Advertisement

ನಾಯಿಗಳ ಎಬಿಸಿಗೆ ಹಿಂದೇಟು!

12:44 AM Jan 21, 2020 | Lakshmi GovindaRaj |

ಬೆಂಗಳೂರು: ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ (ಎನಿಮಲ್‌ ಬರ್ಥ್ ಕಂಟ್ರೋಲ್‌- ಎಬಿಸಿ) ಪ್ರಕ್ರಿಯೆಗೆ ಒಳಪಡಿಸುವಾಗ ನಾಯಿಗಳು ತಪ್ಪಿಸಿ ಕೊಂಡು ಓಡುವುದು ಸಾಮಾನ್ಯ. ಈಗ ಬೆಂಗಳೂರು ಪೂರ್ವ ಹಾಗೂ ಬೊಮ್ಮನಹಳ್ಳಿ ಎರಡು ವಲಯ ಗಳಲ್ಲಿ ಟೆಂಡರ್‌ದಾರರೇ ನಾಯಿಗಳ ಎಬಿಸಿ ಮಾಡುವುದಿಲ್ಲ ಎಂದು ಹಿಮ್ಮುಖವಾಗಿ ಓಡುತ್ತಿದ್ದಾರೆ.

Advertisement

ಹಿಂದಿನ ವರ್ಷ ಆಗಸ್ಟ್‌ ವೇಳೆಗೆ ಎರಡೂ ವಲಯಗಳಲ್ಲಿ ಎಬಿಸಿ ಟೆಂಡರ್‌ದಾರರ ಅವಧಿ ಮುಗಿದಿದ್ದು, ಇಲ್ಲಿಯವರೆಗೆ ಯಾವುದೇ ಟೆಂಡರ್‌ದಾರರು ಈ ವಲಯದಲ್ಲಿ ನಾಯಿಗಳಿಗೆ ಎಬಿಸಿ ಮಾಡುವುದಕ್ಕೆ ಮುಂದೆ ಬಂದಿಲ್ಲ. ಇದಕ್ಕೆ ಈ ಎರಡೂ ವಲಯದಲ್ಲಿ ಪ್ರಾಣಿದಯಾ ಸಂಘಟನೆಗಳು ಹೆಚ್ಚು ಸಕ್ರಿಯವಾಗಿರುವುದೇ ಕಾರಣವೆಂದು ಹೆಸರು ಹೇಳಲಿಚ್ಛಿಸದ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಟೆಂಡರ್‌ದಾರರು ನೀಡುವ ಉತ್ತರದಿಂದ ನಾವೂ ಕಂಗಾಲಾಗಿದ್ದೇವೆ. ಈ ಭಾಗದಲ್ಲಿ ನಾಯಿಗಳ ಸಂತತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಎಸಿಬಿ ಕಾರ್ಯ ಚುರುಕು ಮುಟ್ಟಿಸುವ ಅವಶ್ಯಕತೆ ಇದೆ. ಆದರೆ, ಈ ಭಾಗದಲ್ಲಿ ನಿರಂತರವಾಗಿ ನಾಯಿಗಳ ಎಬಿಸಿಗೆ ತೊಂದರೆಯಾ ಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೊಮ್ಮನಹಳ್ಳಿಯಲ್ಲಿ ಎಬಿಸಿ ಟೆಂಡರ್‌ ಅವಧಿ ಆಗಸ್ಟ್‌ ತಿಂಗಳಲ್ಲೇ ಮುಗಿದಿದ್ದು, ಇಲ್ಲಿಯವರೆಗೆ ಯಾವುದೇ ಟೆಂಡರ್‌ದಾರರು ಈ ವಲಯದಲ್ಲಿ ಭಾಗವಹಿಸಿಲ್ಲ. ಈ ಹಿನ್ನೆಲೆಯಲ್ಲಿ ಆಗಸ್ಟ್‌ನಿಂದಲೇ ಈ ಭಾಗದಲ್ಲಿ ನಾಯಿಗಳ ಎಬಿಸಿ ಪ್ರಕ್ರಿಯೆ ನಿಂತಿದೆ. ಇನ್ನು ಬೆಂಗಳೂರು ಪೂರ್ವ ವಲಯದಲ್ಲಿ ಎಬಿಸಿ ಮಾಡುತ್ತಿದ್ದ ಗುತ್ತಿಗೆದಾರರ ಅವಧಿಯೂ ಆಗಸ್ಟ್‌ ವೇಳೆಗೆ ಮುಕ್ತಾಯವಾಗಿತ್ತು.

