ಬೆಂಗಳೂರು: ಹೊಸನಗರ ರಾಮಚಂದ್ರಾಪುರ ಮಠದಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುವಂತೆ ಮುಜರಾಯಿ ಇಲಾಖೆ ಆಯುಕ್ತರಿಗೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಹೊರಡಿಸಿದ್ದ ಆದೇಶದ ಮುಂದಿನ ಪ್ರಕ್ರಿಯೆಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಸಿ. ಖುಂಟಿಅ ಹೊರಡಿಸಿದ್ದ ಆದೇಶ ರದ್ದು ಕೋರಿ ಮಠದ ವತಿಯಿಂದ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.
ಇದಕ್ಕೂ ಮೊದಲು ವಿಚಾರಣೆ ವೇಳೆ ಮಠದ ಪರ ವಾದ ಮಂಡಿಸಿದ ವಕೀಲರು, “ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮ ದತ್ತಿ ಕಾಯಿದೆ ವ್ಯಾಪ್ತಿಗೆ ಅರ್ಜಿದಾರರ ಮಠ ಬರುವುದಿಲ್ಲ. ಮುಖ್ಯಕಾರ್ಯದರ್ಶಿ ಮುಜರಾಯಿ ಇಲಾಖೆ ಆಯುಕ್ತರಿಗೆ ನೀಡಿರುವ ಆದೇಶ ಕಾನೂನು ಬಾಹಿರ,’ ಎಂದ ನ್ಯಾಯಪೀಠಕ್ಕೆ ಹೇಳಿದರು.
ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಮುಖ್ಯಕಾರ್ಯದರ್ಶಿ ಹೊರಡಿಸಿದ್ದ ಆದೇಶದ ಮುಂದಿನ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿ, ಈ ಸಂಬಂಧ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಾದ ರಾಜ್ಯಸರ್ಕಾರ, ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಸಿ. ಖುಂಟಿಅ, ಮುಜರಾಯಿ ಇಲಾಖೆ ಆಯುಕ್ತರು, ಎದುರ್ಕುಳ ಈಶ್ವರಭಟ್, ಜಯಕೃಷ್ಣ ಅವರಿಗೆ ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಏನಿದು ಪ್ರಕರಣ?: ಹೊಸನಗರ ರಾಮಚಂದ್ರಪುರ ಮಠದಲ್ಲಿ ಅವ್ಯವಹಾರ ನಡೆಯುತ್ತಿದ್ದು, ರಾಘವೇಶ್ವರ ಶ್ರೀಗಳ ಮೇಲೆ ಹಲವು ಆಪಾದನೆಗಳಿವೆ. ಹೀಗಾಗಿ ಮಠದ ಪೀಠದಿಂದ ರಾಘವೇಶ್ವರ ಶ್ರೀಗಳನ್ನು ಕೆಳಗಿಳಿಸಬೇಕು ಹಾಗೂ ಮಠಕ್ಕೆ ಆಡಳಿತಾಧಿಕಾರಿ ನೇಮಕಗೊಳಿಸಲು ಆದೇಶಿಸಬೇಕು ಎಂದು ಎದುರ್ಕುಳ ಈಶ್ವರಭಟ್, ಜಯಕೃಷ್ಣ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಇತ್ಯರ್ಥಗೊಳಿಸಿದ್ದ ವಿಭಾಗೀಯ ಪೀಠ, ಈ ಪ್ರಕರಣ ಸಂಬಂಧ ರಾಜ್ಯಸರ್ಕಾರ ಅರ್ಜಿದಾರರು ಹಾಗೂ ಪ್ರತಿವಾದಿಗಳ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ವಿಚಾರಣೆ ನಡೆಸಿದ್ದ ಮುಖ್ಯಕಾರ್ಯದರ್ಶಿ, ಮಠದ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಕಂದಾಯ ಇಲಾಖೆಗೆ ವರದಿ ನೀಡುವಂತೆ ಮೇ 23ರಂದು ಮುಜರಾಯಿ ಇಲಾಖೆಗೆ ಆದೇಶ ನೀಡಿದ್ದರು. ಈ ಆದೇಶದ ಅನ್ವಯ ಆಯುಕ್ತರು ಸತ್ಯಶೋಧನಾ ಸಮಿತಿ ರಚಿಸಿದ್ದಾರೆ.