Advertisement

ಹೆಸರಘಟ್ಟದಲ್ಲಿ ಕೃತಕ ಬುದ್ಧಿಮತ್ತೆಯಂಥ ಹೈಟೆಕ್‌ ತಂತ್ರಜ್ಞಾನದ ತೋಟಗಾರಿಕಾ ಪದ್ಧತಿ ಪರಿಚಯ

04:23 PM Feb 09, 2021 | Team Udayavani |

ಬೆಂಗಳೂರು: ಕೆಲವೇ ನಿಮಿಷಗಳಲ್ಲಿ ಟನ್‌ ಗಟ್ಟಲೆ ಈರುಳ್ಳಿ ಕಾಂಡ ಕತ್ತರಿಸಿ ಎಸೆಯುವ ದೈತ್ಯಯಂತ್ರ, ಹಣ್ಣು-ಕಾಯಿಗಳನ್ನು ಸುಲಿಯುವ ಯಂತ್ರ, ಕೃತಕ ಬುದ್ಧಿಮತ್ತೆಯಂತಹ ಹೈಟೆಕ್‌ ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿ, ಹೊಸ ತಳಿಗಳು ಸೇರಿದಂತೆ ಹೆಸರಘಟ್ಟದಲ್ಲಿ ತೋಟಗಾರಿಕೆ ಲೋಕವೇ ಅನಾವರಣಗೊಂಡಿದೆ.

Advertisement

ಒಂದೆಡೆ ತರಹೇವಾರಿ ಹೂವುಗಳು, ಹಣ್ಣುಗಳು, ತರಕಾರಿ ತಳಿಗಳು ಗಮನಸೆಳೆದರೆ, ಮತ್ತೂಂದೆಡೆ ಯಂತ್ರಗಳು, ತಂತ್ರ ಜ್ಞಾನಗಳು ರೈತರನ್ನು ಬೆರಗುಗೊಳಿಸುತ್ತವೆ.  ಅತಿದೊಡ್ಡ ಈ ವರ್ಚುವಲ್‌ ಮೇಳದ ಪ್ರಮುಖ ಆಕರ್ಷಣೆ ಇಲ್ಲಿವೆ.

ನಿಮ್ಮ ಜಮೀನಿನ ಮಣ್ಣಿನಲ್ಲಿರುವ ತೇವಾಂಶ ಎಷ್ಟು? ಯಾವಾಗ ಎಷ್ಟು ಗೊಬ್ಬರ ಮತ್ತು ನೀರುಣಿಸಬೇಕು? ಬೆಳೆಗೆ ರೋಗಗಳ ಲಕ್ಷಣಗಳಿವೆಯೇ? ಇದೆಲ್ಲವನ್ನೂ ಮುಂಚಿತವಾಗಿಯೇ ರೈತರಿಗೆ ಮಾಹಿತಿ ನೀಡುವ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಬಂದಿದೆ. ಫ‌ಸಲ್‌ ಐಒಟಿ ಇಂತಹದ್ದೊಂದು ತಂತ್ರ ಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಹೆಸರೇ ಸೂಚಿಸುವಂತೆ ಇದು ಹೈಟೆಕ್‌ ಆಗಿದೆ. ಯಂತ್ರದಲ್ಲಿ ಸೆನ್ಸರ್‌ ಅಳವಡಿಸಲಾಗಿರುತ್ತದೆ. ಇದು ಮಣ್ಣಿನ ಗುಣಧರ್ಮ ಹಾಗೂ ಪ್ರಸ್ತುತ ಸ್ಥಿತಿಗತಿಯನ್ನು ವಿಶ್ಲೇಷಣೆ ಮಾಡುತ್ತದೆ. ರೈತನ ಜಮೀನಿನಲ್ಲಿರುವ ತಾಪಮಾನ, ತೇವಾಂಶದ ಬಗ್ಗೆ 14 ದಿನಗಳ ಮುನ್ಸೂಚನೆಯನ್ನೂ ಮೊಬೈಲ್‌ ಮೂಲಕ ನೀಡುತ್ತದೆ. ಅದನ್ನು ಆಧರಿಸಿ ಬೆಳೆಗಳಿಗೆ ಎಷ್ಟು ನೀರುಣಿಸಬೇಕು ಎಂಬುದನ್ನು ಹೇಳುತ್ತದೆ. ಅಷ್ಟೇ ಅಲ್ಲ, ಯಾವ ಗೊಬ್ಬರ ನೀಡಬೇಕು ಎಂಬುದರ ಬಗ್ಗೆಯೂ ಮಾರ್ಗದರ್ಶನ ಮಾಡುತ್ತದೆ.

