Advertisement
ಅಸ್ತಮಾ ಎಂಬುದು ಉಸಿರಾಟ ಮಾರ್ಗದಲ್ಲಿ ಉರಿಯೂತ ಉಂಟಾಗುವುದರಿಂದ ತಲೆದೋರುವ ಆರೋಗ್ಯ ಸಮಸ್ಯೆ. ಅಸ್ತಮಾದ ಪ್ರಧಾನ ರೋಗ ಲಕ್ಷಣಗಳು ಎಂದರೆ ಆಗಾಗ ಶ್ವಾಸಮಾರ್ಗದಲ್ಲಿ ಅಡಚಣೆ ಉಂಟಾಗುವುದು. ಶ್ವಾಸಮಾರ್ಗದ ಸರಿಪಡಿಸಬಹುದಾದ ಸಂಕುಚನ, ಅಲರ್ಜಿಯಿಂದ ಆಗಾಗ ಉಸಿರಾಟ ಸಂಕಷ್ಟ, ಕೆಮ್ಮು ಮತ್ತು ಉಬ್ಬಸ ಹಾಗೂ ಎದೆ ಬಿಗಿ ಹಿಡಿಯುವುದು ಇದರ ಲಕ್ಷಣಗಳು. ಅಸ್ತಮಾದಲ್ಲಿ ಹಲವಾರು ಕಾಯಿಲೆಗಳು ಒಳಗೊಂಡಿವೆ ಮತ್ತು ಒಂದೇ ಸ್ವರೂಪದ ಹಲವಾರು ಅಸ್ತಮಾ ವಿಧಗಳಿವೆ.
Related Articles
Advertisement
ಎತ್ತರದ ಪ್ರದೇಶಗಳಲ್ಲಿ ಅಲರ್ಜಿಕಾರಕಗಳು ಕಡಿಮೆ ಇರುವುದು, ವಾಯು ಮಾಲಿನ್ಯ ಕಡಿಮೆ ಇರುವುದು, ಸಮುದ್ರ ಮಟ್ಟದಿಂದ 1,600 ಮೀ.ಗಳಿಗಿಂತ ಹೆಚ್ಚು ಎತ್ತರದ ಪ್ರದೇಶಗಳಲ್ಲಿ ಮನೆಯ ಧೂಳಿನಲ್ಲಿರುವ ಕೀಟಾಣುಗಳು ಕಂಡುಬಾರದೆ ಇರುವುದು ಅಸ್ತಮಾ ಹೊಂದಿರುವವರಿಗೆ ಎತ್ತರದ ಪ್ರದೇಶಗಳಲ್ಲಿ ಆಗುವ ಲಾಭಗಳಿಗೆ ಉದಾಹರಣೆಗಳು. ಎತ್ತರದ ಪ್ರದೇಶಗಳಲ್ಲಿ ಅಸ್ತಮಾ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಸಂಬಂಧ ಮಕ್ಕಳಲ್ಲಿ ಮತ್ತು ಪ್ರೌಢರಲ್ಲಿ – ಹೀಗೆ ನಡೆಸಲಾದ ಎರಡು ವಿಧವಾದ ಅಧ್ಯಯನಗಳು ಎತ್ತರದ ಪ್ರದೇಶಗಳಲ್ಲಿ ಚಿಕಿತ್ಸೆಯಿಂದ ಅಲರ್ಜಿ ಹೊಂದಿರುವ ರೋಗಿಗಳಲ್ಲಿ ಶ್ವಾಸಾಂಗ ಉರಿಯೂತ ಕಡಿಮೆಯಾಗುತ್ತದೆ ಅಥವಾ ಅಲರ್ಜಿ ಹೊಂದಿಲ್ಲದ ರೋಗಿಗಳಲ್ಲಿ ಮಲಿನವಾದ, ಕೈಗಾರೀಕೃತ ಸಮುದ್ರ ಮಟ್ಟದ ಪರಿಸರದಿಂದ ದೂರವಾಗಿ ಎತ್ತರದ ಪ್ರದೇಶದಲ್ಲಿ ಕಡಿಮೆ ಅಸ್ತಮಾ ಪ್ರಚೋದಕ ವಾತಾವರಣಕ್ಕೆ ಒಡ್ಡಿಕೊಳ್ಳುವುದರಿಂದ ಪ್ರಯೋಜನವಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ.
