Advertisement

ನಗುತ್ತಲೇ ಮಾತಾಡಿದ್ದ  ಹೆಝಲ್‌ ಸಾವನ್ನಪ್ಪಿದ್ದೇಕೆ?

10:04 AM Jul 28, 2018 | Team Udayavani |

* ಬಗೆಹರಿಯದ ಕಗ್ಗಂಟು  *ಆತ್ಮಹತ್ಯೆ ಮಾಡಿಕೊಳ್ಳುವಂಥ  ಸಮಸ್ಯೆಯೇ ಇರಲಿಲ್ಲ ! 

Advertisement

ಶಿರ್ವ: ರಾತ್ರಿ 7ರಿಂದ ಡ್ನೂಟಿ ಇದೆ. ಇನ್ನು ಮೂರು ಗಂಟೆ ನಿದ್ದೆ ಮಾಡುತ್ತೇನೆ ಎಂದು ವೀಡಿಯೋ ಕಾಲ್‌ ಮೂಲಕ ಕುಟುಂಬದವರೊಂದಿಗೆ ನಗುನಗುತ್ತ ಮಾತನಾಡಿದ್ದ ನರ್ಸ್‌ ಹೆಝಲ್‌ ನಿಗೂಢವಾಗಿ ಚಿರನಿದ್ರೆಗೆ ಜಾರಿದ್ದಾರೆ!
ಜು.19ರಂದು  ಸಂಜೆ 4 ಗಂಟೆಗೆ ತಾನು ದುಡಿಯುತ್ತಿದ್ದ ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯ ಅಲ್‌- ಮಿಕ್ವಾ ಜನರಲ್‌ ಆಸ್ಪತ್ರೆಯ ವಸತಿ ಗೃಹದಿಂದ ಹೆಝಲ್‌ ಕರೆ ಮಾಡಿದ್ದಾಗ ದನಿಯಲ್ಲಿ ಒಂಚೂರೂ ಆತಂಕ ಇರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂಥ ಸಮಸ್ಯೆಯೇ ಇರಲಿಲ್ಲ. ಆದ್ದರಿಂದಲೇ ಈ ಸಾವಿನ ಬಗ್ಗೆ ತೀವ್ರ ಶಂಕೆ ಇದೆ ಎಂದು ಪತಿ, ತಂದೆ ಮತ್ತು ಕುಟುಂಬಸ್ಥರು ಉದಯವಾಣಿಗೆ ತಿಳಿಸಿದ್ದಾರೆ. 

ರೂಂಗೆ ಹೋದಾಗ ಗೊತ್ತಾಗಿತ್ತು..
ಕಿನ್ನಿಗೋಳಿಯ ಮಹಿಳೆಯೊಬ್ಬರು ಸೌದಿಗೆ ತೆರಳಿದ್ದು, ಅವರು ಮಂಗಳೂರು ವಿಮಾನ ನಿಲ್ದಾಣದಿಂದ ಕರೆ ಮಾಡಿ ದ್ದಾಗ ಹೆಝಲ್‌ ಕರೆ ಸ್ವೀಕರಿಸಿದ್ದರು. ಮಾರನೇ ದಿನ ಅವರು ಸೌದಿ ತಲುಪಿದ್ದಾಗ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಮಹಿಳೆ ಹೆಝಲ್‌ ರೂಮಿಗೆ ಹೋದಾಗ ಪ್ರಕರಣ ಗೊತ್ತಾಗಿ ಊರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಹೆಝಲ್‌ ರೊಂದಿಗೆ ರೂಮಿ ನಲ್ಲಿದ್ದವರ ಪೈಕಿ ಒಬ್ಬರು ಪಾಕಿಸ್ಥಾನಿ. ಅವರು ರಜೆಯಲ್ಲಿ ಊರಿಗೆ ಹೋಗಿದ್ದು, ಇನ್ನಿಬ್ಬರು ಕೇರಳಿಗರು.

