Advertisement

ಪೆರುವಾಜೆಯಲ್ಲಿ ಹೈಟೆಕ್‌ ಅಂಗನವಾಡಿ

12:25 AM Mar 02, 2020 | Team Udayavani |

ಸುಳ್ಯ: ಹವಾನಿಯಂತ್ರಿತ ಸೌಲಭ್ಯ, ಸಿ.ಸಿ. ಕೆಮರಾ, ಟಿ.ವಿ. ಹೀಗೆ ತತ್‌ಕ್ಷಣ ಕಂಡಾಗ ಮನೆಯಂತೆ ಕಾಣುವ ಈ ಕಟ್ಟಡ ಅಸಲಿಗೆ ಮನೆ ಅಲ್ಲ. ಹಲವು ಸೌಲಭ್ಯಗಳಿಂದ ಕೂಡಿರುವ ಮನೆ ವಾತಾವರಣ ಹೊಂದಿರುವ ಹೈಟೆಕ್‌ ಅಂಗನವಾಡಿ.

Advertisement

ಅವಿಭಜಿತ ಜಿಲ್ಲೆಯಲ್ಲೇ ಮಾದರಿ ಎನ್ನುವಂತಿರುವ ಸುಳ್ಯ ತಾಲೂಕಿನ ಪೆರುವಾಜೆಯಲ್ಲಿ ನೂತನವಾಗಿ ನಿರ್ಮಿಸಿರುವ ಈ ಅಂಗನವಾಡಿ ಕೇಂದ್ರ ಹಲವು ಹೊಸತನಗಳ ಸ್ಪರ್ಶದ ಮೂಲಕ ಗಮನ ಸೆಳೆಯುತ್ತಿದೆ.

ಹವಾನಿಯಂತ್ರಿತ ಅಂಗನವಾಡಿ
ಸುಮಾರು 26 ಪುಟಾಣಿಗಳಿರುವ ಇಲ್ಲಿನ ಅಂಗನವಾಡಿ ಕೇಂದ್ರವನ್ನು 11.95 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾಗಿದೆ. ಎರಡು ಕೊಠಡಿ ಹೊಂದಿದ್ದು, ಆರ್‌ಸಿಸಿ ಕಟ್ಟಡ ಇದಾಗಿದೆ. ಪುಟಾಣಿಗಳ ಚಟುವಟಿಕೆಗೆ ಪೂರಕವಾಗಿ ಕೊಠಡಿಗೆ ಹವಾನಿಯಂತ್ರಿತ ಸೌಲಭ್ಯ, ಟಿ.ವಿ., ಆಯಾಸ ನೀಗಲು ಹಾಗೂ ವಿಶ್ರಾಂತಿಗೆ ಹಾಸಿಗೆ, ಭದ್ರತಾ ವ್ಯವಸ್ಥೆಯಾಗಿ ಸಿಸಿ ಕೆಮರಾ, ರೆಫ್ರಿಜರೇಟರ್‌ ಸೌಲಭ್ಯ ಇರುವ ಅಡುಗೆ ಕೊಠಡಿ, ಸ್ಟಾಕ್‌ ರೂಂ ಹೀಗೆ ಹತ್ತಾರು ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯುತ್‌ ಸಂಪರ್ಕ ಇದ್ದು, ಭವಿಷ್ಯತ್ತಿನಲ್ಲಿ ಸೋಲಾರ್‌ ಅಳವಡಿಸಲು ಉದ್ದೇಶಿಸಲಾಗಿದೆ.

11.95 ಲಕ್ಷ ರೂ. ವೆಚ್ಚ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಬಾರ್ಡ್‌ ಯೋಜನೆಯಲ್ಲಿ 6.95 ಲಕ್ಷ ರೂ. ಮತ್ತು ಪೆರುವಾಜೆ ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯಡಿ 5 ಲಕ್ಷ ರೂ. ಸೇರಿ ಒಟ್ಟು 11.95 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ಸರಕಾರದ ಅನುದಾನದಲ್ಲಿ ಕಟ್ಟಡ ಹಾಗೂ ಇತರ ಸೌಲಭ್ಯಗಳನ್ನು ದಾನಿಗಳ ನೆರವಿನಿಂದ ಕ್ರೋಡೀಕರಿಸಲಾಗಿದೆ ಎನ್ನುತ್ತಾರೆ ದಾನಿಗಳ ಸಂಪರ್ಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗ್ರಾ.ಪಂ. ಉಪಾಧ್ಯಕ್ಷ ಸುನೀಲ್‌ ರೈ ಪೆರುವಾಜೆ.

ಪೂರಕ ಸವಲತ್ತು
ಪೆರುವಾಜೆ ನೂತನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಅನುಕೂಲಕ್ಕೆ ಪೂರಕವಾಗಿರುವ ಸವಲತ್ತುಗಳನ್ನು ಸರಕಾರದ ಅನುದಾನ ಮತ್ತು ದಾನಿಗಳ ಸಹಕಾರದಿಂದ ಒದಗಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 165 ಅಂಗನವಾಡಿಗಳಿವೆ ಎಂದು ಸುಳ್ಯದ ಸಿಡಿಪಿಒ ರಶ್ಮಿ ಅಶೊಕ್‌ ಹೇಳಿದರು.

Advertisement

ಮಾದರಿ ಅಂಗನವಾಡಿ
ಉದ್ಯೋಗ ಖಾತರಿ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅನುದಾನ ಬಳಸಿ ಈ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ. ಇದೊಂದು ಮಾದರಿ ಅಂಗನವಾಡಿ ಕೇಂದ್ರವಾಗಬೇಕು ಎನ್ನುವುದು ಆಶಯ.
 - ಅನಸೂಯಾ, ಅಧ್ಯಕ್ಷರು, ಪೆರುವಾಜೆ ಗ್ರಾ.ಪಂ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next