ಎತ್ತರದ ಪ್ರದೇಶಗಳಲ್ಲಿ ಗಾಳಿಯ ಸ್ನಿಗ್ಧತೆ (ವಿಸ್ಕೋಸಿಟಿ) ಕಡಿಮೆ ಇರುವುದು ಮತ್ತು ಆಮ್ಲಜನಕದ ಒತ್ತಡ ಕಡಿಮೆ ಇರುವುದರಿಂದ ಎತ್ತರದ ಪ್ರದೇಶಗಳ ವಾತಾವರಣವು ಅಸ್ತಮಾ ರೋಗಿಗಳಿಗೆ ನೇರವಾಗಿ ಪ್ರಯೋಜನಕಾರಿಯಾಗಬಹುದು. ಗಾಳಿಯ ಸಾಂದ್ರತೆ ಕಡಿಮೆ ಇರುವುದರಿಂದ ಉಸಿರಾಟಕ್ಕೆ ಅಡಚಣೆ ಕಡಿಮೆಯಾಗಿ ಉಸಿರು ತೆಗೆದುಕೊಳ್ಳುವುದು ಮತ್ತು ಬಿಡುವುದು ಹೆಚ್ಚುತ್ತದೆ. ಇದರಿಂದಾಗಿ ಶ್ವಾಸಕೋಶಗಳು ಪೂರ್ಣವಾಗಿ ವಿಕಾಸಗೊಂಡು ಶ್ವಾಸಕೋಶಗಳ ಪ್ರತಿರೋಧವೂ ಕಡಿಮೆಯಾಗಿ ಉಸಿರಾಟ ಸುಲಭವಾಗುತ್ತದೆ.
ಇನ್ನೊಂದು ವಿವರಣೆ ನೀಡಬಹುದಾದರೆ, ಎತ್ತರದ ಪ್ರದೇಶಗಳಲ್ಲಿ ಹೈಪೊಕ್ಸಿಯಾ ತೀವ್ರಗೊಳ್ಳುವುದರಿಂದ ಕೆಟಕೊಲಮೈನ್‌ಗಳು ಮತ್ತು ಕಾರ್ಟಿಸೋಲ್ ಎಂಬ ನೈಸರ್ಗಿಕ ಸ್ಟೀರಾಯ್ಡಗಳು ಬಿಡುಗಡೆಗೊಳ್ಳುತ್ತವೆ; ಇವು ಶ್ವಾಸಾಂಗದ ಅತಿಯಾದ ಪ್ರತಿಸ್ಪಂದನೆಯ ವಿರುದ್ಧ ರಕ್ಷಣಾತ್ಮಕ ಪರಿಣಾಮ ಉಂಟು ಮಾಡುವ ಮೂಲಕ ಅಸ್ತಮಾ ಲಕ್ಷಣಗಳು ಕಡಿಮೆಯಾಗಲು ಕಾರಣವಾಗುತ್ತವೆ.
ಇಷ್ಟು ಮಾತ್ರವಲ್ಲದೆ, ಪರ್ವತ ಪ್ರದೇಶದ ವಿಶ್ರಾಂತಿ ಧಾಮಗಳಿಗೆ ಪ್ರವಾಸ ಹೋದಾಗ ಅಸ್ತಮಾ ರೋಗಿಗಳಿಗೆ ಮನೆ ಅಥವಾ ಉದ್ಯೋಗ ಸ್ಥಳದ ಮಾನಸಿಕ ಒತ್ತಡವೂ ಇಲ್ಲವಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಸೂರ್ಯನ ಬೆಳಕು ಕೂಡ ಚೆನ್ನಾಗಿರುತ್ತದೆ. ಸೂರ್ಯನ ಬೆಳಕಿನಲ್ಲಿರುವ ಅತಿನೇರಳೆ ಕಿರಣಗಳಿಗೆ ಒಡ್ಡಿಕೊಂಡಾಗ ಚರ್ಮದಲ್ಲಿ ವಿಟಮಿನ್ ಡಿ ಸಂಶ್ಲೇಷಣೆ ಪ್ರಚೋದನೆಗೊಳ್ಳುತ್ತದೆ, ಇದರಿಂದ ರೋಗ ನಿರೋಧಕ ವ್ಯವಸ್ಥೆ ಬಲಗೊಂಡು ಅಸ್ತಮಾದಂತಹ ದೀರ್ಘಕಾಲೀನ ಕಾಯಿಲೆಗಳ ತೀವ್ರತೆ ಕಡಿಮೆಯಾಗಬಹುದಾಗಿದೆ.
ಅಪಾಯಗಳು
ಶೀತಗಾಳಿಯು ಅಸ್ತಮಾವನ್ನು ಪ್ರಚೋದಿಸುತ್ತದೆ. ಅದರಲ್ಲೂ ವ್ಯಾಯಾಮ ಅಥವಾ ದೈಹಿಕ ಶ್ರಮ ನಡೆಸುತ್ತಿರುವಾಗ ಗಾಳಿಯೋಡಾಟ ಹೆಚ್ಚಿದ್ದರೆ ಅಸ್ತಮಾ ಉಲ್ಬಣಿಸುತ್ತದೆ. ಕ್ರಾಸ್ ಕಂಟ್ರಿ ಸ್ಕೀಯರ್‌ಗಳಲ್ಲಿ ಅಸ್ತಮಾ ಹೆಚ್ಚಿರುವುದು ಮತ್ತು ಈ ಕ್ರೀಡಾಳುಗಳಿಗೆ ಗರಿಷ್ಠ ಚಿಕಿತ್ಸೆಯ ಅಗತ್ಯವನ್ನು ಇದು ವಿವರಿಸುತ್ತದೆ. ಎತ್ತರದ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಚೆನ್ನಾಗಿದ್ದರೂ ಶೀತಗಾಳಿ ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗಬಹುದು. ಅಸ್ತಮಾ ರೋಗಿಗಳ ಪೈಕಿ ಸ್ವಲ್ಪಾಂಶ ಮಂದಿ (ಶೇ. 60ರಿಂದ ಶೇ. 80ರಷ್ಟು) ವ್ಯಾಯಾಮದಿಂದ ಉಂಟಾಗುವ ಬ್ರೊಂಕೊಕನ್ ಸ್ಟ್ರಿಕ್ಷನ್ (ಇಐಬಿ)ಗೆ ತುತ್ತಾಗುತ್ತಾರೆ. ಇದು ವ್ಯಾಯಾಮ ಮಾಡುವ ವೇಳೆ ಮತ್ತು ಹೆಚ್ಚಾಗಿ ವ್ಯಾಯಾಮ ಮಾಡಿ ಮುಗಿಸಿದ ಬಳಿಕ ಶ್ವಾಸಮಾರ್ಗ ಅಲ್ಪಕಾಲೀನವಾಗಿ ಸಂಕುಚನಗೊಳ್ಳುವ ಸಮಸ್ಯೆ ಇದು. ನಿಜವಾಗಿ, ಶ್ವಾಸಮಾರ್ಗ ಶುಷ್ಕಗೊಳ್ಳುವುದರಿಂದ ವಿಶೇಷವಾಗಿ ಮಾಸ್ಟ್ ಸೆಲ್‌ಗಳಿಂದ ಮೀಡಿಯೇಟರ್ ಗಳು ಬಿಡುಗಡೆಗೊಳ್ಳುತ್ತವೆ.
ಎತ್ತರದ ಪ್ರದೇಶಗಳಿಗೆ ಚಾರಣ ತೆರಳುವ ವೇಳೆ ಶ್ವಾಸಾಂಗ ವ್ಯೂಹದ ಮೇಲ್ಭಾಗದಲ್ಲಿ ಸೋಂಕು ಉಂಟಾಗುವುದು ಸಾಮಾನ್ಯವಾಗಿದೆ. ಶ್ವಾಸಾಂಗ ಮಾರ್ಗದ ಮೇಲ್ಭಾಗದ ಸೋಂಕು ಉಂಟಾದ ಬಳಿಕ 6 ವಾರಗಳ ವರೆಗೆ ಶ್ವಾಸಾಂಗ ಪ್ರತಿಸ್ಪಂದನಶೀಲತೆ ಹೆಚ್ಚುವುದು ಸ್ವಾಭಾವಿಕವಾಗಿದೆ (ಹೇರ್ ಎಟ್.ಅಲ್., 1995).
ಅಕ್ಯೂಟ್ ಮೌಂಟನ್ ಸಿಕ್‌ನೆಸ್ (ಎಎಂಎಸ್) ವಿಷಯವಾಗಿ ಹೇಳುವುದಾದರೆ, ಜನಸಾಮಾನ್ಯರಿಗಿಂತ ಅಸ್ತಮಾ ರೋಗಿಗಳಲ್ಲಿ ಇದು ಹೆಚ್ಚು ಉಂಟಾಗುತ್ತದೆ ಎಂದು ಖಚಿತವಾಗಿ ಹೇಳುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲ.
ಪರೀಕ್ಷೆ ಮತ್ತು ಆರೋಗ್ಯ ತಪಾಸಣೆ
ಅಸ್ತಮಾ ಕಾಯಿಲೆ ಪೀಡಿತರಾಗಿದ್ದು, ಪರ್ವತ ಪ್ರದೇಶ ಅಥವಾ ಎತ್ತರದ ಭೂಭಾಗಗಳಿಗೆ ಪ್ರವಾಸ ಹೋಗಲು ಯೋಜಿಸುತ್ತಿರುವವರು ಎರಡು ವಿಧಗಳಾಗಿ ಅಸ್ತಮಾ ಉಲ್ಬಣಿಸುವ ಅಪಾಯಗಳನ್ನು ಹೊಂದಿರುತ್ತಾರೆ.
