Advertisement

ವಿಜೃಂಭಣೆಯ ಹೆತ್ತೇನಹಳ್ಳಿಯಮ್ಮನ ರಥೋತ್ಸವ

09:03 PM Feb 25, 2020 | Lakshmi GovindaRaj |

ತುಮಕೂರು: ಇತಿಹಾಸ ಪ್ರಸಿದ್ಧ ಹೆತ್ತೇನಹಳ್ಳಿಯ ಶ್ರೀ ಮಾರಮ್ಮ ಆದಿಶಕ್ತಿ ದೇವಿಯ ಜಾತ್ರಾ ಮಹೋತ್ಸವ ಕಳೆದ ರಾತ್ರಿಯಿಂದ ಆರಂಭವಾಗಿದ್ದು, ಶ್ರೀ ಅಮ್ಮನವರ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಮಂಗಳವಾರ ಬೆಳಗಿನ ಜಾವದಲ್ಲಿ ಅದ್ಧೂರಿಯಾಗಿ ಜರುಗಿತು. ಪ್ರತಿ ವರ್ಷದಂತೆ ಈ ಬಾರಿಯೂ ನಸುಕಿನಲ್ಲಿ ನಡೆದ ಹೆತ್ತೇನಹಳ್ಳಿಯಮ್ಮನ ರಥೋತ್ಸವಕ್ಕೆ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತ ಸಮೂಹ ಸಾಕ್ಷಿಯಾಯಿತು.

Advertisement

ಹರಕೆ ತೀರಿಸಿದ ಭಕ್ತರು: ತಾಲೂಕಿನ ಗೂಳೂರು ಹೋಬಳಿಯ ಹೆತ್ತೇನಹಳ್ಳಿ, ಕೈದಾಳ, ಗೂಳೂರು, ಕಂಭತ್ತನಹಳ್ಳಿ, ರಂಗಯ್ಯನಪಾಳ್ಯ, ಚಿಕ್ಕಸಾರಂಗಿ, ನರುಗನಹಳ್ಳಿ, ಮಾಯಣ್ಣಗೌಡನ ಪಾಳ್ಯ ಸೇರಿದಂತೆ ಈ ಭಾಗದ ಹಳ್ಳಿಗಳಲ್ಲಿ ಹೆತ್ತೇನಹಳ್ಳಿಯಮ್ಮನ ಜಾತ್ರೆಗೆ ವಿಶೇಷವಾಗಿಯೇ ಭಕ್ತ ಸಮೂಹ ಸಜ್ಜಾಗುತ್ತಾರೆ. ಅದರಂತೆ ಸೋಮವಾರ ಇಡೀ ದಿನ ಭಕ್ತರು ಉಪವಾಸ ವ್ರತ ಮಾಡಿ, ಮಧ್ಯರಾತ್ರಿ ಅಗ್ನಿಕೊಂಡ ಹಾಯ್ದು ಅಮ್ಮನವರಿಗೆ ಹರಕೆ ತೀರಿಸಿದರು.

ಬಾಯಿಬೀಗ ಹರಕೆ: ಇನ್ನು ಈ ಭಾಗದ ಹೆಣ್ಣು ಮಕ್ಕಳು ಅಮ್ಮನವರಿಗೆ ಬಾಯಿ ಬೀಗದ ಹರಕೆ ತೀರಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹದಿ ಹರೆಯದ ಹೆಣ್ಣು ಮಕ್ಕಳು, ಮಹಿಳೆಯರು ಸಹ ಉಪವಾಸ ವ್ರತ ಮಾಡಿ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ಬಾಯಿಬೀಗ ಹಾಕಿಸಿಕೊಂಡು ಪೂಜೆ ಸಲ್ಲಿಸುವ ಮೂಲಕ ತಮ್ಮ ಹರಕೆ ತೀರಿಸಿದರು. ಹೆತ್ತೇನಹಳ್ಳಿ ಜಾತ್ರೆಗೆಂದೇ ಕಂಭತ್ತನಹಳ್ಳಿಯ ವೀರ ಮಕ್ಕಳು ಒಂದು ವಾರದಿಂದ ಉಪವಾಸವಿದ್ದು, ರಾತ್ರಿ ಮೊಟ್ಟ ಮೊದಲ ಬಾರಿಗೆ ಅಗ್ನಿಕೊಂಡ ಹಾಯುವ ಮೂಲಕ ಹರಕೆ ತೀರಿಸಿದ್ದು ವಿಶೇಷವಾಗಿತ್ತು.

