Advertisement

ಪೊಲೀಸ್‌ ಪರಿವಾರಕ್ಕೆ ಹೈಟೆಕ್‌ ವಸತಿಗೃಹ

09:48 PM Jan 20, 2020 | Lakshmi GovindaRaj |

ಚನ್ನರಾಯಪಟ್ಟಣ: ಇಟಾಲಿಯನ್‌ ಕಿಚನ್‌, ಸೋಲಾರ್‌ ವಾಟರ್‌ ಬಿಸಿನೀರು, ನೆಲಕ್ಕೆ ಗ್ರಾನೈಟ್‌ ಕಲ್ಲು, ನಿರಂತರ ಹೇಮಾವತಿ ನದಿ ನೀರು, ಪ್ರತಿ ಬೆಡ್‌ ರೂಮಿಗೆ ಕಬೋರ್ಡ್‌, ವಾಹನ ನಿಲ್ಲಿಸಲು ಅಗತ್ಯ ಪಾರ್ಕಿಂಗ್‌ ಸ್ಥಳ ಹೀಗೆ ಮಹಾನಗರಗಳಲ್ಲಿ ಇರುವ ರೀತಿಯಲ್ಲಿ ಪಟ್ಟಣದ ಗ್ರಾಮಾಂತರ ಪೊಲೀಸ್‌ ಠಾಣೆ ಸಮೀಪದಲ್ಲಿ ಪೊಲೀಸ್‌ ಪರಿವಾರಕ್ಕೆ ಹೈಟೆಕ್‌ ವಸತಿಗೃಹಗಳು ಸಿದ್ಧಗೊಂಡಿವೆ.

Advertisement

ಸುಸಜ್ಜಿತ ಆಧುನಿಕ ಸೌಲಭ್ಯದ ವಸತಿ ಗೃಹಗಳನ್ನು ಪಟ್ಟಣದಲ್ಲಿನ ಗ್ರಾಮಾಂತರ ಪೊಲೀಸ್‌ ಠಾಣೆ ಹಾಗೂ ವೃತ್ತನಿರೀಕ್ಷಕರ ಕಚೇರಿ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಕರ್ನಾಟಕ ಪೊಲೀಸ್‌ ಹೌಸಿಂಗ್‌ ಕಾರ್ಪೋರೇಷನ್‌ ವತಿಯಿಂದ ರಾಜ್ಯ ಸರ್ಕಾರ ನಿರ್ಮಾಣ ಮಾಡಿಕೊಡುತ್ತಿದೆ. ನೂತನವಾಗಿ ತಲೆ ಎತ್ತುತ್ತಿರುವ ವಸತಿಗೃಹದಿಂದ ಅನೇಕ ಪೊಲೀಸ್‌ ಕುಟುಂಬಗಳು ಹರ್ಷಗೊಂಡಿವೆ.

ಕೋಟ್ಯಂತರ ರೂ. ವೆಚ್ಚ: ಸರ್ಕಾರದಿಂದ ಸುಮಾರು 5.10 ಕೋಟಿ ರೂ. ವೆಚ್ಚದಲ್ಲಿ ಮೂರು ಅಪಾರ್ಟ್‌ಮೆಂಟ್‌ ನಿರ್ಮಾಣ ಮಾಡುತ್ತಿದ್ದು, ಅದರಲ್ಲಿ 36 ಮನೆಗಳು ಇವೆ, ಚನ್ನರಾಯಪಟ್ಟಣಕ್ಕೆ ಎರಡು ಅಪಾರ್ಟ್‌ಮೆಂಟ್‌ ಬಿಡುಗಡೆಯಾಗಿದ್ದು, ಒಂದು ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿನ ಪೊಲೀಸರಿಗೆ ಮಂಜೂರಾಗಿತ್ತು. ಆದರೆ ನಗರದಲ್ಲಿ ನೂತನವಾಗಿ ಸಂಚಾರ ಪೊಲೀಸ್‌ ಠಾಣೆ ಇರುವುದರಿಂದ ಅಲ್ಲಿನ ಸಿಬ್ಬಂದಿಗಳ ಅನುಕೂಲಕ್ಕಾಗಿ ಇಲಾಖೆ ಅಧಿಕಾರಿಗಳು ಚನ್ನರಾಯಪಟ್ಟಣದಲ್ಲಿ ನಿರ್ಮಾಣ ಮಾಡಿಸುತ್ತಿದ್ದಾರೆ.

ಪಾಳು ಬಿದ್ದ ಜಾಗದಲ್ಲಿ ಹೈಟೆಕ್‌ ಗೃಹಗಳು: ಪೊಲೀಸ್‌ ಇಲಾಖೆಗೆ ಸೇರಿದ್ದ ನಿವೇಶನ ಹಲವು ವರ್ಷದಿಂದ ಪಾಳು ಬಿದ್ದಿತ್ತು. ಈಜಾಗವನ್ನು ಇಲಾಖೆ ಸದ್ಬಳಕೆ ಮಾಡಿಕೊಂಡಿದೆ. ನೂತನವಾಗಿ ನಿರ್ಮಾಣ ಗೊಂಡಿದ್ದರೂ ವಸತಿ ಗೃಹದ ಬಳಿಯಲ್ಲಿ ಶತಮಾನಗ ಹಿಂದೆ ಪೊಲೀಸ್‌ ಸಿಬ್ಬಂದಿಗಾಗಿ ನಿರ್ಮಾಣ ಮಾಡಿರುವ ಹೆಂಚಿನ ಮನೆಗಳಿವೆ ಅವುಗಳನ್ನು ತೆರವು ಮಾಡಿ ಆ ಸ್ಥಳದಲ್ಲಿಯೂ ಉತ್ತಮವಾಗಿ ವಸತಿಗೃಹ ನಿರ್ಮಾಣ ಮಾಡಬಹುದಾಗಿದ್ದು ಈ ಬಗ್ಗೆ ಇಲಾಖೆ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ.

ಹೋಬಳಿ ಕೇಂದ್ರದಲ್ಲಿ ಸಾಕಷ್ಟು ಮನೆ ಇವೆ: ತಾಲೂಕಿನಲ್ಲಿ ಹಿರೀಸಾವೆ, ನುಗ್ಗೇಹಳ್ಳಿ ಹಾಗೂ ಶ್ರವಣಬೆಳಗೊಳ ಹೋಬಳಿ ಕೇಂದ್ರದಲ್ಲಿ ಪೊಲೀಸ್‌ ಠಾಣೆ ಇದ್ದು ಅಲ್ಲಿನ ಸಿಬ್ಬಂದಿಗೆ ಅಗತ್ಯ ಇರುವಷ್ಟು ವಸತಿ ಗೃಹಗಳಿವೆ, ನುಗ್ಗೇಹಳ್ಳಿ ಹಾಗೂ ಶ್ರವಣಬೆಳಗೊಳದಲ್ಲಿ ಅನೇಕ ವಸತಿ ಗೃಹಗಳು ಖಾಲಿ ಇವೆ. ಅಲ್ಲಿನ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಟ್ಟಣ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವುದರಿಂದ ಖಾಲಿ ಇವೆ ಎನ್ನಲಾಗುತ್ತಿದೆ.

Advertisement

ಕೆಲವರು ಸ್ವಂತ ಮನೆಯಲ್ಲಿ ವಾಸ: ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ ವಸತಿ ಗೃಹಗಳು ಸಿಬ್ಬಂದಿಗೆ ಸಾಕಾಗಲಿವೆ ಅನೇಕ ಮಂದಿ ಪಟ್ಟಣಗಳಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡು ವಾಸವಿದ್ದಾರೆ. ಇನ್ನು ಹಲವು ಮಂದಿ ತಾಲೂಕಿನವರಾಗಿದ್ದು, ತಮ್ಮ ಸ್ವಗ್ರಾಮದಿಂದಲೇ ನಿತ್ಯ ಕರ್ತವ್ಯಕ್ಕೆ ಆಗಮಿಸುತ್ತಿದ್ದಾರೆ, ಅನ್ಯ ತಾಲೂಕು, ಜಿಲ್ಲೆಯಿಂದ ಇಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ವಸತಿ ಗೃಹಗಳು ಸಾಕಾಗಲಿವೆ.

ಏನೇನು ಸೌಲಭ್ಯವಿದೆ?: ನೂತನ ವಸತಿ ಗೃಹವು ಎರಡು ಮಲಗುವ ಕೊಠಡಿ ಹೊಂದಿದ್ದು, ಒಂದರಲ್ಲಿ ಅಟ್ಯಾಚ್‌ ಬಾತ್‌ರೂಂ ವ್ಯವಸ್ಥೆ ಮಾಡಲಾಗಿದೆ. ಸ್ನಾನಕ್ಕಾಗಿ ಸೋಲಾರ್‌ ಬಿಸಿ ನೀರಿನ ವ್ಯವಸ್ಥೆ, ಕುಡಿಯಲು ಪುರಸಭೆಯಿಂದ ಹೇಮಾವತಿ ನೀರು ನೀಡಲಾಗುತ್ತಿದ್ದು, ದಿನದ 24 ತಾಸು ಅಡುಗೆ ಕೋಣೆ ಹಾಗೂ ಸ್ನಾನದ ಕೊಠೆಡಿಗೆ ನೀರಿನ ಸೌಲಭ್ಯವಿದೆ. ಬೈಕ್‌ ನಿಲ್ಲಿಸಲು ಜಾಗವನ್ನು ಮಾಡಲಾಗಿದೆ.

ಹೆಂಚಿನ ಮನೆ ತೆರವು ಮಾಡಿ: ಪೊಲೀಸ್‌ ಕಾಲೋನಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಹಂಚಿನ ಮನೆಗಳಿದ್ದು, ಅವು ಸ್ವತಂತ್ರ ಪೂರ್ವದಲ್ಲಿ ನಿರ್ಮಾಣ ಮಾಡಲಾಗಿದೆ. ಬಹುತೇಕ ಎಲ್ಲಾ ಮನೆಗಳು ಶಿಥಿಲಗೊಂಡಿರುವುದರಿಂದ ಪಾಳುಬಿದ್ದಿವೆ. ಆದರೂ ಐದು ಮಂದಿ ಪೇದೆ ಅದರಲ್ಲಯೇ ವಾಸವಾಗಿದ್ದಾರೆ. ಈಗಾಗಲೆ ಇವುಗಳನ್ನು ತೆರವು ಮಾಡಲು ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟವರೊಂದಿಗೆ ಪತ್ರ ವ್ಯವಹಾರ ಮಾಡಿದ್ದಾರೆ. ಅಲ್ಲಿಂದ ತೆರವು ಮಾಡಲು ಅನುಮತಿ ಬರಬೇಕಿದೆ.

ಇಲಾಖೆಯಿಂದ ವಸತಿ ಪಡೆಯುವ ಸಿಬ್ಬಂದಿ ಅರ್ಜಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಹಿರಿತನದ ಆಧಾರದ ಮೇಲೆ ನೀಡಲಾಗುತ್ತದೆ. ನಗರ ಠಾಣೆ, ಗ್ರಾಮಾಂತ ಹಾಗೂ ಸಂಚಾರಿ ಠಾಣೆ ಸಿಬ್ಬಂದಿಗೆ ಮೊದಲ ಆದ್ಯತೆ ನೀಡಲಾಗಿದೆ. ಅಗತ್ಯಕ್ಕಿಂತ ಹೆಚ್ಚು ಅರ್ಜಿಗಳು ಬಂದಿದ್ದರೆ ಲಾಟರಿ ಮೂಲಕ ಹೈಟೆಕ್‌ ಮನೆಯನ್ನು ಇಲಾಖೆ ಮೇಲಧಿಕಾರಿಗಳು ಅಲಾಟ್‌ ಮಾಡಲಿದ್ದಾರೆ.
-ಬಿ.ಜಿ.ಕುಮಾರ್‌, ವೃತ್ತ ನಿರೀಕ್ಷಕ

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next