Advertisement

ಫೇಸ್‌ಬುಕ್‌ನಲ್ಲಿದ್ದದ್ದು ಅವಳಲ್ಲ ಅವನು!

01:01 PM Oct 25, 2017 | Team Udayavani |

ಬೆಂಗಳೂರು: ಮಹಿಳೆಯ ಹೆಸರಿನಲ್ಲಿ ಸೃಷ್ಟಿಯಾಗಿದ್ದ ಫೇಸ್‌ಬುಕ್‌ ಅಕೌಂಟ್‌ನಿಂದ ಬಸವಣ್ಣನವರಿಗೆ ಏಕವಚನದಲ್ಲಿ ಸಂಭೋದಿಸಿ ಲಿಂಗಾಯತ ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ದಾಖಲಾಗಿದ್ದ ದೂರಿನ ಅನ್ವಯ ಮಹಿಳೆಯನ್ನು ಬಂಧಿಸಲು ಹೋದ ಪೊಲೀಸರಿಗೆ ಶಾಕ್‌ ಕಾದಿತ್ತು!

Advertisement

ಏಕೆಂದರೆ ಫೇಸ್‌ಬುಕ್‌ನಲ್ಲಿದ್ದದ್ದು ಅವಳಲ್ಲ ಅವನು! ಈ  ರೀತಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಪೊಲೀಸರಿಂದ ಬಂಧನಕ್ಕೊಳಗಾದ ವ್ಯಕ್ತಿ ಮಮತಾನಾಯಕ್‌ ಅಲಿಯಾಸ್‌ ಮನೋಜ್‌ ನಾಯಕ್‌. ಆರೋಪಿ ವಿರುದ್ಧ  ಐಪಿಸಿ  ಕಲಂ ಸೆಕ್ಷನ್‌ 295(ಎ) 504, 507 ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಆರೋಪಿಯಾಗಿದ್ದು ತನಿಖೆ ಎದುರಿಸುವ ಸ್ಥಿತಿ ತಂದುಕೊಂಡಿದ್ದಾನೆ.

ಸದ್ಯ ಆರೋಪಿ ಮನೋಜ್‌ ನಾಯಕ್‌ ಷರತ್ತುಬದ್ಧ ಜಾಮೀನಿನ ಮೇರೆಗೆ ಸೋಮವಾರ ಬಿಡುಗಡೆಯಾಗಿದ್ದಾನೆ. ಪ್ರಕರಣ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮಮತಾನಾಯಕ್‌ ಫೇಸ್‌ಬುಕ್‌ ಖಾತೆಯಿಂದ ಪ್ರಚೋದನಾಕಾರಿ ಹೇಳಿಕೆಗಳು, ಬಸವಣ್ಣನವರಿಗೆ ಅಪಮಾನಿಸುವಂತಹ ಆಕ್ಷೇಪಾರ್ಹ ಬರವಣಿಗೆ ಬರೆದಿದ್ದಾನೆ ಎಂದು ವೀರಶೈವ ಲಿಂಗಾಯತ ಯುವವೇದಿಕೆಯ ಕವನಾ ಎಂಬುವವರು ಸಂಜಯ್‌ನಗರ ಠಾಣೆ ಪೊಲೀಸರಿಗೆ ಜುಲೈ 7ರಂದು ದೂರು ನೀಡಿದ್ದರು.

ಈ ಸಂಬಂಧ ಮಮತಾನಾಯಕ್‌ ಫೇಸ್‌ಬುಕ್‌ ಅಕೌಂಟ್‌ ನಿರ್ವಹಿಸುತ್ತಿದ್ದವರ ಬಂಧಿಸುವ ಸಲುವಾಗಿ ತನಿಖೆ ಆರಂಭಿಸಿ, ಈ ಖಾತೆ ಎಲ್ಲಿಂದ ನಿರ್ವಹಣೆಯಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸೈಬರ್‌ ಕ್ರೈಂ ಪೊಲೀಸರಿಗೆ ಮಾಹಿತಿ ಕೋರಲಾಗಿತ್ತು.

Advertisement

ಅವರು ನೀಡಿದ ವರದಿಯಲ್ಲಿ ಶಿರಸಿಯಿಂದ ಫೇಸ್‌ಬುಕ್‌ ನಿರ್ವಹಣೆಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆಯಿತು. ಹೀಗಾಗಿ ಒಂದು ಪ್ರತ್ಯೇಕ ತಂಡ ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಆರೋಪಿ ಮನೋಜ್‌ ನಾಯಕ್‌ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿ ತಿಳಿಸಿದರು.

ಸೋದರಿ ಹೆಸರಿನಲ್ಲಿ ಫೇಕ್‌ ಅಕೌಂಟ್‌!: ಆರೋಪಿ ಮನೋಜ್‌ನನ್ನು ವಿಚಾರಣೆ ನಡೆಸಿದಾಗ ನಕಲಿ ಫೇಸ್‌ಬುಕ್‌ ಖಾತೆಯ ವೃತ್ತಾಂತ ಬಯಲಾಯಿತು. ಮುಂಬೈನಲ್ಲಿ ನೆಲೆಸಿರುವ ಆತನ ಸಹೋದರಿ ಮಮತಾ ನಾಯಕ್‌ ಹೆಸರಿನಲ್ಲಿ ಖಾತೆ ತೆರೆದು ನಿರ್ವಹಣೆ ಮಾಡುತ್ತಿದ್ದ. ಆತನ ಸಹೋದರಿಗೆ ಈ ಮಾಹಿತಿಯೇ ಗೊತ್ತಿರಲಿಲ್ಲ.

ವಿವಾಹಿತನಾಗಿರುವ ಮನೋಜ್‌, ವಿಚಾರಣೆ ವೇಳೆ ತನ್ನ ಪತ್ನಿ ಹೆಸರಿನಲ್ಲಿಯೂ ಫೇಸ್‌ಬುಕ್‌ ಖಾತೆ ತೆರೆಯಲು ನಿರ್ಧರಿಸಿದ್ದ, ಆದರೆ ಪತ್ನಿಗೆ ಗೊತ್ತಾಗಿಬಿಡುತ್ತದೆ ಎಂದು ಹೀಗೆ ಮಾಡಿದೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಇದಲ್ಲದೆ ಬೇರೆ ಬೇರೆ ಮಹಿಳೆಯರ ಹೆಸರಿನಲ್ಲಿಯೇ ಎರಡು ಮೂರು ಫೇಸ್‌ಬುಕ್‌ ಖಾತೆ ತೆರೆದಿದ್ದಾನೆ ಎಂಬುದರ ಬಗ್ಗೆ ಮಾಹಿತಿಯಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next