ಆದರೆ, ಪಾಲಿಕೆಯ ಅಧಿಕಾರಿಗಳ ಮನವಿಯ ಮೇರೆಗೆ ಇಲ್ಲಿನ ಗುತ್ತಿಗೆದಾರರು ನಾಯಿಗಳ ಎಬಿಸಿ ಮಾಡುತ್ತಿದ್ದರು. ಈ ವರ್ಷದಿಂದ (ಜನವರಿಯಿಂದ) ನಾಯಿಗಳ ಎಬಿಸಿ ಮಾಡುವುದಿಲ್ಲ ಎಂದು ಪಾಲಿಕೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಈಗ ಮತ್ತೂಂದು ವಲಯದಲ್ಲಿ ಎಸಿಬಿ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಇತ್ತೀಚೆಗೆ ಗೋವಾ ಮೂಲದ ವರ್ಲ್ಡ್ ವೆಟರ್ನರಿ ಸರ್ವೀಸ್‌ ಸೆಂಟರ್‌ ಸಹಯೋಗದಲ್ಲಿ ಬಿಬಿಎಂಪಿ ಆ್ಯಪ್‌ ಆಧರಿಸಿ 198 ವಾರ್ಡ್‌ಗಳಲ್ಲಿ ನಾಯಿಗಳ ಬಗ್ಗೆ ಸಮೀಕ್ಷೆ ನಡೆಸಿತ್ತು.

Advertisement

ಪಾಲಿಕೆಯ ಎಂಟು ವಲಯದಲ್ಲಿ ಒಟ್ಟು 3,09,972 ಬೀದಿ ನಾಯಿಗಳಿದ್ದು, ಇದರಲ್ಲಿ ಇನ್ನು ಶೇ.46 ಅಂದರೆ, 1,23,853 ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು. ಈ ನಿಟ್ಟಿನಲ್ಲಿ ಪಾಲಿಕೆ ಯೋಜನೆಯನ್ನೂ ರೂಪಿಸಿಕೊಂಡಿತ್ತು. ಆದರೀಗ ಅತೀ ಹೆಚ್ಚು ನಾಯಿಗಳ ಸಂಖ್ಯೆ ಇರುವ ಬೆಂಗಳೂರು ಪೂರ್ವ ಮತ್ತು ಬೊಮ್ಮನಹಳ್ಳಿ ವಲಯದಲ್ಲೇ ಟೆಂಡರ್‌ ಅಂತಿಮವಾಗದೆ ಇರುವುದರಿಂದ ಪ್ರಕ್ರಿಯೆಗೆ ತೊಡಕುಂಟಾಗಿದೆ.

ಹೆಚ್ಚು ನಾಯಿಗಳಿರುವ ವಲಯದಲ್ಲೇ ಸಮಸ್ಯೆ: ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ನಗರದ ಹೊರ ವಲಯಗಳಲ್ಲಿ ಒಂದಾದ ಬೊಮ್ಮನಹಳ್ಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳಿರುವುದು ವರದಿಯಾಗಿತ್ತು. ಉಳಿದ ವಲಯಗಳಿಗಿಂತ ಬೊಮ್ಮನಹಳ್ಳಿ, ಮಹದೇವಪುರ, ಆರ್‌.ಆರ್‌.ನಗರ, ಯಲಹಂಕ ಹಾಗೂ ದಾಸರಹಳ್ಳಿ ವಲಯದಲ್ಲಿ 1,97,622 ಬೀದಿ ನಾಯಿಗಳಿರುವುದು ಬೆಳಕಿಗೆ ಬಂದಿತ್ತು.

