ಪಠಾಣ್‌ಕೋಟ್: ನಿನ್ನೆ ಭಾನುವಾರ ತಡ ರಾತ್ರಿ ಮಮೂನ್ ಮಿಲಿಟರಿ ಸ್ಟೇಶನ್ ಬಳಿ ಸಂದೇಹಾಸ್ಪದ ಚೀಲವೊಂದು ಕಂಡು ಬಂದುದನ್ನು ಅನುಸರಿಸಿ ಪಠಾಣ್‌ಕೋಟ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಯಿತು.
ಒಡನೆಯೇ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಸೇನೆ ಹಾಗೂ SWAT ಕಮಾಂಡೋಗಳು ಶೋಧ ಕಾರ್ಯಾಚರಣೆ ಕೈಗೊಂಡವು.
ಶಂಕಿತ ಚೀಲವನ್ನು ಬಿಚ್ಚಿ ನೋಡಿದಾಗ ಅದರೊಳಗೆ ಮೂರು ಸೇನಾ ಸಮವಸ್ತ್ರಗಳು ಇರುವುದು ಕಂಡು ಬಂತು. ಬಾಂಬ್ ಅಥವಾ ಯಾವದೇ ರೀತಿಯ ಸ್ಫೋಟಕ ವಸ್ತುಗಳು ಇಲ್ಲದಿರುವುದನ್ನು ಖಾತರಿಪಡಿಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೇ 4ರಂದು ಮಮೂನ್ ಆರ್ಮಿ ಕಂಟೋನ್‌ಮೆಂಟ್ ಬೇಸ್ ಸಮೀಪ ಎರಡು ಅಪರಿಚಿತ ಚೀಲಗಳು ಪತ್ತೆಯಾದುದನ್ನು ಅನುಸರಿಸಿ ಪಠಾಣ್‌ಕೋಟ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿತ್ತು.
ಅಪರಿಚಿತ ಚೀಲಗಳಲ್ಲಿ ಎರಡು ಮೊಬೈಲ್ ಟವರ್ ಬ್ಯಾಟರಿಗಳು ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದರು.