ಕಾಲೇಜು ಎಂದಾಕ್ಷಣ ನಮ್ಮೆಲ್ಲರ ಕಣ್ಮುಂದೆ ಮೋಜುಗಳಿಂದ ಕೂಡಿದ ಚಿತ್ರಣವು ಥಟ್ ಎಂದು ಪ್ರತ್ಯಕ್ಷವಾಗುತ್ತದೆ. ಹಾಗೋ ಹೀಗೋ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿ ನಾನು ಸಹ ಈ ಕಾಲೇಜು ತರಂಗಕ್ಕೆ ರಂಗಪ್ರವೇಶ ಮಾಡಲು ಸಿದ್ಧಳಾಗಿದ್ದೆ. ಒಂದೆಡೆ ಸ್ನೇಹಿತರೆಲ್ಲ ದೂರವಾಗುತ್ತಿದ್ದೇವಲ್ಲಾ ಎಂಬ ನೋವಿದ್ದರೆ, ಇನ್ನೊಂದೆಡೆ ಹೊಸ ಸ್ನೇಹಿತರೊಂದಿಗೆ ಓಡಾಡುವ ತವಕ. ಮಂದಹಾಸಕ್ಕಿಂತ ಜಾಸ್ತಿಯಾಗಿ ನನ್ನಲ್ಲಿದ್ದದ್ದು ಭಯ. ಕಾಲೇಜಿನಲ್ಲಿ ಎಲ್ಲಾ ಹೇಗಿರ್ತಾರೋ? ಸೀನಿಯರ್ ಹೇಗೆ ರಿಯಾಕ್ಟ್ ಮಾಡ್ತಾರೋ? ಲೆಕ್ಚರರ್ ಬೈದ್ರೆ? ನಾನು ಒಂಟಿ ಆಗಿ ಇದಿºಟ್ರೆ?- ಹೀಗೆ ನೂರೆಂಟು ಪ್ರಶ್ನೆಗಳು ಆಗಲೇ ನನ್ನ ತಲೆಯಲ್ಲಿ ಭರತನಾಟ್ಯ ಮಾಡುತ್ತಿದ್ದವು.
ಇಷ್ಟೆಲ್ಲ ಯೋಚಿಸುತ್ತಿರಬೇಕಾದರೆ, ಕಾಲೇಜು ಫಸ್ಟ್‌ಡೇ ಬಂದೇಬಿಡ್ತು. ಆದದ್ದು ಆಗಿ ಹೋಗ್ಲಿ ಎಂದು ನಾನು ಸಹ ತಯಾರಾದೆ. ಆ ದಿನ ನನಗಿದ್ದ ಏಕಮಾತ್ರ ಧೈರ್ಯ ಹರ್ಷಿತಾ. ಹರ್ಷಿತಾಳಿಗೆ ಸಹ ಅದು ಕಾಲೇಜಿನ ಪ್ರಥಮ ದಿನವಾಗಿತ್ತು. ಪಕ್ಕದಮನೆ ಫ್ರೆಂಡ್ ಆಗಿದ್ದ ಹರ್ಷಿತಾ ಮತ್ತು ನಾನು ಸೇರಿದ್ದು ಒಂದೇ ಕಾಲೇಜಿಗೆ. ಗಡಿಯಾರದ ಮುಳ್ಳು ಎಂಟನ್ನು ಹೊಡೆದ ತಕ್ಷಣ, ಆ ಮುಳ್ಳು ನನ್ನ ಹೊಟ್ಟೆಯನ್ನೇ ತಿವಿದಂತಾಯ್ತು. ಏಕೆಂದರೆ ಅದು ನಾವು ಕಾಲೇಜಿಗೆ ಹೊರಡುವ ಸಮಯ. ಎಷ್ಟೇ ಭಯ ಇದ್ರೂ ಫುಲ್ ಕೂಲ್ ಆ್ಯಂಡ್ ಸ್ಮಾರ್ಟ್ ಆಗಿ ಹರ್ಷಿತಾಳೊಂದಿಗೆ ಕಾಲೇಜಿನತ್ತ ಹೆಜ್ಜೆ ಇರಿಸಿದೆ. “ಗೋವಿಂದದಾಸ ಕಾಲೇಜು’ ಎಂಬ ದ್ವಾರ ನಮ್ಮನ್ನು ಮುಗುಳ್ನಗುತ್ತಾ ಸ್ವಾಗತಿಸಿದರೂ, “ಗೋವಿಂದಾ ಕಾಪಾಡಪ್ಪಾ’ ಎಂದು ಮನದಲ್ಲಿಯೇ ಪ್ರಾರ್ಥಿಸಿಕೊಂಡು ಮುನ್ನಡೆದೆ.
