ಗಣೇಶ್ ಅಭಿನಯದ “ಚಮಕ್’ ಹಾಗು ನೀನಾಸಂ ಸತೀಶ್ ನಟಿಸಿದ “ಅಯೋಗ್ಯ’ ಚಿತ್ರ ನಿರ್ಮಿಸಿದ್ದ ಟಿ.ಆರ್.ಚಂದ್ರಶೇಖರ್, ತಮ್ಮ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್‌ನಲ್ಲಿ ಅಜೇಯ್‌ರಾವ್ ಅವರ ಚಿತ್ರ ನಿರ್ಮಾಣ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಆ ಚಿತ್ರವನ್ನು ತಿಮ್ಮೇಗೌಡ ನಿರ್ದೇಶನ ಮಾಡುತ್ತಿದ್ದಾರೆ ಎಂಬುದು ಗೊತ್ತಿತ್ತು.
ಆದರೆ, ಅಜೇಯ್‌ರಾವ್ ಅವರಿಗೆ ನಾಯಕಿ ಆಯ್ಕೆಯಾಗಿರಲಿಲ್ಲ. ಈಗ ನಾಯಕಿ ಪಾತ್ರಕ್ಕೆ ಕನ್ನಡದ ಹುಡುಗಿಯೊಬ್ಬಳು ಪಕ್ಕಾ ಆಗಿದ್ದಾರೆ. ಹೆಸರು ಸಂಜನಾ. ಸಂಜನಾ ಅಂದಾಕ್ಷಣ, ಗ್ಲಾಮರ್ ಬೆಡಗಿ “ಗಂಡ ಹೆಂಡತಿ’ ಖ್ಯಾತಿಯ ಸಂಜನಾ ನೆನಪಾಗಬಹುದು. ಆದರೆ, ಆ ಸಂಜನಾ ಅಲ್ಲ. ಇವರು ಸಂಜನಾ ಆನಂದ್.
ಯಾರು ಈ ಹುಡುಗಿ ಅಂದರೆ, “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ತೋರಿಸಬೇಕು. ಆ ಚಿತ್ರದ ನಾಯಕಿಯಾಗಿದ್ದ ಸಂಜನಾ, ಈಗ ಅಜೇಯ್‌ರಾವ್ ಚಿತ್ರಕ್ಕೆ ನಾಯಕಿ. ಅಂದಹಾಗೆ, ಈ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್‌ನಲ್ಲಿ ಇದು ಏಳನೇ ಸಿನಿಮಾವಾದರೆ, ಅಜೇಯ್‌ರಾವ್ ಅವರಿಗೆ ಇದು 27 ನೇ ಚಿತ್ರ.
ನಿರ್ದೇಶಕ ತಿಮ್ಮೇಗೌಡ ಅವರಿಗೆ ಮೊದಲ ಸಿನಿಮಾ. ಇದೊಂದು ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಕಥೆ. ಈ ಚಿತ್ರದಲ್ಲಿ ಸಂಜನಾ ಆನಂದ್ ಅವರು ಪಕ್ಕಾ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಮಂಡ್ಯ, ಚನ್ನಪಟ್ಟಣ್ಣ, ಮದ್ದೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಉದ್ದೇಶವಿದ್ದು,
ಈಗಾಗಲೇ ಲೊಕೇಶನ್ ನೋಡಿರುವ ಚಿತ್ರತಂಡ, ಜೂನ್ ಮೊದಲ ವಾರದಿಂದ ಚಿತ್ರೀಕರಣಕ್ಕೆ ಹೊರಡಲಿದೆ. ಚಿತ್ರಕ್ಕೆ ಶ್ರೀಧರ್ ವಿ.ಸಂಭ್ರಮ್ ಸಂಗೀತವಿದೆ. ಶಿವುಸೀನ್ ಛಾಯಾಗ್ರಹಣವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದರೆ ಕೆ.ಎಂ.ಪ್ರಕಾಶ್ ಅವರು ಸಂಕಲನ ಮಾಡಲಿದ್ದಾರೆ.