Advertisement

ಮಂಗಳೂರಿನ 2 ಮತಗಟ್ಟೆಗಳಿಗೆ ಹೈಟೆಕ್‌ ಟಚ್‌

08:10 AM May 04, 2018 | Team Udayavani |

ವಿಶೇಷ ವರದಿ

Advertisement

ಮಹಾನಗರ: ಮತಗಟ್ಟೆಗಳಿಗೆ ಬಂದು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುವುದು ಕ್ರಮ. ಆದರೆ, ಇಲ್ಲಿ ಹಾಗಲ್ಲ. ಮತಗಟ್ಟೆಗಳಿಗೆ ಬಂದು ಸರದಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಬದಲಾಗಿ ಮತಗಟ್ಟೆಗೆ ಹೋದ ತತ್‌ ಕ್ಷಣವೇ ಅಲ್ಲಿನ ಅಧಿಕಾರಿಗಳು ನೀಡುವ ಟೋಕನ್‌ ಪಡೆದು, ತಮ್ಮ ಸರದಿ ಬರುವವರೆಗೆ ವಿಶ್ರಾಂತಿ ಪಡೆಯಲು ಅವಕಾಶವಿದೆ. ಲೇಡಿಹಿಲ್‌ ನ ವಿಕ್ಟೋರಿಯಾ ಪ್ರೌಢ ಶಾಲೆಯ ಬೂತ್‌ ಸಂಖ್ಯೆ 12 ಹಾಗೂ ಗಾಂಧೀನಗರದ ಸ.ಹಿ.ಪ್ರಾ. ಶಾಲೆಯ ಬೂತ್‌ ಸಂಖ್ಯೆ 74ರ ಮತಗಟ್ಟೆಗಳು ಈ ರೀತಿಯ ಬದಲಾವಣೆಗೆ ಮೇ 12ರಂದು ತೆರೆದುಕೊಳ್ಳಲಿದೆ. ಜಿಲ್ಲೆಯಲ್ಲಿಯೇ ಈ ಎರಡು ಮತಗಟ್ಟೆಗಳನ್ನು ಮಾದರಿ ರೂಪದಲ್ಲಿ ಪರಿವರ್ತಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಸಶಿಕಾಂತ್‌ ಸೆಂಥಿಲ್‌ ನಿರ್ದೇಶನದಂತೆ, ಜಿ.ಪಂ. ಸಿಇಒ ಡಾ| ಎಂ. ಆರ್‌. ರವಿ ಅವರ ಮುತುವರ್ಜಿಯಲ್ಲಿ ಎರಡು ಮತಗಟ್ಟೆಗಳನ್ನು ವಿಭಿನ್ನವಾಗಿ ಆಕರ್ಷಿಸುವಂತೆ ಮಾಡುವ ಪ್ರಯತ್ನ ನಡೆಸಲಾಗುತ್ತದೆ.

ಇಲ್ಲಿ ಎಲ್ಲವೂ ಹೈ ಫೈ!
ಈ ಎರಡು ಮತಗಟ್ಟೆಗಳನ್ನು ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ. ಹೀಗಾಗಿ ಎರಡು ಮತಗಟ್ಟೆಗಳು ಕಾರ್ಪೊರೇಟ್‌ ಶೈಲಿಯಲ್ಲಿ ಮೂಡಿಬರಲಿವೆೆ. ಸರದಿ ಸಾಲು ಎಂಬುದು ಇಲ್ಲಿ ಇರುವುದಿಲ್ಲ. ಮತ ಹಾಕಲು ಬರುವ ಮತದಾರ ನೇರವಾಗಿ ಬಂದು ಮತ ಹಾಕಬಹುದು. ಅದಕ್ಕಿಂತ ಮೊದಲು ಬಂದ ಮತದಾರರು ಇದ್ದರೆ, ಅಲ್ಲಿನ ಸಾಧ್ಯತೆಗಳನ್ನು ಪರಿಗಣಿಸಿ ಟೋಕನ್‌ಗಳನ್ನು ಕೊಡಲಾಗುತ್ತದೆ. ಅಲ್ಲಿಯವರೆಗೆ ಮತದಾರ ವಿಶ್ರಾಂತಿ ಪಡೆಯಲು ಕುರ್ಚಿ, ಬೆಂಚು, ಸೋಫಾ ಸಹಿತ ಇತರ ವ್ಯವಸ್ಥೆಗಳು ಇರಲಿವೆ.

