿಕ ಉಪ್ಪಿನಂಶ ಸೇವನೆಗೆ ಸಂಬಂಧಪಟ್ಟಿದ್ದರೆ ಗರ್ಭಾವಸ್ಥೆಯಲ್ಲಿ ಹಾಗಿಲ್ಲ. ತಾಯಿಮಾಸು (ಪ್ಲಾಸೆಂಟಾ) ರೂಪುಗೊಳ್ಳುವ ಸಂದರ್ಭದಲ್ಲಿ ಅಸಹಜತೆಗಳನ್ನು ಹೊಂದಿರುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ, ತಾಯಿಮಾಸು ಸರಿಯಾಗಿ ಕಾರ್ಯನಿರ್ವಹಿಸುವುದೂ ಇಲ್ಲ ಎಂದು ನಂಬಲಾಗಿದೆ. ಕಡಿಮೆ ಪೌಷ್ಟಿಕಾಂಶಗಳು, ದೇಹದಲ್ಲಿ ಅಧಿಕ ಕೊಬ್ಬಿನಂಶ ಅಥವಾ ಗರ್ಭಕೋಶಕ್ಕೆ ಅಸಮರ್ಪಕ ರಕ್ತದ ಹರಿವು ಸಂಭವನೀಯ ಕಾರಣಗಳಾಗಿರಬಹುದು ಎಂಬುದಾಗಿ ತಜ್ಞರು ಅಂದಾಜಿಸಿದ್ದಾರೆ. ವಂಶವಾಹಿಯೂ ಪ್ರಧಾನ ಪಾತ್ರ ವಹಿಸಬಹುದಾಗಿದೆ.

ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ  ಉಂಟಾಗುವ ಅಪಾಯ ಯಾರಲ್ಲಿ ಹೆಚ್ಚು?
ಮಹಿಳೆಯು ಈ ಕೆಳಗಿನ ಅಂಶಗಳನ್ನು ಹೊಂದಿದ್ದರೆ ಆಕೆ ಗರ್ಭಾವಸ್ಥೆಯಲ್ಲಿ ಅಧಿಕ ರ್ತದೊತ್ತಡ ಬೆಳೆಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ:
-20 ವರ್ಷದೊಳಗಿನ ಅಥವಾ 35 ವರ್ಷಕ್ಕಿಂತ ಮೇಲ್ಪಟ್ಟ
– ಅಧಿಕ ದೇಹತೂಕ ಹೊಂದಿದ್ದರೆ ಅಥವಾ ಬೊಜ್ಜು ಇದ್ದರೆ, ದೈಹಿಕ ಚಟುವಟಿಕೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಡೆಸದೆ ಇದ್ದಲ್ಲಿ
– ಚೊಚ್ಚಲ ಗರ್ಭಾವಸ್ಥೆ
– ಗರ್ಭಾವಸ್ಥೆಗೆ ಮುನ್ನ ಅಧಿಕ ರಕ್ತದೊತ್ತಡ ಹೊಂದಿದ್ದುದು
– ಪ್ರಿಎಕ್ಲಾಂಪ್ಸಿಯಾ ಇರುವ ತಾಯಿ ಅಥವಾ ಸಹೋದರಿ
– ಒಂದಕ್ಕಿಂತ ಹೆಚ್ಚು ಶಿಶುಗಳನ್ನು ಗರ್ಭದಲ್ಲಿ ಹೊಂದಿರುವುದು
– ಮಧುಮೇಹ, ಮೂತ್ರಪಿಂಡ ಕಾಯಿಲೆಗಳು ಅಥವಾ ರುಮಟಾಯ್ಡ ಆರ್ಥೈಟಿಸ್‌ ಹೊಂದಿರುವುದು ಕಾಯಿಲೆಯ ತೀವ್ರ ಬೆಳವಣಿಗೆ (ತೀವ್ರ ಪ್ರಿಎಕ್ಲಾಂಪ್ಸಿಯಾ)ಯ ಸಾಧ್ಯತೆಯನ್ನು ಸೂಚಿಸುವ ಅಪಾಯ ಸಂಕೇತಗಳಾವುವು?
-ಸದಾ ತಲೆನೋವು, ದೃಷ್ಟಿ ಸಮಸ್ಯೆಗಳು (ದೃಷ್ಟಿ ಕ್ಷೇತ್ರದಲ್ಲಿ ಬಿಂದುಗಳು ಕಾಣುವುದು, ದೃಷ್ಟಿ ಮಂಜಾಗುವುದು, ಹಠಾತ್‌ ಬೆಳಕು ತೋರಿದಂತಾಗುವುದು, ತೇಲು ಬಿಂಬಗಳು)
-ಗರ್ಭಾವಸ್ಥೆಯಲ್ಲಿ ಎದೆಯುರಿಯಂತೆ ಹೊಟ್ಟೆಯ ಮೇಲು ಭಾಗದಲ್ಲಿ ನೋವು, ಹೊಟ್ಟೆ ತೊಳೆಸುವಿಕೆ ಅಥವಾ ವಾಂತಿ
-ಉಸಿರಾಡುವುದಕ್ಕೆ ತೊಂದರೆ ಹೊಸದಾಗಿ ಆರಂಭವಾಗುವುದು (ಶ್ವಾಸಕೋಶಗಳಲ್ಲಿ ನೀರು ತುಂಬುವುದರಿಂದ)
– ಕೈಗಳು ಮತ್ತು ಮುಖ ಅಸಹಜವಾಗಿ ಬಾತುಕೊಳ್ಳುವುದು: ಗರ್ಭಾವಸ್ಥೆಯಲ್ಲಿ ಬಾತುಕೊಳ್ಳುವುದು ಸಾಮಾನ್ಯ, ಆದರೆ ಅದು “ಕಣ್ಣುಗಳ ಸುತ್ತ’, “ಹೊಟ್ಟೆಯ ಭಾಗದಲ್ಲಿ’,
“ತೊಡೆಗಳು’ ಇತ್ಯಾದಿ ಪ್ರಿಎಕ್ಲಾಂಪ್ಸಿಯಾದ ಶಂಕೆಯನ್ನು ಉಂಟು ಮಾಡುತ್ತವೆ.