ಎಕ್ಸ್‌ಪ್ರೆಷನ್‌ ಆಫ್ ಇಂಟರೆಸ್ಟ್‌ಗೆ ಪಾಲಿಕೆ ಮೊರೆ: ಬೊಮ್ಮನಹಳ್ಳಿ ಹಾಗೂ ಪೂರ್ವ ವಲಯದಲ್ಲಿ ನಾಯಿಗಳ ಎಬಿಸಿಗೆ ಯಾವುದೇ ಟೆಂಡರ್‌ದಾರರು ಮುಂದೆ ಬರದೆ ಇರುವ ಹಿನ್ನೆಲೆಯಲ್ಲಿ ಈ ಎರಡು ವಲಯಗಳಲ್ಲಿ ನಾಯಿಗಳ ಎಬಿಸಿ ಮಾಡಲು ಆಸಕ್ತಿ ಇರುವವರು ಮುಂದೆ ಬರುವಂತೆ ಮಾಡಲು ಪಾಲಿಕೆ ಎಕ್ಸ್‌ಪ್ರೆಷನ್‌ಆಫ್ಇಂಟ್ರೆಸ್ಟ್‌ (ಟೆಂಡರ್‌ ಪ್ರಕ್ರಿಯೆ ಅಲ್ಲದೆಯೂ ನಾಯಿಗಳ ಎಬಿಸಿ ಮಾಡುವವರ) ಹುಡುಕಾಟಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ವೈದ್ಯರಿಗೆ ಆತಂಕ!: ಪ್ರಾಣಿದಯಾ ಸಂಘಟನೆಗಳು ಕೇಸ್‌ ದಾಖಲಿಸಿದ್ದರಿಂದ ಈ ಹಿಂದೆ ನಾಲ್ವರು ವೈದ್ಯರ ಮೇಲೆ ಎಫ್ಐಆರ್‌ ದಾಖಲಿಸಲಾಗಿತ್ತು. ಇವರು ನಿರಪರಾಧಿಗಳು ಎಂದು ಸಾಬೀತಾಗುವುಕ್ಕೆ ಹೆಚ್ಚು ಸಮಯವಾಗಿತ್ತು. ಈ ಹಿನ್ನೆಲೆಯಲ್ಲಿ ಎಬಿಸಿ ಮಾಡುವುದಕ್ಕೆ ಪಶು ವೈದ್ಯರೂ ಹಿಂದೇಟು ಹಾಕುತ್ತಿದ್ದಾರೆ ಎಂದು ಪಾಲಿಕೆಯ ಪಶುಪಾಲನೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಲಯ ಒಟ್ಟುನಾಯಿ ಗಂಡು ಹೆಣ್ಣು
-ಪೂರ್ವ 44,303 26,214 18,089
-ಬೊಮ್ಮನಹಳ್ಳಿ 38,940 26,273 12,667

2019ನೇ ಸಾಲಿನ ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಎಬಿಸಿ ವಿವರ
ವಲಯ ನಾಯಿಗಳ ಎಬಿಸಿ
ಯಲಹಂಕ 4,884
ರಾಜರಾಜೇಶ್ವರಿ ನಗರ 4,593
ದಕ್ಷಿಣ 1049
ಪಶ್ಚಿಮ 1068
ದಾಸರಹಳ್ಳಿ 2,482
ಮಹದೇವಪುರ 6,627
ಬೊಮ್ಮನಹಳ್ಳಿ 2,206 (ಆಗಸ್ಟ್‌ ವರೆಗೆ)
ಪೂರ್ವ 6,112

ಬೊಮ್ಮನಹಳ್ಳಿ ಹಾಗೂ ಪೂರ್ವ ವಲಯದಲ್ಲಿ ನಾಯಿಗಳ ಎಬಿಸಿ ಮಾಡಲು ಎರಡು ಬಾರಿ ಟೆಂಡರ್‌ ಕರೆಯಲಾಗಿತ್ತು. ಆದರೆ, ಯಾವುದೇ ಟೆಂಡರ್‌ದಾರರು ಭಾಗವಹಿಸಿಲ್ಲ. ಹೀಗಾಗಿ, ಎಕ್ಸ್‌ಪ್ರೆಷನ್‌ ಆಫ್ ಇಂಟ್ರೆಸ್ಟ್‌ ನಡಿ ನಾಯಿಗಳ ಎಬಿಸಿ ಮಾಡುವುದಕ್ಕೆ ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ.
-ಡಾ.ಎಸ್‌.ಶಶಿಕುಮಾರ್‌, ಜಂಟಿ ನಿರ್ದೇಶಕರು (ಪಶುಸಂಗೋಪನೆ)

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next