ಮಂಗಳೂರಿನ ಎರಡು ಮತಗಟ್ಟೆಗಳನ್ನು ಮದುವೆ ಮನೆಯಂತೆ ಶೃಂಗಾರಗೊಳಿಸಿ ಅಣಿಗೊಳಿಸಲಾಗುತ್ತದೆ. ಮತಗಟ್ಟೆಗಳ ಪ್ರವೇಶ ದ್ವಾರದಿಂದಲೇ ಸುಸಜ್ಜಿತವಾಗಿ ನವೀಕರಿಸುವ ಕೆಲಸ ನಡೆಯಲಿದೆ. ಬಟ್ಟೆ ಹಾಗೂ ಪೇಪರ್‌ ಸಹಾಯದಿಂದ ಮತಗಟ್ಟೆಯ ಮುಂಭಾಗದಲ್ಲಿಯೇ ತಳಿರು ತೋರಣಗಳ ಸ್ವಾಗತ ಕಮಾನು ಮಾಡಲಾಗುತ್ತದೆ. ಅಲ್ಲಿಂದಲೇ ಮತದಾರರಿಗೆ ಮಾಹಿತಿ ತಿಳಿಸುವ ಸೂಚನ ಫಲಕಗಳನ್ನು ಅಲ್ಲಿಲ್ಲಿ ಜೋಡಿಸಿಡಲಾಗುತ್ತದೆ. ಈ ಮೂಲಕ ಮತದಾರ ಯಾವುದೇ ಗೊಂದಲಗಳಿಗೆ ಒಳಗಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ. ಇನ್ನು ಮತಗಟ್ಟೆಯ ಒಳಗಡೆ ಬಲೂನುಗಳ ಸಹಾಯದಿಂದ ಆಕರ್ಷಕವಾಗಿ ಶೃಂಗರಿಸಲಾಗುತ್ತದೆ.

ಕೂಲರ್‌ ನಿಂದ ಮತದಾರರು ಕೂಲ್‌ !
ಸದ್ಯ ಬೇಸಗೆ ಹಾಗೂ ವಿಪರೀತ ಸೆಕೆ ಇರುವುದರಿಂದ ಮತದಾರರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಆಶಯದಿಂದ ಕೂಲರ್‌ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಎಲ್ಲ ಕಡೆಯಲ್ಲಿ ಫ್ಯಾನ್‌ ವ್ಯವಸ್ಥೆ ಮಾಡಲಾಗುತ್ತದೆ. ಕುಡಿಯುವ ನೀರು ಹಾಗೂ ಪ್ರಥಮ ಚಿಕಿತ್ಸಾ ಸೌಲಭ್ಯ ಕೂಡ ಇರಲಿದೆ.

Advertisement

ಮಕ್ಕಳನ್ನು ಆಡಿಸುವವರೂ ಇದ್ದಾರೆ!
ಮತಗಟ್ಟೆಗಳಿಗೆ ಮತದಾರರು ಬರುವಾಗ ಅನಿವಾರ್ಯವಾಗಿ ಚಿಕ್ಕಮಕ್ಕಳನ್ನು ಕರೆದುಕೊಂಡು ಬಂದರೆ, ಮಕ್ಕಳಿಗೆ ಮತಗಟ್ಟೆಯೊಳಗೆ ಹೋಗಲು ಅವಕಾಶವಿರುವುದಿಲ್ಲ. ಹೀಗಾಗಿ ಮಕ್ಕಳನ್ನು ಈ ಮತಗಟ್ಟೆಯಲ್ಲಿ ನೋಡಿಕೊಳ್ಳಲು ಒಬ್ಬ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಲಾಗುತ್ತದೆ. ಜತೆಗೆ ಮಕ್ಕಳಿಗೆ ಆಟವಾಡಲು ಆಟೋಟ ಸಾಮಗ್ರಿಗಳೂ ಇರಲಿವೆ.
 