ಇದರಿಂದ ಸಮಯ ಉಳಿತಾಯದ ಜತೆಗೆ ಅಗತ್ಯವಿದ್ದಷ್ಟು ಸಿಂಪಡಣೆ ಮಾಡುವುದರಿಂದ ರೈತರಿಗೆ ಶೇ. 35ರಷ್ಟು ವೆಚ್ಚ ಉಳಿತಾಯ ಹಾಗೂ ಶೇ. 10ರಿಂದ 35ರಷ್ಟು ಇಳುವರಿ ಹೆಚ್ಚಳ ಆಗುತ್ತದೆ. ಈಗಾಗಲೇ ದೇಶಾದ್ಯಂತ ಒಟ್ಟಾರೆ 600 ಯಂತ್ರಗಳನ್ನು ರೈತರ ಜಮೀನುಗಳಲ್ಲಿ ಅಳವಡಿಸಲಾಗಿದೆ ಎಂದು ಫ‌ಸಲ್‌ ಐಒಟಿ ಎಂ. ಚಿರಾಗ್‌ ರೆಡ್ಡಿ ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಅಟೋಮೆಟಿಕ್‌ ಆಗಿ ನೀರು ಪೂರೈಸುವ ವ್ಯವಸ್ಥೆಯನ್ನೂ ಸೇರಿಸುವ ಚಿಂತನೆ ನಡೆದಿದೆ. ಸೌರವಿದ್ಯುತ್‌ ಆಧಾರಿತ ಈ ಒಂದು ಯಂತ್ರ ಸುಮಾರು ಎರಡೂವರೆ ಹೆಕ್ಟೇರ್‌ ಕವರ್‌ ಮಾಡುತ್ತದೆ. ಸೌರ ವಿದ್ಯುತ್‌ ಲಭ್ಯವಿಲ್ಲದಿದ್ದರೂ 15 ದಿನಗಳ ಕಾಲ ಇದು ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದರು.

Advertisement

ಸಂಪೂರ್ಣ ಸ್ಟೇನ್‌ಲೆಸ್‌ಸ್ಟೀಲ್‌ನಿಂದ ತಯಾರಿಸಿದ ಈ ಯಂತ್ರಕ್ಕೆ 20-25 ಸಾವಿರ ರೂ. ಆಗುತ್ತದೆ. ಈಗಾಗಲೇ ಹತ್ತು ಯಂತ್ರಗಳು ಮಾರಾಟ ಆಗಿವೆ. ಸಗಟು ರೂಪದಲ್ಲಿ ತಯಾರಿಸಿದರೆ, ಖರ್ಚು ಹತ್ತು ಸಾವಿರಕ್ಕೆ ತಗ್ಗಲಿದೆ ಎಂದು ಕೊಯ್ಲೊತ್ತರ ತಂತ್ರಜ್ಞಾನಗಳ ವಿಭಾಗದ ತಾಂತ್ರಿಕ ಅಧಿಕಾರಿ ಪಿ. ದಯಾನಂದ್‌ ತಿಳಿಸಿದರು. ಹೂವಿನ ಬೆಳೆಗಳೂ ಗಮನಸೆಳೆಯುತ್ತಿವೆ.

ಹಲಸಿನ ಸಿಪ್ಪೆ ತೆಗೆಯುವ ಯಂತ್ರ

ಹಲಸಿನ ಕಾಯಿ ತಿನ್ನಲು ಇಷ್ಟ. ಆದರೆ, ಅದರ ಸಿಪ್ಪೆ ತೆಗೆಯುವುದೇ ದೊಡ್ಡ ತಲೆನೋವು. ಇದೇ ಕಾರಣಕ್ಕೆ ಹಲಸಿನ ಕಾಯಿಗಳ ಬಗ್ಗೆ ತಾತ್ಸಾರ. ಈ ಸಮಸ್ಯೆಗೆ ಐಐಎಚ್‌ಆರ್‌ ಒಂದು ಸರಳ ಯಂತ್ರ ಅಭಿವೃದ್ಧಿಪಡಿಸಿದೆ. ಇದು ಎರಡು ನಿಮಿಷಗಳಲ್ಲಿ ಮೂರ್‍ನಾಲ್ಕು ಇಂಚು ಗಾತ್ರದ ಹಲಸಿನ ಕಾಯಿಯನ್ನು ಸುಲಿಯುತ್ತದೆ

ಈರುಳ್ಳಿ ಬೆಳೆ ಸುಲಭ

ಈರುಳ್ಳಿ ಕಾಂಡ ಕತ್ತರಿಸಲು ಸೀಜನ್‌ನಲ್ಲಿ ಕಾರ್ಮಿಕರನ್ನು ಹೊಂದಿಸುವುದೇ ರೈತರಿಗೆ ದೊಡ್ಡ ಸವಾಲು. ಈ ಹಿನ್ನೆಲೆಯಲ್ಲಿ ಕಾಂಡ ಕತ್ತರಿಸುವ ಯಂತ್ರವನ್ನು ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ. 30 ಜನ ಕೂಲಿ ಕಾರ್ಮಿಕರು ಇಡೀ ದಿನ ಮಾಡುವ ಕೆಲಸವನ್ನು ಈ ಯಂತ್ರ ಕೇವಲ ಒಂದು ತಾಸಿನಲ್ಲಿ ಮಾಡಿಮುಗಿಸುತ್ತದೆ. ಗಂಟೆಗೆ ಒಂದು ಟನ್‌ ವಿವಿಧ ಪ್ರಕಾರದ ಈರುಳ್ಳಿ ಕಾಂಡ ಕತ್ತರಿಸುವ ಸಾಮರ್ಥ್ಯ ಹೊಂದಿದೆ. ಸಮಯದ ಜತೆಗೆ ವೆಚ್ಚ ಕೂಡ ರೈತರಿಗೆ ಉಳಿಯುತ್ತದೆ. ಒಂದು ಯಂತ್ರದ ಬೆಲೆ 10 ಲಕ್ಷ ರೂ. ಆಗುತ್ತದೆ. ರೈತರಿಗೆ ಇದರ ಖರೀದಿ ಕಷ್ಟ. ಆದರೆ, ಎಫ್ಪಿಒ ಅಥವಾ ಕೃಷಿ ಇಲಾಖೆಯು ಇದನ್ನು ಖರೀದಿಸಿ, ರೈತರಿಗೆ ಬಾಡಿಗೆ ನೀಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next