Advertisement
ಸೇನಾಪುರಮನೆ ಚಂದ್ರಶೇಖರ ಶೆಟ್ಟಿ-ಹೇಮಾ ದಂಪತಿಯ ಪುತ್ರಿ ಧನ್ಯಾ ಕೆ. (22) ಮೃತಪಟ್ಟವರು. ಮನೆ ಸಮೀಪದಲ್ಲಿರುವ ಜಟ್ಟಿಗೇಶ್ವರ ದೈವಸ್ಥಾನದಿಂದ ಕಾಲುದಾರಿಯಲ್ಲಿ ಮರಳುತ್ತಿದ್ದಾಗ ಅದರ ಪೂರ್ವ ಪಾರ್ಶ್ವದ ಆವರಣ ಗೋಡೆ ಕುಸಿದು ಅವರ ಮೇಲೆ ಬಿದ್ದಿದೆ. ಕೆಂಪು ಕಲ್ಲುಗಳ ಅಡಿ ಸಿಲುಕಿದ್ದ ಅವರ ಮೇಲೆ ಮಳೆ ನೀರು ಹರಿದ ಕಾರಣ ಉಸಿರುಕಟ್ಟಿ ಮೃತಪಟ್ಟಿದ್ದಾರೆ.
ಅವರಣ ಗೋಡೆ ಬಿದ್ದ ಸ್ವಲ್ಪ ಸಮಯದ ಬಳಿಕ ಕಿರಿಮಂಜೇಶ್ವರ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೃತನ್ ಶೆಟ್ಟಿ ಈ ದಾರಿಯಾಗಿ ಬಂದಿದ್ದು, ಕಲ್ಲುಗಳ ಅಡಿಯಲ್ಲಿ ಯಾರೋ ಸಿಲುಕಿರುವುದನ್ನು ಕಂಡು ಮನೆಗೆ ಓಡಿಹೋಗಿ ವಿಷಯ ತಿಳಿಸಿದರು. ಸ್ಥಳೀಯರು ಬಂದು ಕಲ್ಲುಗಳನ್ನು ಸರಿಸಿ ನೋಡುವಷ್ಟರಲ್ಲಿ ಯುವತಿ ಮೃತಪಟ್ಟಾಗಿತ್ತು. ಗೋಡೆ ಕುಸಿದು ಆಗಲೇ ಸುಮಾರು 15 ನಿಮಿಷಗಳಾಗಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಈ ದಾರಿಯಲ್ಲಿ ಹೆಚ್ಚು ಜನಸಂಚಾರವಿಲ್ಲದ ಕಾರಣ ಘಟನೆ ಅರಿವಿಗೆ ಬರುವಾಗ ವಿಳಂಬವಾಗಿತ್ತು.
Related Articles
ಹೈದರಾಬಾದಿನಲ್ಲಿ ಹೊಟೇಲ್ ಕಾರ್ಮಿಕರಾಗಿರುವ ಚಂದ್ರಶೇಖರ ಶೆಟ್ಟಿ ಅವರ ಮೂವರು ಪುತ್ರಿಯರಲ್ಲಿ ಕೊನೆಯವರು ಧನ್ಯಾ. ಪ್ರತಿಭಾವಂತೆಯಾಗಿರುವ ಈಕೆ ಕುಂದಾಪುರದ ಭಂಡಾಕಾರ್ಸ್ ಕಾಲೇಜಿನಲ್ಲಿ ಬಿಎಸ್ಸಿ ಪೂರೈಸಿ, ಮಂಗಳಗಂಗೋತ್ರಿಯಲ್ಲಿ ಸಂಖ್ಯಾಶಾಸ್ತ್ರದಲ್ಲಿ ಪ್ರಥಮ ವರ್ಷದ ಎಂಎಸ್‌ಸಿ ಮುಗಿಸಿದ್ದಾರೆ. ರಜೆ ಇರುವುದರಿಂದ ಮನೆಗೆ ಬಂದು ಎರಡು ವಾರಗಳಷ್ಟೇ ಆಗಿದ್ದವು. ಜುಲೈ ಅಂತ್ಯಕ್ಕೆ ಕಾಲೇಜು ಆರಂಭವಾಗುವುದಿತ್ತು. ಅವರಿಗೆ ಅವಳಿ ಅಕ್ಕಂದಿರಿದ್ದು, ಒಬ್ಬರಿಗೆ ವಿವಾಹವಾಗಿದೆ.
Advertisement
ಈಚೆಗಷ್ಟೇ ಕಟ್ಟಿದ ಗೋಡೆದೈವಸ್ಥಾನದ ಸ್ಥಳ ಧನ್ಯಾ ನಡೆದು ಹೋಗಬೇಕಾಗಿದ್ದ ದಾರಿಗಿಂತ ಬಹಳ ಎತ್ತರದಲ್ಲಿದ್ದು, ಕಳೆದ ವರ್ಷ ದಾರಿಯ ಬುಡದಿಂದ ದೈವಸ್ಥಾನದ ಅಂಗಳದ ವರೆಗೆ ಗೋಡೆ ಕಟ್ಟಲಾಗಿದೆ. ಸುಮಾರು 12 ಮೀಟರ್ ಉದ್ದದ, 4.5 ಅಡಿ ಎತ್ತರದ ಇಡೀ ಗೋಡೆ ಕುಸಿದು ಬಿದ್ದಿದೆ. ನಿರ್ಮಾಣ ಸಂದರ್ಭ ಆವರಣದ ದೃಢತೆಗೆ ಗಮನ ನೀಡದಿದ್ದುದು ಹಾಗೂ ಇಂಟರ್‌ಲಾಕ್ ಅಳವಡಿಸಿದ್ದ ಜಾಗದ ಮಣ್ಣು ಮಳೆಯಿಂದ ಸಡಿಲಗೊಂಡುದು ಗೋಡೆ ಕುಸಿತಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯರು. ಗೋಡೆ ಉರುಳಿಸಿದ ಜನ
ಘಟನೆ ಬಳಿಕ ಸ್ಥಳದಲ್ಲಿ ಅಪಾರ ಜನ ಸೇರಿದ್ದು, ಅಪಾಯಕಾರಿ ಗೋಡೆಯನ್ನು ಪೂರ್ತಿಯಾಗಿ ಕೆಡಹಿದರು. ಅದರ ಸಮೀಪದಲ್ಲೇ ಧನ್ಯಾ ಅವರ ದೊಡ್ಡಮ್ಮನ ಮನೆ ಇದೆ. ಮಡುಗಟ್ಟಿದ ದುಃಖ
ಸುದ್ದಿ ತಿಳಿದ ತಂದೆ ಊರಿಗೆ ಹೊರಟಿದ್ದಾರೆ. ಮನೆ ಮಂದಿಯ ದುಃಖದ ಕಟ್ಟೆಯೊಡೆದಿತ್ತು. ಭೇಟಿ ನೀಡಿದ ಬಂಧುಗಳು, ಊರವರು ಮನೆಯವರನ್ನು ಸಂತೈಸುತ್ತಿದ್ದುದು ಕಂಡು ಬಂತು. ಜನಪ್ರತಿನಿಧಿಗಳ ಭೇಟಿ
ಬೈಂದೂರು ಎಸ್‌ಐ ತಿಮ್ಮೇಶ್ ಬಿ.ಎನ್. ಮತ್ತು ಸಿಬಂದಿ ಆಗಮಿಸಿ ಮಹಜರು ನಡೆಸಿದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಂದೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಹೆಚ್ಚುವರಿ ಎಸ್‌ಪಿ
ಕುಮಾರಚಂದ್ರ, ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಆಸ್ಪತ್ರೆಗೆ ಆಗಮಿಸಿ ಶವ ಪರಿಶೀಲನೆ ನಡೆಸಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಸ್ಥಳೀಯರಾದ ಹಿರಿಯ ಸಹಕಾರಿ ಧುರೀಣ ಎಸ್. ಪ್ರಕಾಶ್ಚಂದ್ರ
ಶೆಟ್ಟಿ, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ಶಂಕರ ಪೂಜಾರಿ, ವಿಜಯ ಶೆಟ್ಟಿ, ತಹಶೀಲ್ದಾರ್ ಕಿರಣ್ ಗೌರಯ್ಯ, ಪಿಡಿಒ ಗಿರಿಜಾ ವೀರಶೇಖರ್, ಗ್ರಾಮಲೆಕ್ಕಿಗ ಮಂಜು ಭೇಟಿ ನೀಡಿದ್ದರು. ಪರಿಹಾರಕ್ಕೆ ಸೂಚನೆ
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿರುವ ಕಾರಣ ಪಕ್ಷದ ಮುಖಂಡರು ಹಾಗೂ ತಹಶೀಲ್ದಾರರಿಗೆ ಸ್ಥಳಕ್ಕೆ ಭೇಟಿ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ. ತತ್‌ಕ್ಷಣ ಒದಗಿಸುವಂತೆ ತಿಳಿಸಿದ್ದೇನೆ. ಊರಿಗೆ ಬಂದ ಕೂಡಲೇ ಆಕೆಯ ಮನೆಗೆ ತೆರಳಿ ಮನೆಯವರಿಗೆ ಸಾಂತ್ವನ ಹೇಳುತ್ತೇನೆ; ವೈಯಕ್ತಿಕವಾಗಿಯೂ ನೆರವು ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ. ಎರಡೇ ಹೆಜ್ಜೆ ಮುಂದಿರಿಸಿದ್ದರೆ…
ದೇವರ ಮೇಲೆ ಅಪಾರ ನಂಬಿಕೆ ಹೊಂದಿರುವ ಧನ್ಯಾ ಪ್ರತಿದಿನ ಬೆಳಗ್ಗೆ ಮನೆ ಸಮೀಪದ ನಾಗ ಮತ್ತು ಜಟ್ಟಿಗೇಶ್ವರ ದೈವಸ್ಥಾನಕ್ಕೆ ತೆರಳಿ ಕೈ ಮುಗಿಯುವ ಕ್ರಮ ರೂಢಿಸಿಕೊಂಡಿದ್ದರು. ಎಂದಿನಂತೆ 8.15ರ ಸುಮಾರಿಗೆ ಮನೆಯಿಂದ ಹೊರಟಿದ್ದು, ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುವಾಗ ದುರಂತ ಸಂಭವಿಸಿದೆ. 8.45ರ ವೇಳೆಗೆ ಘಟನೆ ಅರಿವಿಗೆ ಬಂದಿದೆ. ಅವರ ದೇಹ ಉರುಳಿದ ಆವರಣ ಗೋಡೆಯ ಕೊನೆಯ ಭಾಗದಲ್ಲಿ ಇತ್ತು. ಎರಡು ಹೆಜ್ಜೆ ಮುಂದೆ ಹೋಗಿದ್ದರೆ ಸಾವನ್ನು ಗೆಲ್ಲಬಹುದಾಗಿತ್ತು. ಆದರೆ ವಿಧಿಯಾಟದ ನಡುವೆ ಪ್ರಾರ್ಥನೆ ಫಲಿಸಲಿಲ್ಲ. ದೈವಸ್ಥಾನದಿಂದ 100 ಮೀ. ಅಂತರದಲ್ಲಿ ಇವರ ಮನೆ ಇದೆ. ಈ ಸಂದರ್ಭ ಜೋರಾಗಿ ಮಳೆ ಸುರಿಯುತ್ತಿದ್ದ ಕಾರಣ ಆಕೆ ಕೂಗಿಕೊಂಡಿರಬಹುದಾದರೂ ಮನೆಮಂದಿಗೆ ಕೇಳಿಸಿಲ್ಲ ಎನ್ನಲಾಗಿದೆ.