ಎಂಟ್ರಿ ಏನೋ ಆಯ್ತು. ಆದ್ರೆ ಈಗ ಕ್ಲಾಸ್‌ರೂಮ್ ಹುಡುಕುವ ಫಜೀತಿ. ಹತ್ತು ಹನ್ನೆರಡು ಕ್ಲಾಸ್‌ಗಳಿಗೆ ನಮ್ಮ ಮುಖದರ್ಶನ ನೀಡಿ ಅಂತೂ ಇಂತೂ ನಮ್ಮ ಕ್ಲಾಸ್ ಎಂಬ ಬಿಡಾರ ಸೇರಿದೆವು. ಹೆಜ್ಜೆ ಇಡುತ್ತಿದ್ದಂತೆ ಎಲ್ಲಾ ಅಪರಿಚಿತ ಮೋರೆಗಳು ನಮ್ಮನ್ನು ದುರುಗುಟ್ಟಿ ನೋಡುವಂತೆ ಅನಿಸಿತು. “ಎಂಚಿನ ಅವಸ್ಥೆ ಮಾರ್ರೆ! ಉಂದು ಮಾತ ಬೋಡಾ?’ ಎಂದು ಮನಸ್ಸಿನಲ್ಲಿ ಒಂದು ಸಣ್ಣ ದನಿಯೂ ಕೇಳತೊಡಗಿತು. ಎಲ್ಲಾ ದೇವರುಗಳನ್ನು ಮನದಲ್ಲಿಯೇ ನೆನೆಯುತ್ತಾ ನಾಲ್ಕನೇ ಬೆಂಚಿನಲ್ಲಿ ಕುಳಿತುಬಿಟ್ಟೆ. ಎಲ್ಲಾ ಲೆಕ್ಚರರ್ ಬಂದು ಸ್ವಲ್ಪ ಸ್ವಲ್ಪ ಭಾಷಣ ಮುಗಿಸಿ ಹೋದರು. ಹಾಗೂ ಹೀಗೂ ಫಸ್ಟ್ ಡೇ ಆಫ್ ಕಾಲೇಜ್ ಮುಗಿಸಿ ಮನೆ ಸೇರಿದೆವು. ಮರುದಿನ ಮತ್ತೆ ಅದೇ ರಾಗ ಅದೇ ಹಾಡು. ಅಮ್ಮನಿಗೆ “ಟಾಟಾ ಬೈಬೈ’ ಹೇಳಿ ಕಾಲೇಜಿನತ್ತ ನಡೆದೆ. ಆದರೆ ಇಂದು ಕಾಲೇಜಿನಲ್ಲಿ ಸ್ವಲ್ಪ ಬದಲಾವಣೆ ಇತ್ತು. ದುರುಗುಟ್ಟಿ ನೋಡುವಂತೆ ತೋರುತ್ತಿದ್ದ ಕ್ಲಾಸ್‌ಮೇಟ್ಸ್‌ಗಳ ಕಣ್ಣುಗಳಲ್ಲಿ ಮಂದಹಾಸ ರಾರಾಜಿಸಿತ್ತು. ತುಟಿಯಲ್ಲಿ ಕಿರು ನಗೆಯ ಮೂಡಿಸಿ, ಎಲ್ಲರೊಂದಿಗೆ “ಹಾಯ್, ಹಲೋ’ ಎಂಬ ಸಂಭಾಷಣೆಗೆ ನಾಂದಿ ಹಾಡಿದೆವು. ಯಮದೂತರಂತೆ ತೋರುತ್ತಿದ್ದ ಲೆಕ್ಚರರ್ ಈಗ ನಮ್ಮ ಪರಮಮಿತ್ರರಾಗಿದ್ದಾರೆ. ನಮ್ಮೊಂದಿಗೆ ಬೆರೆತು, ಪ್ರೋತ್ಸಾಹ ನೀಡಿ, ನಮ್ಮೆಲ್ಲರ ಬೆನ್ನೆಲುಬಾಗಿ ನಿಂತ ಈ ಲೆಕ್ಚರರ್ಸ್ “ಬೆಸ್ಟ್ ಲೆಕ್ಚರರ್’ ಎನ್ನುವ ಮಾತಿನಲ್ಲಿ ಸಂಶಯವೇ ಇಲ್ಲ.
ಶಿವರಂಜಿನಿ, ಗೋವಿಂದದಾಸ ಕಾಲೇಜು, ಸುರತ್ಕಲ್