Advertisement

ಹೇ, ಬೇಗ ಕೆಳಗಿಳಿಯೋ, ಜನ ಬರ್ತಿದ್ದಾರೆ!

06:00 AM Sep 04, 2018 | Team Udayavani |

ರಾತ್ರಿ ಒಂಬತ್ತು ಗಂಟೆಯಾಯ್ತು. ದೇವರ ಕುಣಿತ ಪ್ರಾರಂಭವಾಯಿತು. ಹಾಗೆಯೇ ಓಲಗದ ಬಡಿತವೂ ಪ್ರಾರಂಭವಾಯಿತು. ಓಲಗದ ಶಬ್ದ ಕೇಳಿದ ಊರಿನ ಜನರೆಲ್ಲ ಒಬ್ಬೊಬ್ಬರಾಗಿ ದೇವಸ್ಥಾನದ ಹತ್ತಿರ ಬಂದು ಕುಳಿತರು. ಆಗ ನಾವೆಲ್ಲಾ ಗೆಳೆಯರೂ ದೇವಸ್ಥಾನದಿಂದ ತೆಂಗಿನ ಮರದ ಕಡೆಗೆ ಹೊರಟೆವು.

Advertisement

ನಾನು ಆಗ ಒಂಬತ್ತನೇ ತರಗತಿಯಲ್ಲಿ. ಶಾಲೆಯಲ್ಲಿ ಆಟ ಪಾಠದ ಜೊತೆಗೆ ತುಂಟಾಟದಲ್ಲೂ ನಮ್ಮ ಗೆಳೆಯರ ಬಳಗ ಮುಂದಿತ್ತು. ಗೆಳೆಯರ ಬ್ಯಾಗಿನಿಂದ ಪೆನ್ನು- ಪೆನ್ಸಿಲ್‌ ಕದಿಯುವುದು, ಶಾಲೆ ಬಿಟ್ಟ ಮೇಲೆ ರೈತರ ಹೊಲದಲ್ಲಿನ ತೆಂಗಿನಕಾಯಿ, ಹಣ್ಣುಗಳನ್ನು ಕದಿಯುವುದು… ಹೀಗೆ ನಮ್ಮ ಚೇಷ್ಟೆಗಳಿಗೆ ಲೆಕ್ಕವೇ ಇರಲಿಲ್ಲ. ನಾವು ಯಾವುದನ್ನೂ ಸರಿಯಾದ ಪ್ಲ್ರಾನ್‌ ಇಲ್ಲದೆ ಮಾಡುತ್ತಿರಲಿಲ್ಲ. ಮೊದಲೇ 3-4 ಗೆಳೆಯರು ಒಂದೆಡೆ ಸೇರಿ, ಎಲ್ಲಿಗೆ ಹೋಗಬೇಕು? ಯಾವಾಗ ಹೋಗಬೇಕು? ಏನನ್ನು ಕದಿಯಬೇಕು? ಎಂದೆಲಾ ಪ್ಲ್ರಾನ್‌ ಹಾಕಿಕೊಂಡ ನಂತರವೇ ಕಾರ್ಯಾಚರಣೆಗೆ ಇಳಿಯುತ್ತಿದ್ದೆವು. 

 ನಮ್ಮೂರಿನ ದೇವಸ್ಥಾನದ ಹಿಂದೆ ಸ್ವಲ್ಪ ದೂರದಲ್ಲಿ ಒಂದು ಮನೆಯಿತ್ತು. ಆ ಮನೆಯ ಮುಂಭಾಗದಲ್ಲಿ ಒಂದು ತೆಂಗಿನ ಮರವಿತ್ತು. ಅದರಲ್ಲಿ ನೆಲದಿಂದ ಏಳೆಂಟು ಅಡಿ ಎತ್ತರದಲ್ಲಿ ಒಂದು ಎಳನೀರಿನ ಗೊನೆ ಇರುವುದು ನಮ್ಮ ಗುಂಪಿನ ಕಣ್ಣಿಗೆ ಬಿತ್ತು. ಗೊನೆಯ ಬಣ್ಣ, ದಪ್ಪನೆಯ ಗಾತ್ರ, ನುಣುಪಾದ ಮೇಲ್ಭಾಗವನ್ನು ಕಂಡು, ಹೇಗಾದರೂ ಮಾಡಿ ಎಳನೀರು ಕುಡಿಯಬೇಕೆಂಬ ಆಸೆಯಾಯಿತು. ಆದರೆ, ಮನೆಯ ಮುಂದೆಯೇ ಮರ ಇದ್ದಿದ್ದರಿಂದ ಹಗಲಿನಲ್ಲಿ ಕದಿಯಲು ಸಾಧ್ಯವೇ ಇರಲಿಲ್ಲ. ರಾತ್ರಿ ಹೊತ್ತಿನಲ್ಲಿ ಹೇಗೆ ಕದಿಯುವುದು ಎನ್ನುವ ಬಗ್ಗೆ ನಮ್ಮ ಗುಂಪಿನಲ್ಲಿ ಘನ ಗಂಭೀತ ಚರ್ಚೆ ನಡೆಯಿತು. ಆಗ ಗೆಳೆಯನೊಬ್ಬ, ನಾಲ್ಕೈದು ದಿನದಲ್ಲಿ ದಸರಾ ಹಬ್ಬ ಇರುವುದನ್ನು ನೆನಪಿಸಿದ. 

ದಸರಾ ಹಬ್ಬದಲ್ಲಿ ನಮ್ಮೂರಿನ ದೇವರ ಮೆರವಣಿಗೆ ಮಾಡಲಾಗುತ್ತದೆ. ಇಡೀ ರಾತ್ರಿ ದೇವರ ಹಾಗೂ ಸೋಮನ ಕುಣಿತವಿರುತ್ತದೆ. ವರ್ಷಕ್ಕೊಮ್ಮೆ ಕುಣಿಯುವ ದೇವರನ್ನು ನೋಡಲು ಊರಿನ ಜನರೆಲ್ಲಾ ಮನೆಗೆ ಬೀಗ ಹಾಕಿ ದೇವಸ್ಥಾನದ ಹತ್ತಿರ ಹೋಗುತ್ತಾರೆ. ಎಳನೀರು ಕದಿಯಲು ಅದೇ ಸುಸಮಯ ಎಂದು ನಾವೆಲ್ಲಾ ಒಮ್ಮತದಿಂದ ತೀರ್ಮಾನಿಸಿದೆವು. 

ಆ ದಿನ ಬಂದೇಬಿಟ್ಟಿತು. ಪೂಜಾರಿಗಳು ದೇವರನ್ನು ಒಡವೆಗಳಿಂದ ಸಿಂಗರಿಸಿ, ಹೂವುಗಳಿಂದ ಅಲಂಕಾರ ಮಾಡಿದರು. ಅಷ್ಟೊತ್ತಿಗಾಗಲೇ ರಾತ್ರಿ ಒಂಬತ್ತು ಗಂಟೆಯಾಯ್ತು. ದೇವರ ಕುಣಿತ ಪ್ರಾರಂಭವಾಯಿತು. ಹಾಗೆಯೇ ಓಲಗದ ಬಡಿತವೂ ಪ್ರಾರಂಭವಾಯಿತು. ಓಲಗದ ಶಬ್ದ ಕೇಳಿದ ಊರಿನ ಜನರೆಲ್ಲ ಒಬ್ಬೊಬ್ಬರಾಗಿ ದೇವಸ್ಥಾನದ ಹತ್ತಿರ ಬಂದು ಕುಳಿತರು. ಆಗ ನಾವೆಲ್ಲಾ ಗೆಳೆಯರೂ ದೇವಸ್ಥಾನದಿಂದ ತೆಂಗಿನ ಮರದ ಕಡೆಗೆ ಹೊರಟೆವು. ತೆಂಗಿನ ಮರದ ಹತ್ತಿರ ಹೋಗಿ ಒಮ್ಮೆ ಸುತ್ತಲು ನೋಡಿದೆವು. ಯಾರೂ ಕಾಣಲಿಲ್ಲ. ನಮ್ಮಲ್ಲೊಬ್ಬ ತೆಂಗಿನ ಮರವನ್ನು ಏರಿದ. ಉಳಿದವರು ಸ್ವಲ್ಪ ದೂರದಲ್ಲಿ ಕಾಯುತ್ತಾ ಕುಳಿತುಕೊಂಡೆವು. 

Advertisement

ಮರ ಏರಿದವನು ಏಳೆಂಟು ಎಳನೀರನ್ನು ಕಿತ್ತು ನೆಲಕ್ಕೆ ಹಾಕಿದ. ನಾವು ಪಿಸುಮಾತಿನಲ್ಲಿ, “ಹೇ, ಸಾಕು! ಕೆಳಗಿಳಿಯೋ’ ಎಂದು ಹೇಳಿದೆವು. ಇನ್ನೇನು ಅವನು ಕೆಳಗಿಳಿಯಬೇಕು, ಅಷ್ಟರಲ್ಲಿ ಧಾರಾಕಾರ ಮಳೆ ಸುರಿಯತೊಡಗಿತು. ದೇವರ ಕುಣಿತ ನೋಡುತ್ತಿದ್ದವರೆಲ್ಲ, ಮಳೆಯಿಂದ ಪಾರಾಗುವ ಅವಸರದಲ್ಲಿ, ಸಂದಿಗೊಂದಿಗಳಲ್ಲಿ ನುಗ್ಗುತ್ತ ತಂತಮ್ಮ ಮನೆಯ ಕಡೆ ಓಡಿದರು. ಜನರು ಓಡಿ ಬರುತ್ತಿರುವುದನ್ನು, ಮರದ ಕೆಳಗೆ ಕುಳಿತಿದ್ದ ನಾವು ನೋಡಿದೆವು. ತಕ್ಷಣ ಮರದ ಮೇಲಿದ್ದವನಿಗೆ “ಹೇ, ಬೇಗ ಕೆಳಗಿಳಿಯೋ! ಜನ ಬರ್ತಿದ್ದಾರೆ’ ಎಂದು ಹೇಳಿ, ನಮ್ಮ ಮನೆ ಕಡೆ ಓಡಿದೆವು. ಅವನು ಮರದಿಂದ ಕೆಳಕ್ಕೆ ಧುಮುಕಿ, ನಮ್ಮ ಹಿಂದೆಯೇ ಓಡಿಬಂದ. ಮನೆ ಸೇರುವಷ್ಟರಲ್ಲಿ ಬಟ್ಟೆಯೆಲ್ಲಾ ಒದ್ದೆಯಾಗಿತ್ತು. ದೇವರ ಕುಣಿತ ನೋಡಲು ಹೋಗಿದ್ದ ಅಪ್ಪ ಅಮ್ಮ ಸಹ ಮಳೆಯಲ್ಲಿ ನೆನೆದು ಓಡಿ ಬಂದಿದ್ದರು. ನಾನು ದೇವರು ನೋಡಲು ಹೋಗಿದ್ದವನಂತೆ ನಟಿಸಿ, ಒದ್ದೆ ಬಟ್ಟೆ ಬದಲಿಸಿ ಮಲಗಿಕೊಂಡೆ. 

ಬೆಳಗ್ಗೆ ಏನೋ ಸದ್ದು ಕೇಳಿ ಎಚ್ಚರವಾಯಿತು. ಮಲಗಿದ್ದವನು ಎದ್ದು ಹೊರಗೆ ಬಂದೆ. ಯಾರೋ ಗಲಾಟೆ ಮಾಡುತ್ತಿರುವಂತೆ ಕೇಳಿಸಿತು. ಯಾರಿರಬಹುದೆಂದು ನೋಡಲು ಮನೆಯ ಅಂಗಳದ ಮುಂದಕ್ಕೆ ಹೋದೆ. ನಾವು ಎಳನೀರು ಕಿತ್ತಿದ್ದ ಆ ಮನೆಯ ಹೆಂಗಸು ಜೋರಾಗಿ ಬೈದುಕೊಳ್ಳುತ್ತ, ಶಾಪ ಹಾಕುತ್ತಾ ಗೋಳಾಡುತ್ತಿದ್ದಳು. ನಾನು ಏನೂ ತಿಳಿಯದವನಂತೆ ಮನೆಯ ಒಳಗೆ ಹೋದೆ.

ಸಣ್ಣಮಾರಪ್ಪ, ದೇವರಹಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next