ಗರ್ಭಿಣಿಯರು ಮೇಲ್ಕಂಡ ಚಿಹ್ನೆಗಳನ್ನು ಗಮನಿಸಬೇಕು ಮತ್ತು ಇವುಗಳಲ್ಲಿ ಯಾವುದನ್ನಾದರೂ ಅನುಭವಿಸಿದಲ್ಲಿ ತತ್‌ಕ್ಷಣ ಮಾಹಿತಿ ನೀಡಬೇಕು. ಎಲ್ಲ ಗರ್ಭಿಣಿಯರೂ ನಿಯಮಿತವಾಗಿ ತಪಾಸಣೆ ನಡೆಸಿಕೊಳ್ಳುವುದು ಅಗತ್ಯ, ಇದರಿಂದ ಅವರ ರಕ್ತದೊತ್ತಡದ ಮೇಲೆ ನಿಗಾ ಇರಿಸಿಕೊಳ್ಳಬಹುದು.

ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಹೇಗೆ?
ಲಘು ಅಧಿಕ ರಕ್ತದೊತ್ತಡವಾಗಿದ್ದರೆ ಬಿಪಿ ಮೇಲೆ ನಿಗಾ, ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳುವುದು ಮತ್ತು ಮನಸ್ಸು ಹಗುರ ಮಾಡಿಕೊಳ್ಳುವುದರಿಂದಷ್ಟೇ ನಿಭಾವಣೆ ಸಾಧ್ಯ. ಸತತ ಮತ್ತು ತೀವ್ರ ಅಧಿಕ ರಕ್ತದೊತ್ತಡ ಇದ್ದಲ್ಲಿ ಗರ್ಭಾವಸ್ಥೆಯ ಸಂದರ್ಭದಲ್ಲಿಯೂ ಸುರಕ್ಷಿತವಾಗಿರುವ ಅಧಿಕ ರಕ್ತದೊತ್ತಡ ತಡೆ ಔಷಧಗಳ ಮೂಲಕ ನಿಯಂತ್ರಿಸಬಹುದು. ಔಷಧ ಸೇವನೆಯ ಬಳಿಕವೂ ನಿಯಂತ್ರಣಕ್ಕೆ ಬಾರದೆ ಇದ್ದಲ್ಲಿ ಅಥವಾ ಹೆಚ್ಚಿದಲ್ಲಿ. ಗರ್ಭಿಣಿ ಸಂಕೀರ್ಣ ಸಮಸ್ಯೆಗಳಿಗೆ ಈಡಾದಲ್ಲಿ, ಶಿಶು ಬೆಳವಣಿಗೆ ಆಗದೆ ಇದ್ದಲ್ಲಿ ಅಥವಾ ಶಿಶುವಿನ ಚಲನೆ ಕಡಿಮೆಯಾದಲ್ಲಿ ಹೆರಿಗೆ ನಡೆಸಬೇಕಾಗಬಹುದು. ಇಂತಹ ಪ್ರಕರಣಗಳಲ್ಲಿ ತಿಂಗಳು ತುಂಬುವ ವರೆಗೂ ಕಾಯುವುದು ಅಸಾಧ್ಯ. ಹೀಗಾಗಿ ಅವಧಿಗೆ ಮುನ್ನವೇ ಹೆರಿಗೆ ನಡೆಸಬೇಕಾಗುತ್ತದೆ. ಆದರೆ ಶಿಶುವಿನ ಶ್ವಾಸಾಂಗಗಳು ಮತ್ತು ನರಶಾಸ್ತ್ರೀಯ ಬೆಳವಣಿಗೆಗಾಗಿ ಹೆರಿಗೆ ನಡೆಸುವುದಕ್ಕೆ ಮುನ್ನ ಔಷಧಗಳನ್ನು ನೀಡಲಾಗುತ್ತದೆ.