- ಪ್ರವಾಸಕ್ಕೆ ಮುನ್ನ ಉಸಿರಾಟದ ಮೂಲಕ ತೆಗೆದುಕೊಳ್ಳುವ ಬ್ರೊಂಕೊಡಯಲೇಟರ್ಗಳನ್ನು ಆಗಾಗ (ವಾರಕ್ಕೆ 3 ಬಾರಿ) ಉಪಯೋಗಿಸುವುದು.
- ಚಾರಣ ಸಂದರ್ಭ ತೀವ್ರ ತರಹದ ದೈಹಿಕ ಶ್ರಮಕ್ಕೆ ಒಳಗಾಗುವುದು.
- ಪಲ್ಮನಾಜಿಸ್ಟ್‌ಗಳು ಅಥವಾ ಶ್ವಾಸಾಂಗ ರೋಗ ತಜ್ಞರು ಹೈಪೊಕ್ಸಿಯಾ ಆಲ್ಟಿಟ್ಯೂಡ್ ಟೆಸ್ಟ್ ಮತ್ತು ಇತರ ಅಂತಹ ಪರೀಕ್ಷೆಗಳನ್ನು ಅತೀ ಹೆಚ್ಚು ಅಪಾಯ ಹೊಂದಿರುವ ರೋಗಿಗಳ ತಪಾಸಣೆಗಾಗಿ ಉಪಯೋಗಿಸಬಹುದಾಗಿದೆ.
- ಲಘು ಸ್ವರೂಪದಲ್ಲಿ ಯಾವಾಗಾದರೊಮ್ಮೆ ಅಥವಾ ಲಘು ಸ್ವರೂಪದಲ್ಲಿ ಆಗಾಗ ಅಸ್ತಮಾ ಹಾವಳಿಗೆ ತುತ್ತಾಗುವವರು 5,000 ಮೀ. ವರೆಗೆ ಎತ್ತರವನ್ನು ಏರಬಹುದು.
- ಮಧ್ಯಮ ಪ್ರಮಾಣದಿಂದ ತೀವ್ರ ಪ್ರಮಾಣದ ವರೆಗಿನ ಅಸ್ತಮಾ ಹೊಂದಿರುವ ರೋಗಿಗಳು ಅತೀ ಎತ್ತರದ ಪ್ರದೇಶ (3,000 ಮೀ.ಗಳಿಂದ 3,500 ಮೀ.)ದ ವರೆಗೆ, ಅದರಲ್ಲೂ ದುರ್ಗಮ ಪ್ರದೇಶಗಳಿಗೆ ಏರುವ ವಿಚಾರದಲ್ಲಿ ಎಚ್ಚರಿಕೆ ಹೊಂದಿರಬೇಕು.
- ರೋಗಿಗಳು ನಿಯಮಿತವಾದ ಔಷಧ ತೆಗೆದುಕೊಳ್ಳುವುದನ್ನು ನಿಲ್ಲಿಸಬಾರದು ಮತ್ತು ಯಾವಾಗಲೂ ಹೆಚ್ಚುವರಿ ಔಷಧ ದಾಸ್ತಾನು ಮತ್ತು ಪ್ರಾಣ ರಕ್ಷಕ ಔಷಧಗಳನ್ನು ಜತೆಯಲ್ಲಿ ಇರಿಸಿಕೊಳ್ಳಬೇಕು.
- ಇನ್‌ಹೇಲರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವಂತಿರಲು ಅವುಗಳನ್ನು ಬೆಚ್ಚಗೆ ಮತ್ತು ಶುಷ್ಕವಾಗಿ ಇರಿಸಿಕೊಳ್ಳಬೇಕು.
- ಪ್ರವಾಸ ಸಂದರ್ಭದಲ್ಲಿ ಔಷಧ ಮುಗಿದುಹೋಗಿ ತೊಂದರೆಗೆ ಸಿಲುಕುವುದನ್ನು ತಪ್ಪಿಸಲು ಹೊಸ ಇನ್ ಹೇಲರ್‌ಗಳನ್ನು ಜತೆಯಲ್ಲಿ ಇರಿಸಿಕೊಳ್ಳುವುದು ಸೂಕ್ತ.
