Advertisement

ಪ್ರೊ ಕಬಡ್ಡಿಗೆ ಎದುರಾಗಿ ಹೇ ಕಬಡ್ಡಿ ಆರಂಭ

12:54 PM Jan 21, 2018 | |

ಬೆಂಗಳೂರು: ಒಂದು ಕಡೆ ಪ್ರೊಕಬಡ್ಡಿ ದಿನಾಂಕ ಪ್ರಕಟವಾಗಿದೆ. ಈ ಬೆನ್ನಲ್ಲೇ ದೇಶದಲ್ಲಿ ಅದೇ ಮಾದರಿಯಲ್ಲಿ ಮತ್ತೂಂದು ಕಬಡ್ಡಿ ಲೀಗ್‌ ಆಯೋಜನೆಗೊಳ್ಳಲಿದೆ ಎನ್ನುವ ಅಧಿಕೃತ ಸುದ್ದಿ ಹೊರಬಿದ್ದಿದೆ. 

Advertisement

ಈ ವಿಷಯವನ್ನು ಬೆಂಗಳೂರಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕಬಡ್ಡಿ ಸಂಸ್ಥೆ ಅಧ್ಯಕ್ಷ ಎಂ.ವಿ.ಪ್ರಸಾದ್‌ಬಾಬು ಹೇಳಿದ್ದಾರೆ. ದೇಶದಲ್ಲಿ ಪ್ರೊ ಕಬಡ್ಡಿ ಮಾದರಿಯಲ್ಲಿಯೇ ಅದ್ಧೂರಿಯಾಗಿ ಹೇ ಕಬಡ್ಡಿ ಕೂಟ ಆರಂಭಿಸಲಿದ್ದೇವೆ. ಇದಕ್ಕಾಗಿ ಎಲ್ಲ ತಯಾರಿ ನಡೆಸಿಕೊಂಡಿದ್ದೇವೆ ಎಂದು ತಿಳಿಸಿದರು. 

ಬೆಂಗಳೂರಲ್ಲಿ ಏಷ್ಯನ್‌ ಕೂಟ: ಫೆ.8ರಿಂದ 11ರವರೆಗೆ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ 2ನೇ  ರಾಷ್ಟ್ರೀಯ ಕಬಡ್ಡಿ ಕೂಟವನ್ನು ಜೈಪುರದಲ್ಲಿ ಆಯೋಜಿಸುತ್ತಿದ್ದೇವೆ. ಇದಕ್ಕೂ ಮೊದಲು ಈ ಕೂಟಕ್ಕೆ ಕರ್ನಾಟಕ ತಂಡವನ್ನು ರಚಿಸಬೇಕಿದೆ. ಇದಕ್ಕಾಗಿ ಅವಿಘ್ನ ನ್ಪೋರ್ಟ್ಸ್ ಕ್ಲಬ್‌ ಸಹಕಾರದೊಂದಿಗೆ ದೊಡ್ಡಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಕೂಟ ಏರ್ಪಡಿಸುತ್ತಿದ್ದೇವೆ ಎಂದು ಬಾಬು ತಿಳಿಸಿದರು.

ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಪುರುಷರ ಮತ್ತು ಮಹಿಳಾ ಆಟಗಾರ್ತಿಯರು ರಾಜ್ಯ ತಂಡವನ್ನು ರಾಷ್ಟ್ರೀಯ ಕೂಟದಲ್ಲಿ ಪ್ರತಿನಿಧಿಸಲಿದ್ದಾರೆ. ಇದಾದ ಬಳಿಕ ಭಾರತ ತಂಡಕ್ಕೆ ಕ್ರಮವಾಗಿ ಪುರುಷರ ಹಾಗೂ ಮಹಿಳಾ ತಂಡ ಪ್ರಕಟವಾಗಲಿದೆ. ಮೇ ಅಂತ್ಯದಲ್ಲಿ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಏಷ್ಯನ್‌ ಕಬಡ್ಡಿ ಚಾಂಪಿಯನ್‌ಶಿಪ್‌ ನಡೆಯಲಿದೆ.

ಬಳಿಕವಷ್ಟೇ ಹೇ ಕಬಡ್ಡಿ ಕೂಟಕ್ಕೆ ದಿನಾಂಕ ಪ್ರಕಟವಾಗಲಿದೆ. ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಬೆಂಗಳೂರು ಸೇರಿದಂತೆ ಒಟ್ಟಾರೆ 5 ಕಡೆ ಕೂಟ ಆಯೋಜಿಸಲಾಗುತ್ತಿದೆ. ಖ್ಯಾತ ಖಾಸಗಿ ವಾಹಿನಿಯೊಂದು ಕೂಟದ ನೇರ ಪ್ರಸಾರಕ್ಕೆ ಮುಂದೆ ಬಂದಿದೆ ಎಂದು ಬಾಬು ವಿವರಿಸಿದರು. 

Advertisement

ಗೆಹ್ಲೋಟ್‌ ವಿರುದ್ಧ ಹರಿಹಾಯ್ದ ಬಾಬು: ಇದೇ ವೇಳೆ ಹಾಲಿ ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟದ ಅಧ್ಯಕ್ಷ ಜನಾರ್ದನ್‌ ಸಿಂಗ್‌ ಗೆಹ್ಲೋಟ್‌ಗೆ ವಿರುದ್ಧ ಪ್ರಸಾದ್‌ಬಾಬು ಹರಿಹಾಯ್ದರು. ಗೆಹ್ಲೋಟ್‌ ಮತ್ತು ಅವರ ಕುಟುಂಬ ದೇಶದ ಕಬಡ್ಡಿಯನ್ನು 54 ವರ್ಷದಿಂದ ಆಡಳಿತ ನಡೆಸಿಕೊಂಡು ಬಂದಿದ್ದಾರೆ. ಅವರ ಇಡೀ ಕುಟುಂಬ ಅಧಿಕಾರಕ್ಕೆ ಅಂಟಿ ಕುಳಿತಿದೆ.  ಪರಿಣಾಮ ಕಬಡ್ಡಿ ದೇಶದಲ್ಲಿ ಕುಸಿದೆ.

ಇದೇ ಕಾರಣದಿಂದ ಮಾಜಿ ಕಬಡ್ಡಿ ಪಟುಗಳಾದ ಅರ್ಜುನ ಪ್ರಶಸ್ತಿ ವಿಜೇತ ಸಿ.ಹೊನ್ನಪ್ಪ ಗೌಡ, ಸೀತಾರಾಮ್‌, ಗೋಪಾಲಪ್ಪ, ಚಿನ್ನಸ್ವಾಮಿ ಸೇರಿದಂತೆ ಅನೇಕ ಮಾಜಿ ಕಬಡ್ಡಿ ಪಟುಗಳ ಜತೆಗೂಡಿ ಯುವಕರಿಗೆ ಹೆಚ್ಚಿನ ಅವಕಾಶ ಮಾಡಿಕೊಡುವುದಕ್ಕಾಗಿ ಕಬಡ್ಡಿ ಲೀಗ್‌ ಆಯೋಜಿಸುತ್ತಿರುವುದಾಗಿ ತಿಳಿಸಿದರು. 

ಸದ್ಯ ಭಾರತದಲ್ಲಿ ಎರಡು ಬಣಗಳಿವೆ. ಒಂದು ಜನಾರ್ದನ್‌ ಸಿಂಗ್‌ ಗೆಹ್ಲೋಟ್‌ ಅವರ ಎಕೆಎಫ್ಐ  (ಅಖೀಲ ಭಾರತೀಯ ಕಬಡ್ಡಿ ಒಕ್ಕೂಟ) ಮತ್ತೂಂದು ನ್ಯೂ ಕಬಡ್ಡಿ ಫೆಡರೇಷನ್‌ ಆಫ್ ಇಂಡಿಯಾ (ಎನ್‌ಕೆಎಫ್ಐ). ಪ್ರಸಾದ್‌ ಬಾಬು ಅವರು ಹಾಲಿ ಎನ್‌ಕೆಎಫ್ಐನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಸದ್ಯ ಈ ಎರಡು ಬಣಗಳಲ್ಲಿ ಸ್ಟಾರ್‌ ನ್ಪೋರ್ಟ್ಸ್ ಜತೆಗೂಡಿ ಪ್ರೊಕಬಡ್ಡಿ ನಡೆಸುತ್ತಿರುವುದು ಎಕೆಎಫ್ಐ. 

Advertisement

Udayavani is now on Telegram. Click here to join our channel and stay updated with the latest news.

Next