ಹೆರಿಗೆಯ ಬಳಿಕ ಅಧಿಕ ರಕ್ತದೊತ್ತಡ ಏನಾಗುತ್ತದೆ?
ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಕಂಡುಬರುವ ಅಧಿಕ ರಕ್ತದೊತ್ತಡವು ಶಿಶುಜನನದ ಬಳಿಕ ಮಾಯವಾಗುತ್ತದೆ. ಆದರೆ ಭವಿಷ್ಯದಲ್ಲಿ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳು ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡದ ಜತೆಗೆ ಪ್ರೊಟಿನೂರಿಯಾ (ಪ್ರಿಎಕ್ಲಾಂಪ್ಸಿಯಾ ರೋಗಿಗಳು) ಹೊಂದಿದ್ದವರಲ್ಲಿ ಈ ಸಾಧ್ಯತೆ ಇನ್ನಷ್ಟು ಹೆಚ್ಚು. ತೀವ್ರ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಒದಗಿಸಬೇಕಾಗಿರುತ್ತದೆ, ಕೆಲವು ಮಹಿಳೆಯರಲ್ಲಿ ಈ ಚಿಕಿತ್ಸೆಯು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ ಮುಂದುವರಿಯಬೇಕಾಗಿ ಬರಬಹುದು. ರಕ್ತದೊತ್ತಡವು ಸಹಜ ಮಟ್ಟಕ್ಕೆ ಬಂದ ಬಳಿಕ ಔಷಧಗಳನ್ನು ನಿಲ್ಲಿಸಬಹುದು, ಸಾಮಾನ್ಯವಾಗಿ ಇದು ಆರು ವಾರಗಳ ಒಳಗೆ ಸಹಜ ಸ್ಥಿತಿಗೆ ಬರುತ್ತದೆ. ರಕ್ತದೊತ್ತಡ ಸಹಜ ಸ್ಥಿತಿ ಮುಟ್ಟಿರುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಗರ್ಭಿಣಿ ಮಹಿಳೆಯು ಹೆರಿಗೆಯಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಹತ್ತಿರದ ಕ್ಲಿನಿಕ್‌ ಅಥವಾ ಮಹಿಳೆಯ ಮನೆಯಲ್ಲಿ ರಕ್ತದೊತ್ತಡ ಪರೀಕ್ಷೆ ನಡೆಸುವುದನ್ನು ಹಾಗೂ ಆ ಬಳಿಕ 10 ಯಾ 14 ದಿನಗಳ ಅನಂತರ ಇನ್ನೊಮ್ಮೆ ರಕ್ತಪರೀಕ್ಷೆಗೆ ಒಳಗಾಗುವುದನ್ನು ವೈದ್ಯರು ಶಿಫಾರಸು ಮಾಡಬಹುದು.