ಮುಗಿಲು ಮುಟ್ಟಿದ ಹರ್ಷೋದ್ಘಾರ: ನಾಡಿನ ನಾನಾ ಕಡೆಗಳಿಂಗ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತ ಸಮೂಹ ಅಗ್ನಿಕೊಂಡ ಹಾಯ್ದ ಬಳಿಕ ವಿವಿಧ ಬಗೆಯ ಪುಷ್ಪಗಳಿಂದ ವರ್ಣರಂಜಿತವಾಗಿ ಅಲಂಕರಿಸಲಾಗಿದ್ದ ರಥಕ್ಕೆ ಹೆತ್ತೇನಹಳ್ಳಿಯಮ್ಮ ದೇವಿಯನ್ನು ಕೂರಿಸುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಅಮ್ಮನವರನ್ನು ರಥಕ್ಕೆ ಕೂರಿಸಿದ ಬಳಿಕ ಭಕ್ತರು ರಥವನ್ನು ಎಳೆಯಲು ನಾ. ಮುಂದು, ತಾ. ಮುಂದು ಎಂದು ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂತು.

ಅಮ್ಮನವರ ಅರ್ಚಕರು, ತಹಶೀಲ್ದಾರ್‌ ರಥದ ಗಾಲಿಗೆ ತೆಂಗಿನ ಕಾಯಿ ಒಡೆದು ಅಮ್ಮನವರಿಗೆ ಪೂಜೆ ಸಲ್ಲಿಸಿದ ನಂತರ ರಥದ ಗಾಲಿ ಒಂದು ಸುತ್ತು ಉರುಳುತ್ತಿದ್ದಂತೆ ಭಕ್ತರು ಶ್ರದ್ಧಾ ಭಕ್ತಿಯಿಂದ ರಥಕ್ಕೆ ಹೂವು, ದವನ, ಬಾಳೆಹಣ್ಣು ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡಿಕೊಂಡಿದ್ದ ಹರಕೆಯನ್ನು ತೀರಿಸಿದರು. ಇಡೀ ರಾತ್ರಿ ಹೆತ್ತೇನಹಳ್ಳಿಯಲ್ಲಿ ಜಮಾಯಿಸಿದ್ದ ಭಕ್ತ ಸಮೂಹ ಅಗ್ನಿಕೊಂಡ ಹಾಯ್ದು, ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

Advertisement

ಹೆತ್ತೇನಹಳ್ಳಿಗೆ ರಾತ್ರಿ ಭೇಟಿ ನೀಡಿದ ಮಾಜಿ ಶಾಸಕ ಬಿ. ಸುರೇಶ್‌ ಗೌಡ ಅವರು, ದೇವಾಲಯಕ್ಕೆ ತೆರಳಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.  ನಂತರ ದೇವಾಲಯದಲ್ಲಿ ಭಕ್ತರಿಗಾಗಿ ಸಿದ್ದಪಡಿಸಿದ್ದ ಪ್ರಸಾದವನ್ನು ಸ್ವೀಕರಿಸಿ, ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು. ಈ ವೇಳೆ ಜಿಪಂ ಸದಸ್ಯ ಶಿವಕುಮಾರ್‌ ಇದ್ದರು. ಹೆತ್ತೇನಹಳ್ಳಿಯಮ್ಮನ ಜಾತ್ರೆ ಒಂದು ವಾರ ಕಾಲ ನಡೆಯಲಿದ್ದು, ಶನಿವಾರದ ವರೆಗೂ ಭಕ್ತಾದಿಗಳ ದಂಡು ಹೆತ್ತೇನಹಳ್ಳಿಗೆ ಹರಿದು ಬರುವ ನಿರೀಕ್ಷೆಯಿದೆ.

ಹೆತ್ತೇನಹಳ್ಳಿಯಮ್ಮ ಎಂದರೆ ನಾಡಿನ ನಾನಾ ಕಡೆ ನೆಲೆಸಿರುವ ಭಕ್ತರಿಗೆ ಭಕ್ತಿ ಭಾವ ಹೆಚ್ಚು. ತನ್ನ ಸಂಪ್ರದಾಯದಂತೆ ನಡೆದುಕೊಳ್ಳುವ ಭಕ್ತರಿಗೆ ಹೆತ್ತೇನಹಳ್ಳಿಯಮ್ಮ ಹರಸುತ್ತಾ ತನ್ನ ಮಕ್ಕಳಂತೆ ಕಾಪಾಡುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ. ಕಳೆದ 4 ವರ್ಷಗಳ ಹಿಂದೆ ಇದೇ ಹೆತ್ತೇನಹಳ್ಳಿ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವಾಗ ಕೊಂಡದಲ್ಲಿ ಬಿದ್ದು 4 ಮಂದಿ ಮೃತಪಟ್ಟು, ಸುಮಾರು 35ಕ್ಕೂ ಮಂದಿ ಗಾಯಗೊಂಡಿದ್ದರು.

ಅಂದಿನಿಂದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಅಗ್ನಿಕೊಂಡ ನಡೆಯುವ ಸಂದರ್ಭದಲ್ಲಿ ಬಿಗಿ ಭದ್ರತೆಯೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದೆ. ಒಂದು ವಾರಗಳ ಕಾಲ ನಡೆಯಲಿರುವ ಹೆತ್ತೇನಹಳ್ಳಿ ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತರ ಘಟನೆಗಳು, ಕಳ್ಳತನಗಳು ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next