ಕೋಲ್ಕತಾ: ಸರ್ಕಾರಿ ಮೆಡಿಕಲ್ ಕಾಲೇಜಿನ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇ ಮಂಗಳವಾರ (ಆಗಸ್ಟ್ 13) ಕೋಲ್ಕತಾ ಹೈಕೋರ್ಟ್, ಆರ್ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಮುಖ್ಯಸ್ಥ ಡಾ. ಸಂದೀಪ್ ಘೋಷ್ ಅವರಿಗೆ ದೀರ್ಘಾವಧಿ ರಜೆ ಮೇಲೆ ತೆರಳುವಂತೆ ಆದೇಶ ಹೊರಡಿಸಿದೆ.
ಸಂತ್ರಸ್ತೆ ಹಾಗೂ ಆಸ್ಪತ್ರೆಯ ಸಿಬಂದಿಗಳಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ವಿಫಲರಾದ ಕಾರಣ ಸೋಮವಾರ (ಆ.12) ಡಾ.ಘೋಷ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೃತ ಯುವತಿ ನನ್ನ ಮಗಳು ಇದ್ದಂತೆ, ಒಬ್ಬ ಪೋಷಕನಾಗಿ ನಾನು ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದರು. ಆದರೆ 24ಗಂಟೆಯೊಳಗೆ ಕೋಲ್ಕತಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಿನ್ಸಿಪಾಲ್ ಆಗಿ ಮರು ನೇಮಕ ಮಾಡಲಾಗಿತ್ತು.
“ಇಂತಹ ಹೀನ ಅಪರಾಧದ ಬಗ್ಗೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ಕ್ರಮದ ಕುರಿತು ಹೈಕೋರ್ಟ್ ಕಟುವಾಗಿ ಪ್ರಶ್ನಿಸಿದೆ. ತನಿಖೆಯ ಹಂತದಲ್ಲಿ ಡಾ.ಘೋಷ್ ಅವರನ್ನು ರಕ್ಷಿಸಲು ಮುಂದಾಗಿರುವುದು ದುರದೃಷ್ಟಕರ. ಒಬ್ಬ ವೈದ್ಯೆಯ ಕೊಲೆ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ ಎಂದು” ಕೋರ್ಟ್ ಕಿಡಿಕಾರಿದೆ.
ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವೈದ್ಯರುಗಳಿಗೆ ಪ್ರಿನ್ಸಿಪಾಲರೇ ಕಾವಲುಗಾರ. ಒಂದು ವೇಳೆ ಅವರೇ ಯಾವುದೇ ಸಹಾನಭೂತಿ ತೋರಿಸದಿದ್ದರೆ, ಇನ್ಯಾರು ತೋರಿಸುತ್ತಾರೆ? ಡಾ.ಘೋಷ್ ಮನೆಯಲ್ಲೇ ಇರಬೇಕು, ಬೇರೆಲ್ಲಿಯೂ ಕಾರ್ಯನಿರ್ವಹಿಸಬಾರದು ಎಂದು ಹೈಕೋರ್ಟ್ ಚೀಫ್ ಜಸ್ಟೀಸ್ ಟಿಎಸ್ ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠ ಆದೇಶ ನೀಡಿ, ಡಾ.ಘೋಷ್ ಪರ ಸರ್ಕಾರಿ ಪರ ವಕೀಲರು ವಾದ ಮಂಡಿಸುವುದು ನಿಜಕ್ಕೂ ಅಚ್ಚರಿಯ ವಿಷಯ ಎಂದು ಟೀಕಿಸಿದೆ.
ನೈತಿಕ ಹೊಣೆಗಾರಿಕೆಯಿಂದ ಒಂದು ವೇಳೆ ಪ್ರಿನ್ಸಿಪಾಲ್ ಹುದ್ದೆಯಿಂದ ಕೆಳಗಿಳಿದಿದ್ದು, ನಿಜವಾಗಿದ್ದರೆ, ಕೇವಲ 12 ಗಂಟೆಯೊಳಗೆ ಅವರನ್ನು ಮರುನೇಮಕ ಮಾಡಿರುವುದು ಗಂಭೀರ ವಿಷಯವಾಗಿದೆ. ಯಾವುದೇ ಕಾರಣಕ್ಕೂ ಘೋಷ್ ಕಾರ್ಯನಿರ್ವಹಿಸುವಂತಿಲ್ಲ, ದೀರ್ಘಾವಧಿ ರಜೆಯಲ್ಲಿ ತೆರಳಬೇಕು. ಇಲ್ಲದಿದ್ದರೆ ನಾವೇ ಆದೇಶ ಹೊರಡಿಸುತ್ತೇವೆ ಎಂದು” ಕೋರ್ಟ್ ಕಟುವಾಗಿ ನಿರ್ದೇಶನ ನೀಡಿದೆ.