- ಸಮುದ್ರ ಮಟ್ಟದಲ್ಲಿ ಉಪಯೋಗಿಸುವ ಔಷಧವನ್ನೇ ವ್ಯಾಯಾಮ ಅಥವಾ ದೈಹಿಕ ಶ್ರಮಕ್ಕೆ ತೊಡಗುವ ಮುನ್ನ ಪೂರ್ವಭಾವಿಯಾಗಿ ಚಿಕಿತ್ಸೆಯಾಗಿ ಸ್ವೀಕರಿಸಬೇಕು.
- ಸಮುದ್ರ ಮಟ್ಟದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡಂತೆಯೇ ಎತ್ತರದ ಪ್ರದೇಶಗಳಲ್ಲಿ ಕೂಡ ತುಂಬ ತಂಪಾದ ಮತ್ತು ಗಾಳಿ ಬೀಸುವ ದಿನಗಳಲ್ಲಿ ರೋಗಿಗಳು ತಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು (ಉದಾಹರಣೆಗೆ, ಸ್ಕಾಫ್ìನಿಂದ).
- ಎತ್ತರದ ಅದರಲ್ಲೂ ದುರ್ಗಮ ಬೆಟ್ಟ, ಪರ್ವತಗಳಿಗೆ ಚಾರಣವನ್ನು ವೈದ್ಯರ ಉಪಸ್ಥಿತಿಯಲ್ಲಿಯೇ ಕೈಗೊಂಡರೆ ಉತ್ತಮ. ಯಾವುದೇ ಸಂದರ್ಭದಲ್ಲಿ ರೋಗಿಗಳು ಎತ್ತರದ ಪ್ರದೇಶಗಳಿಗೆ ಪ್ರವಾಸ ಸಂದರ್ಭದಲ್ಲಿ ಸಾಕಷ್ಟು ಔಷಧಗಳನ್ನು ಹೊಂದಿರಬೇಕು, ಅವುಗಳು ಕಳೆದುಹೋಗುವುದನ್ನು ತಪ್ಪಿಸಲು ಎರಡು ಭಿನ್ನ ಸ್ಥಳಗಳಲ್ಲಿ ಕಾಯ್ದುಕೊಂಡಿರಬೇಕು. ಅಸ್ತಮಾ ಉಲ್ಬಣಿಸಿದರೆ ಏನು ಮಾಡಬೇಕು ಎಂಬ ಚೆಕ್‌ಲಿಸ್ಟ್ ಕೂಡ ಔಷಧಗಳ ಜತೆಗೆ ಇರಬೇಕು (ಉದಾಹರಣೆಗೆ ಬಾಯಿಯ ಮೂಲಕ ತೆಗೆದುಕೊಳ್ಳುವ ಕಾರ್ಟಿಕೊಸ್ಟಿರಾಯ್ಡ ಗಳ ಜತೆಗೆ ಕ್ಷಿಪ್ರವಾಗಿ ಕಾರ್ಯವೆಸಗುವ ಬಿ-2 ಅಗೊನಿಸ್ಟ್- ಪ್ರತೀ 20 ನಿಮಿಷಗಳಿಗೆ ಒಮ್ಮೆ 200-400 ಎ.ಜಿ. ಸಾಲುºಟಮಾಲ್ ನಂಥದ್ದು). ಆರಂಭಿಕ ಬ್ರೊಂಕೊಡಯಲೇಟರ್‌ಗಳಿಗೆ ಸೂಕ್ತ ಪ್ರತಿಸ್ಪಂದನೆ ಲಭಿಸದಿದ್ದಲ್ಲಿ ಮತ್ತು ಅಸ್ತಮಾ ಉಲ್ಬಣದ ತೊಂದರೆಯು ಕನಿಷ್ಠ 3 ತಾಸುಗಳ ವರೆಗೆ ಮುಂದುವರಿದಿದ್ದು, ಬಾಯಿಯ ಮೂಲಕ ತೆಗೆದುಕೊಳ್ಳುವ ಗ್ಲುಕೊಕಾರ್ಟಿಕೊಸ್ಟಿರಾಯ್ಡ ಗಳಿಂದಲೂ ಪರಿಸ್ಥಿತಿ ಸುಧಾರಿಸದೆ ಇದ್ದಲ್ಲಿ ತತ್‌ಕ್ಷಣ ವೈದ್ಯಕೀಯ ನೆರವನ್ನು ಪಡೆದುಕೊಳ್ಳುವುದು ಸೂಕ್ತ (ಜಿಐಎನ್‌ಐ ಮಾರ್ಗದರ್ಶಿ ಸೂತ್ರಗಳು). ರೆಫರೆನ್ಸ್‌ಗಳು
- GINA guidelines.