ಹೊಸದಿಲ್ಲಿ: ದೇಶದೆಲ್ಲೆಡೆ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಬಿಗು ಭದ್ರತೆ ನಿಯೋಜನೆ ಮಾಡಲಾಗಿದೆ.
ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ರಾಜಪಥದಿಂದ ಇಂಡಿಯಾ ಗೆಟ್ ವರೆಗೆ ಗಣರಾಜ್ಯೋತ್ಸವ ವಿಶೇಷ ಪೆರೇಡ್ ನಡೆಯಲಿದೆ. ಇಂದಿನ ವಿಶೇಷ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸೆನಾರೋ ಭಾಗವಹಿಸಲಿದ್ದಾರೆ.
ವಿಶೇಷ ಪೆರೇಡ್ ನಡೆಯುವ ಪಥದ ಸುತ್ತಲೂ ಸೂಕ್ಷ ಪ್ರದೇಶವೆಂದು ಘೋಷಿಸಲಾಗಿದೆ. ಯಾವುದೇ ವಿಮಾನ ಮತ್ತು ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ.
ಪ್ರಧಾನಿ, ರಾಷ್ಟ್ರಪತಿ, ಮುಖ್ಯ ಅತಿಥಿ ಸೇರಿದಂತೆ ಗಣ್ಯರು ಸೇರುವ ವೇದಿಕೆಯ ಸುತ್ತ ಎನ್ ಎಸ್ ಜಿ, ಎಸ್ ಪಿಜಿ, ಐಟಿಬಿಪಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ದೆಹಲಿಯಲ್ಲಿ ಒಟ್ಟು 22 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಸುಮಾರು 10 ಸಾವಿರದಷ್ಟು ಪೊಲೀಸರನ್ನು ರಾಜಪಥದ ಸುತ್ತ ನಿಯೋಜಿಸಲಾಗಿದೆ.
ಸಮಾರಂಭ ನಡೆಯುವ ಸ್ಥಳದಲ್ಲಿ 150ಕ್ಕೂ ಹೆಚ್ಚಿನ ಆಧುನಿಕ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ.