ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆ ಕುರಿತು ಈಗಾಗಲೇ ಹಲವು ಚಿತ್ರಗಳು, ಕಿರುಚಿತ್ರಗಳು ಮೂಡಿಬಂದಿವೆ. ಆ ಸಾಲಿಗೆ
“ಹೇ ಡಾರ್ಲಿಂಗ್’ ಕಿರುಚಿತ್ರವೂ ಸೇರಿದೆ. ಅಕಿಯೋ ಪ್ರವೀಣ್ ಕುಮಾರ್ ಕಥೆ, ಚಿತ್ರಕಥೆ ರಚಿಸಿ 30 ನಿಮಿಷದ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಕಿರುಚಿತ್ರದಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ, ಅತ್ಯಾಚಾರ ಸೇರಿದಂತೆ ಇನ್ನಿತರೆ ವಿಷಯಗಳನ್ನು ಹೇಳಲಾಗಿದೆ.
“ಹೆಣ್ಣಿಗೆ ಹೆಣ್ಣೇ ವೈರಿ ಎಂಬ ಮಾತಿದೆ. ಆದರೆ, ಅದೇ ಹೆಣ್ಣು, ತನ್ನ ಬದುಕನ್ನು ಕತ್ತಲಾಗಿಸಿಕೊಂಡು, ಅದೆಷ್ಟೋ ಹೆಣ್ಣುಮಕ್ಕಳನ್ನು ತನಗೆ ಅರಿವಿಲ್ಲದೆ ರಕ್ಷಣೆ ಮಾಡುತ್ತಿದ್ದಾಳೆ. ಅಂತಹ ಹೆಣ್ಣುಮಕ್ಕಳ ಕುರಿತು ಈ ಚಿತ್ರ ಮೂಡಿಬಂದಿದೆ. ಪ್ರಸ್ತುತ ದಿನಗಳಲ್ಲಿ ಅತ್ಯಾಚಾರಗಳ ಸಂಖ್ಯೆ ಕಡಿಮೆಯಾಗುತ್ತಿವೆ ಅನ್ನುವುದಾದರೆ, ಅದಕ್ಕೆ ಕಾರಣ ವೇಶ್ಯೆಯರು. ಚಿತ್ರದ ಕ್ಲೈಮಾಕ್ಸ್‌ನಲ್ಲಿ ನಾಯಕ,
ವೇಶ್ಯೆಯರಿಗೆ ಸೀರೆ ಕೊಡುತ್ತಾನೆ. ಅವರು ಅದನ್ನು ಸ್ವೀಕರಿಸಿ, “ದಯವಿಟ್ಟು ಅತ್ಯಾಚಾರ ಮಾಡಬೇಡಿ’ ಅಂತ ಪುರುಷ ಸಮಾಜಕ್ಕೊಂದು ಸಂದೇಶ ರವಾನಿಸುತ್ತಾರೆ. ಅದು ಚಿತ್ರದ ಹೈಲೈಟ್. ಯಾಕೆ ಹಾಗೆ ಹೇಳುತ್ತಾರೆ ಎಂಬುದೇ ಕಥೆ ಎನ್ನುತ್ತಾರೆ
ಪ್ರವೀಣ್ ಕುಮಾರ್.
ಅಂದು ಚಿತ್ರ ವೀಕ್ಷಿಸಿದ ನಿರ್ದೇಶಕ ಕೋಡ್ಲು ರಾಮಕೃಷ್ಣ , “ನಮ್ಮ ಕಾಲದಲ್ಲಿ ಕಿರುಚಿತ್ರದ ಪರಿಕಲ್ಪನೆಯೇ ಇರಲಿಲ್ಲ. ಏನಿದ್ದರೂ ಎರಡೂವರೆ ಗಂಟೆಯಲ್ಲಿ ಎಲ್ಲವನ್ನು ಹೇಳಬೇಕಿತ್ತು. ಇಷ್ಟೊಂದು ಗಂಭೀರ ವಿಷಯವನ್ನು ಕೇವಲ ಅರ್ಧ ಗಂಟೆಯಲ್ಲಿ ತೋರಿಸುವುದು ತುಂಬ ಕಷ್ಟ. ನಿರ್ದೇಶಕರ ಜಾಣ್ಮೆ ಇಲ್ಲಿ ಕಾಣುತ್ತದೆ’ ಎಂದರು ಕೂಡ್ಲು. ವಿಧಾನ ಪರಿಷತ್ ಸದಸ್ಯ ಶರವಣ, ರಾಜ್ ಬಹದ್ದೂರ್, ಅಲ್ತಾಫ್ ಖಾನ್ ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕಿ ಭಾರ್ಗವಿ ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಈ ಹಿಂದೆ “ಒನ್‌ವೇ’ ಚಿತ್ರ ಮಾಡಿ ನಷ್ಟ ಅನುಭವಿಸಿದ್ದ ಅವರಿಗೆ, ಈ ಕಥೆ ಕೇಳಿ, ನಿರ್ಮಾಣ ಮಾಡಬೇಕೆನಿಸಿದ್ದರಿಂದ ಕಿರುಚಿತ್ರ ಮಾಡಿದ್ದಾಗಿ ಹೇಳಿಕೊಂಡರು ಅವರು. “ಒನ್ ವೇ’ ಚಿತ್ರದಲ್ಲಿ ನಟಿಸಿದ್ದ ಕಿರಣ್‌ರಾಜ್ ಇಲ್ಲಿ ನಾಯಕರಾಗಿದ್ದಾರೆ. ಉಳಿದಂತೆ ಶೃತಿ ರಾವ್, ರಾಣಿರಾವ್, ಶ್ರೀನಿವಾಸ್, ಪಲ್ಲವಿ, ಪುಷ್ಪ ರಂಗಾಯಣ, ಬೇಬಿ ಅವ್ಯಕ್ತ ಇವರೆಲ್ಲರಿಗೂ ಇದು ಮೊದಲ ಅನುಭವ.
ಛಾಯಾಗ್ರಾಹಕ ಶಂಕರ್‌ಗೆ ಇದು ಮೊದಲ ಚಿತ್ರ. ಅಂತೆಯೇ ಸಂಗೀತ ನಿರ್ದೇಶಕ ಮೊಟ್ಟು ಅವರಿಗೂ ಇದು ಚೊಚ್ಚಲ ಚಿತ್ರ. ಪ್ರತಾಪ್ ಸಂಕಲನ ಮಾಡಿದ್ದಾರೆ.