ಗುಲಾಬಿ ಮತಗಟ್ಟೆಗಳು!
ಮೂಡಬಿದಿರೆಯ ಕೆರೆಕಾಡು, ಮಂಗಳೂರಿನ ಮಧ್ಯ ಮತಗಟ್ಟೆ ಸಹಿತ ಜಿಲ್ಲೆಯ ಐದು ಮತಗಟ್ಟೆಗಳನ್ನು ಪಾರಂಪರಿಕ ಮತಗಟ್ಟೆಗಳೆಂದು ಪರಿಗಣಿಸಲಾಗಿವೆೆ. ಈ ಮತಗಟ್ಟೆಗಳನ್ನು ಆಯಾ ಪ್ರದೇಶದ ಸಂಸ್ಕೃತಿಯನ್ನು ಬಿಂಬಿಸುವಂತೆ ಅಲಂಕಾರಗೊಳಿಸಲು ಕಲಾವಿದರನ್ನು ನೇಮಕ ಮಾಡಲಾಗಿದೆ. ಜತೆಗೆ, ಮಂಗಳೂರು ತಾಲೂಕಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ  ತಲಾ 5 ಹಾಗೂ ಉಳಿದ 5 ಕ್ಷೇತ್ರಗಳಲ್ಲಿ ತಲಾ ಒಂದು ಮತಗಟ್ಟೆಗಳನ್ನು ಮಹಿಳಾ ಸ್ನೇಹಿ ಮತಗಟ್ಟೆಗಳನ್ನಾಗಿ ಪರಿವರ್ತಿಸಲಾಗುವುದು. ಇಲ್ಲಿ ಮುಖ್ಯದ್ವಾರದಿಂದ ಮತಗಟ್ಟೆವರೆಗಿನ ಪ್ರದೇಶವನ್ನು ಗುಲಾಬಿ ಬಣ್ಣದಿಂದ ಅಲಂಕಾರಗೊಳಿಸಲಾಗುವುದು. ಸಿಬಂದಿ ಕೂಡ ಗುಲಾಬಿ ಬಟ್ಟೆಯನ್ನೇ ಧರಿಸಲಿದ್ದಾರೆ. ಬಳಸುವ ಪೆನ್ನೂ ಕೂಡ ಗುಲಾಬಿ ಬಣ್ಣದ್ದೇ ಇರಲಿದೆ.

ಮಾದರಿ ಮತಗಟ್ಟೆ
ಸಾಮಾನ್ಯವಾಗಿ ಮತಗಟ್ಟೆಗಳೆಂದರೆ ಕೆಲವು ಸಮಸ್ಯೆ ಹಾಗೂ ಇಲ್ಲಗಳ ಮೂಲಕವೇ ಗಮನ ಸೆಳೆಯುತ್ತಿತ್ತು. ಆದರೆ, ಈ ಬಾರಿ ಇಂತಹ ಯಾವುದೇ ಸಮಸ್ಯೆ ಬಾರದಂತೆ ಜಿಲ್ಲೆಯ ಎಲ್ಲ ಮತಗಟ್ಟೆಗಳನ್ನು ಸುಸ್ಥಿಯಲ್ಲಿಡಲು ಜಿಲ್ಲಾಡಳಿತ ಸೂಚಿಸಿದೆ. ಅದರಲ್ಲೂ ಮಂಗಳೂರಿನ ಎರಡು ಮತಗಟ್ಟೆಗಳನ್ನು ಮಾದರಿ ರೀತಿಯಲ್ಲಿ  ಪರಿವರ್ತಿಸಲು ನಿರ್ಧರಿಸಲಾಗಿದೆ. 
-ಸಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

ಕಾರ್ಪೊರೇಟ್‌ ಲುಕ್‌
ಮತಗಟ್ಟೆಗಳಿಗೆ ಮತದಾರರನ್ನು ಆಕರ್ಷಿಸಬೇಕು ಎಂಬ ಉದ್ದೇಶದಿಂದ ಕೆಲವು ಮತಗಟ್ಟೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಮಂಗಳೂರಿನ ಲೇಡಿಹಿಲ್‌, ಗಾಂಧಿನಗರದ ಎರಡು ಮತಗಟ್ಟೆಗಳನ್ನು ಕಾರ್ಪೊರೇಟ್‌ ರೀತಿಯಲ್ಲಿ ಬದಲಾಯಿಸಲಾಗುತ್ತದೆ. 
– ಡಾ| ಎಂ.ಆರ್‌.ರವಿ., ಸಿಇಒ ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next