ಹೆರಿಗೆಯಾದ 12 ವಾರಗಳ ಬಳಿಕವೂ ರಕ್ತದೊತ್ತಡವು ಅಧಿಕವಾಗಿಯೇ ಮುಂದುವರಿದರೆ ದೀರ್ಘ‌ಕಾಲಿಕ ಅಧಿಕ ರಕ್ತದೊತ್ತಡದ ಸೂಚನೆಯಾಗಿರಬಹುದು. ಜೀವನಶೈಲಿಯಲ್ಲಿ ಮಾರ್ಪಾಡು (ಆರೋಗ್ಯಕರ ಆಹಾರಾಭ್ಯಾಸ, ಬೊಜ್ಜಿಗೆ ತಡೆ ಮತ್ತು ಧೂಮಪಾನ ವರ್ಜನೆ) ಹಾಗೂ ಲಿಪಿಡ್‌ ಅಸಹಜತೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡಗಳ (ಈ ತೊಂದರೆಗಳು ಉಂಟಾದಲ್ಲಿ) ನಿರ್ವಹಣೆಯಿಂದ ಇಂತಹ ಮಹಿಳೆಯರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು.

ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡವನ್ನು  ತಡೆಯಬಹುದೇ?
ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಉಂಟಾಗುವುದನ್ನು ಮುಂಚಿತವಾಗಿ ನಿರೀಕ್ಷಿಸುವ ಕೆಲವು ಮಾರ್ಗೋಪಾಯಗಳಿವೆ. ಅಪಾಯವನ್ನು ನಿರೀಕ್ಷಿಸುವುದು ಹೇಗೆ ಎಂದರೆ, 1. ಮೇಲೆ ಹೇಳಲಾದ ಅಪಾಯಾಂಶಗಳು, 2. ಗರ್ಭಾವಸ್ಥೆಯ 12ನೇ ವಾರದಲ್ಲಿ ರಕ್ತಪರೀಕ್ಷೆ ನಡೆಸಿ, ಮತ್ತು 3. 12 ವಾರಗಳಲ್ಲಿ ಡಾಪ್ಲರ್‌ ಸ್ಕ್ಯಾನ್‌. ಅಧಿಕ ರಕ್ತದೊತ್ತಡ ಉಂಟಾಗುವುದನ್ನು ತಡೆಗಟ್ಟಲು ಇಂತಹ ಮಹಿಳೆಯರಿಗೆ ಕಡಿಮೆ ಡೋಸ್‌ನ ಆ್ಯಸ್ಪಿರಿನ್‌ ಔಷಧವನ್ನು ಶಿಫಾರಸು ಮಾಡಲಾಗುತ್ತದೆ. ಆದರೆ ಇದು ನೂರಕ್ಕೆ ನೂರು ಖಚಿತವಾದ ನಿರೀಕ್ಷೆಯಲ್ಲ ಎಂಬ ಎಚ್ಚರಿಕೆಯೂ ನಮ್ಮಲ್ಲಿರಬೇಕು.

ಸರಿಯಾದ ವಯಸ್ಸಿನಲ್ಲಿ (20-35 ವರ್ಷಗಳು) ಗರ್ಭ ಧರಿಸುವಂತೆ ಯೋಜನೆ ಹಾಕಿಕೊಳ್ಳುವುದು, ಗರ್ಭಾವಸ್ಥೆಯ ಸಂದರ್ಭದ ಆರೈಕೆ-ಕಾಳಜಿಗಳನ್ನು ಸರಿಯಾಗಿ ತೆಗೆದುಕೊಳ್ಳುವುದು, ಆರೋಗ್ಯಕರ ಜೀವನವಿಧಾನಗಳ ಮೂಲಕ ಬೊಜ್ಜು ಉಂಟಾಗದಂತೆ ಕಾಪಾಡಿಕೊಳ್ಳುವುದು – ಇವು ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಉಂಟಾಗದಂತೆ ತಡೆಯುವ ಸಾಮಾನ್ಯ ಮುನ್ನೆಚ್ಚರಿಕೆ ಕ್ರಮಗಳಾಗಿವೆ.

-ಡಾ| ಸುಜಾತಾ ಬಿ.ಎಸ್‌. ಅಸೋಸಿಯೇಟ್‌ ಪ್ರೊಫೆಸರ್‌
ಡಾ| ಶ್ಯಾಮಲಾ ಜಿ.
ಪ್ರೊಫೆಸರ್‌ ಮತ್ತು ಯೂನಿಟ್‌ ಹೆಡ್‌, ಪ್ರಸೂತಿಶಾಸ್ತ್ರ ಮತ್ತು ಸ್ತ್ರೀರೋಗ ವಿಭಾಗ
ಕೆಎಂಸಿ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next