ಶಿರಸಿ: ಇನ್ನಾದರೂ ಜಿಲ್ಲೆಗೆ ಹೈಟೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲೇಬೇಕು. ಎಲ್ಲ ಜನ ಪ್ರತಿನಿಧಿಗಳು ಒಗ್ಗಟ್ಟಾಗಿ ಮಂಜೂರಿ ಮಾಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆಗ್ರಹಿಸಿದರು.
ಗುರುವಾರ ನಗರದ ಹೋಟೆಲ್ ಸುಪ್ರಿಯಾ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಿರೂರು ಟೋಲ್ ಗೇಟ್ ನಲ್ಲಿ ಬುಧವಾರ ನಡೆದ ಅಂಬುಲೆನ್ಸ್ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಒಮ್ಮೆ ಪಕ್ಕದ ಜಿಲ್ಲೆಯಲ್ಲಿ ಇರುವಂಥಹ ಆಸ್ಪತ್ರೆ ಜಿಲ್ಲೆಯಲ್ಲಿ ಇದ್ದರೆ ಅಂಥ ಸಮಸ್ಯೆ ಆಗುತ್ತಿರಲಿಲ್ಲ. ಘಟ್ಟದ ಮೇಲಾಗಲೀ, ಕೆಳಗಾಗಲೀ ಎಲ್ಲೇ ಆಗಲಿ ಜಿಲ್ಲೆಯಲ್ಲಿ ಆಗಬೇಕು ಎಂದರು.
ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ಅವರು ಮುಖ್ಯ ಪಾತ್ರದಲ್ಲಿ ಒಂದೊಳ್ಳೆ ಹೈಟೆಕ್ ಆಸ್ಪತ್ರೆ ಮಾಡಿಸಬೇಕು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಕೋಟ, ಹೆಬ್ಬಾರ್ , ಸಂಸದ ಅನಂತ ಕುಮಾರ ಹೆಗಡೆ ಇತರರು ಜವಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಜಿಲ್ಲೆಯ ಗುತ್ತಿಗೆದಾರರಿಗೆ ಬರಬೇಕಾದ ಬಾಕಿ ಮೊತ್ತ ಬರಬೇಕಿದೆ. 82 ಕೋಟಿ ರೂಪಾಯಿ ಇಟ್ಟುಕೊಂಡಿದ್ದು ಸರಿಯಲ್ಲ ಎಂದ ಅವರು, ಜಿಎಸ್ ಟಿ ಹೇರಿಕೆ ಮಾಡಿದ್ದೂ ಸರಿಯಲ್ಲ. ಸೋನಿಯಾ ಗಾಂಧಿ ಅವರಿಗೆ ಇ.ಡಿ. ವಿಚಾರಣೆ ಮಾಡುವುದು ಸರಿಯಲ್ಲ. ಮುಗಿದು ಹೋದ ಪ್ರಕರಣ ಮರಳಿ ಕೆದುಕುವದು ಏಕೆ? ಸಣ್ಣ ತನದ ರಾಜಕಾರಣ ಬಿಡಬೇಕು ಎಂದರು.
ಮೇಲ್ಮನೆಯ ಪ್ರತಿ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಶುಕ್ರವಾರ ನಗರದ ಅಂಚೆ ವೃತ್ತದಲ್ಲಿ ನಡೆಸಲಿರುವ ಇ.ಡಿ. ಕಿರುಕುಳ ವಿರುದ್ದ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಈ ವೇಳೆ ಪ್ರಮುಖರಾದ ಎಸ್.ಕೆ.ಭಾಗವತ್ , ದೀಪಕ ದೊಡ್ಡೂರು, ಬಸವರಾಜ್ ದೊಡ್ಮನಿ ಇತರರು ಇದ್ದರು.