ಬೈರೂತ್: ಇತ್ತೀಚೆಗೆ ಬೈರೂತ್ ಮೇಲೆ ನಡೆಸಿದ ದಾಳಿಯಲ್ಲಿ ಹೆಜ್ಬುಲ್ಲಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಸನ್ ನಸರಲ್ಲಾಹ್ ಸಾವನ್ನಪ್ಪಿರುವುದಾಗಿ ಇಸ್ರೇಲ್ ಸೇನಾಪಡೆ(Israeli Military) ಶನಿವಾರ (ಸೆ.28) ಘೋಷಿಸಿದೆ.
ಹಸನ್ ನಸರಲ್ಲಾಹ್ ಅವರೊಂದಿಗೆ ಸಂಪರ್ಕ ಶುಕ್ರವಾರ ರಾತ್ರಿಯಿಂದ ಕಡಿತಗೊಂಡಿದೆ ಎಂದು ಹೆಜ್ಬುಲ್ಲಾ ನಿಕಟವರ್ತಿ ಮೂಲಗಳು ತಿಳಿಸಿರುವುದಾಗಿ ಎಎಫ್ ಪಿ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಹಸನ್ ನಸರಲ್ಲಾಹ್ ಸಾವು ಎಂದು ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಡಾವ್ ಶೋಷಾನಿ ತಮ್ಮ ಎಕ್ಸ್ ಖಾತೆಯಲ್ಲಿ ಘೋಷಿಸಿದ್ದಾರೆ. ಹೆಜ್ಬುಲ್ಲಾ ಉಗ್ರರು ನೂರಾರು ರಾಕೆಟ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನಾಪಡೆ ದಕ್ಷಿಣ ಮತ್ತು ಪೂರ್ವ ಲೆಬನಾನ್ ಮೇಲೆ ಹೆಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿತ್ತು.
ಈ ಸಂದರ್ಭದಲ್ಲಿ ಹೆಜ್ಬುಲ್ಲಾ ಬಾಹುಳ್ಯದ ದಕ್ಷಿಣ ಬೈರೂತ್ ಪ್ರದೇಶದ ಮೇಲೆ ಇಸ್ರೇಲ್ ಪಡೆ ಭಾರೀ ಪ್ರಮಾಣದ ಬಾಂಬ್ ದಾಳಿ ನಡೆಸಿದ ಪರಿಣಾಮ ಹಲವಾರು ಮನೆಗಳು ಧ್ವಂಸಗೊಂಡಿದ್ದವು.
ಹಸನ್ ನಸರಲ್ಲಾಹ್ ಇನ್ನು ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆ (Israel Defence Force) ಪ್ರಕಟನೆಯಲ್ಲಿ ತಿಳಿಸಿದೆ.
ಇದು ನಮ್ಮ ಕಾರ್ಯಾಚರಣೆಯ ಅಂತ್ಯವಲ್ಲ, ಅಂದರೆ ಇದು ಸರಳ ಸಂದೇಶವಾಗಿದೆ. ಯಾರೇ ಆಗಲಿ ಇಸ್ರೇಲ್ ಪ್ರಜೆಗಳನ್ನು ಬೆದರಿಸಿದರೂ ಅವರನ್ನು ಹೇಗೆ ಮಟ್ಟ ಹಾಕಬೇಕೆಂಬುದು ನಮಗೆ ಚೆನ್ನಾಗಿ ಗೊತ್ತಿದೆ ಎಂದು ಲೆಫ್ಟಿನೆಂಟ್ ಜನರಲ್ ಹೆರ್ಜೈ ಹಾಲ್ವಿ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.