ಬರ್ತ್‌ಡೇಗೆ ಬರಬೇಕಿತ್ತು! 
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಹೆಝಲ್‌ ಅವರು ಅ. 27ಕ್ಕೆ ಅಕ್ಕ ರೆನ್ಸಿ ಫೆರ್ನಾಂಡಿಸ್‌ ಅವರ 
ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬರಬೇಕಿತ್ತು. ಈ ಬಗ್ಗೆ ಅವರು ಕುವೈಟ್‌ನಲ್ಲಿರುವ ತಂದೆಯೊಂದಿಗೆ ಮಾತುಕತೆ ನಡೆಸಿದ್ದರು. 

ಕನಸು ಈಡೇರಲಿಲ್ಲ
ಕುತ್ಯಾರು ಬಗ್ಗತೋಟ ರಸ್ತೆಯ ದಡ್ಡು ಬಳಿ ಹೆಝಲ್‌ ದಂಪತಿ ಮನೆ ನಿರ್ಮಿಸಿದ್ದರು. ಕಳೆದ 6 ವರ್ಷದಿಂದ ಸೌದಿಯಲ್ಲಿ ನರ್ಸ್‌ ಆಗಿದ್ದ ಅವರು ಐದೇ ವರ್ಷಕ್ಕೆ ರಾಜೀನಾಮೆ ನೀಡಿ ಸಿಗುವ ಸರಕಾರಿ ಸೌಲಭ್ಯ ಪಡೆದು ಊರಿಗೆ ಬರಬೇಕೆಂದುಕೊಂಡಿದ್ದರು. 10 ತಿಂಗಳ ಮೊದಲು ತಮ್ಮ ಮನೆ ಗೃಹ ಪ್ರವೇಶಕ್ಕೆ ಬಂದವರು ಈ ವಿಚಾರ ಮನೆಯವರೊಂದಿಗೆ ಹಂಚಿಕೊಂಡಿದ್ದರು.  

Advertisement

ಚಿನ್ನದ ಪದಕ ಪಡೆದಾಕೆ
ಮೃತ ಹೆಝಲ್‌ ಪ್ರತಿಭಾನ್ವಿತೆಯಾಗಿದ್ದು ಮಂಗಳೂರಿನ ಎ.ಜೆ.ಆಸ್ಪತ್ರೆ ಯಲ್ಲಿ ಕಲಿಯಿತ್ತಿರುವಾಗಲೇ ಬಿ.ಎಸ್ಸಿ ನರ್ಸಿಂಗ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. ಸೌದಿ ಆಸ್ಪತ್ರೆಯಲ್ಲಿ ನರ್ಸಿಂಗ್‌ಗೆ ಸಂಬಂಧಪಟ್ಟ ಪರೀಕ್ಷೆಯಲ್ಲಿ ಶೇ. 90 ಅಂಕ ಗಳಿಸಿ ಟಾಪರ್‌ ಆಗಿದ್ದರು. 

ತನಿಖೆ ಶುರು
ಸಾವಿನ ಕುರಿತ ತನಿಖೆ ಆರಂಭವಾಗಿದ್ದು, ಆಕೆ ರೂಮಿನಲ್ಲಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್‌, ಲ್ಯಾಪ್‌ಟಾಪ್‌ ವಶಪಡಿಸಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಕುಟುಂಬಿಕರಿಗೆ ಆಸ್ಪತ್ರೆ, ಅಲ್ಲಿನ ಸರಕಾರ ಮಾಹಿತಿ ನೀಡುತ್ತಿಲ್ಲ. ಫೋನ್‌ ಕರೆಗಳ ಮೇಲೆ ನಿಗಾ ಇರಿಸಲಾಗಿದೆ. ಇದರಿಂದ ಅಲ್ಲೇನು ನಡೆಯುತ್ತಿದೆ ಎನ್ನುವುದು ಮನೆ ಯವರಿಗೆ ತಿಳಿಯುತ್ತಿಲ್ಲ.ಸಚಿವಾಲಯ ಈ ಬಗ್ಗೆ ಪ್ರಕ್ರಿಯೆ ನಡೆಸುತ್ತಿದೆ.  

ಯಾರಿವರು ಹೆಝಲ್‌? 
ಹೆಝಲ್‌, ಕುತ್ಯಾರು ಬಗ್ಗತೋಟ ರಸ್ತೆ ದಡ್ಡು ನಿವಾಸಿ ಅಶ್ವಿ‌ನ್‌ ಮಥಾಯಸ್‌ ಅವರ ಪತ್ನಿ. ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು. ಕುತ್ಯಾರು ಅಗರ್‌ದಂಡೆ ನಿವಾಸಿ ರೋಬರ್ಟ್‌  ಮತ್ತು ಹೆಲೆನ್‌ ಕ್ವಾಡ್ರಸ್‌ ದಂಪತಿಯ ಓರ್ವ ಗಂಡು ಮತ್ತು 2 ಹೆಣ್ಣು ಮಕ್ಕಳಲ್ಲಿ ಈಕೆ 2ನೆಯವರು. ತಂದೆ ರೋಬರ್ಟ್‌ ಕ್ವಾಡ್ರಸ್‌ 39 ವರ್ಷಗಳಿಂದ ಕುವೈಟ್‌ನಲ್ಲಿದ್ದು 15 ವರ್ಷ ಸರಕಾರಿ ಸೇವೆ ಸಲ್ಲಿಸಿ, ಅಲ್ಲೇ ಉದ್ಯಮ ನಡೆಸುತ್ತಿದ್ದಾರೆ.

ಮೃತದೇಹ ರವಾನೆಗೆ 10-15 ದಿನ?
ಸೌದಿಯಲ್ಲಿ ಶುಕ್ರವಾರ, ಶನಿವಾರ ರಜೆ. ಇನ್ನು ಅಲ್ಲಿನ ಕಾನೂನಿನಂತೆ  ಶವ ಪರೀಕ್ಷೆ, ಸ್ಥಳ ತನಿಖೆ ಸಹಿತ ತನಿಖಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವರದಿಯನ್ನು ನ್ಯಾಯಾಧೀಶರ ಮುಂದೆ ಇರಿಸಬೇಕಿದೆ. ಅದನ್ನು ಮಾನ್ಯ ಮಾಡದಿದ್ದರೆ ಮತ್ತೆ ತನಿಖೆ ನಡೆಯಬೇಕು. ಬಳಿಕ ತೀರ್ಪನ್ನು ರಾಯಭಾರ ಕಚೇರಿಗೆ ಸಲ್ಲಿಸಬೇಕಿದೆ. ಆಕೆಯ ಸೊತ್ತು, ಸೌಲಭ್ಯಗಳ ಲೆಕ್ಕಾಚಾರ ಅಂತಿಮಗೊಳಿಸಿ ಮೃತ ದೇಹ ಭಾರತಕ್ಕೆ ಕಳುಹಿಸ ಬೇಕಿದೆ. ಇದಕ್ಕೆ  10-15 ದಿನ ಬೇಕು ಎನ್ನಲಾಗಿದೆ. 

ಹೆಝಲ್‌ ಜು.19ರಂದು ಲವಲವಿಕೆಯಿಂದಲೇ ನನ್ನೊಂದಿಗೆ ಮಾತನಾಡಿದ್ದಳು.ಈ ಸಾವಿನ ಬಗ್ಗೆ ಅನುಮಾನವಿದ್ದು ಈವರೆಗೆ ಯಾವುದೇ ಮಾಹಿತಿ ಇಲ್ಲ. ಕುಂದಾಪುರ ಎ.ಸಿ. ಕರೆ ಮಾಡಿ ಮಾಹಿತಿ ಕೇಳಿದ್ದಾರೆ.
-ಅಶ್ವಿ‌ನ್‌ ಮಥಾಯಸ್‌, ಪತಿ

 *ಸತೀಶ್ಚಂದ್ರ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next