– ಹೀಗೆ ಹೇಳುತ್ತಾ ನಕ್ಕರು ಚಿಕ್ಕಣ್ಣ. ಅವರ ನಗುವಿನಲ್ಲಿ ಸಣ್ಣ ಆಸೆಯೊಂದು ಎದ್ದು ಕಾಣುತ್ತಿತ್ತು. ಅದು ಎಲ್ಲಾ ಕಾಮಿಡಿ ನಟರಲ್ಲೂ ಇರುವ ಆಸೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ನಟರಾಗಿ ಬೇಡಿಕೆ ಹೆಚ್ಚುತ್ತಿದ್ದಂತೆ, ಒಂದಷ್ಟು ವರ್ಷ ಕಾಮಿಡಿ ಕಿಂಗ್‌ಗಳಾಗಿ ಮೆರೆದ ನಂತರ ಬಹುತೇಕ ನಟರಿಗೆ ತಾವ್ಯಾಕೆ ಹೀರೋ ಆಗಬಾರದೆಂಬ ಆಸೆ ಮೂಡುತ್ತದೆ. ಈಗ ಚಿಕ್ಕಣ್ಣ ಮನಸ್ಸಿನಲ್ಲೂ ಅಂತಹ ಒಂದು ಆಸೆ ಮೂಡಿದೆ. “ನನಗೂ ಹೀರೋ ಆಗುವ ಆಸೆ ಇದೆ. ಒಂದಷ್ಟು ಅವಕಾಶಗಳು ಕೂಡಾ ಬರುತ್ತಿದೆ. ಮುಂದೆ ನೋಡಬೇಕು. ಆ ಬಗ್ಗೆಯೇ ಆಲೋಚಿಸುತ್ತಿದ್ದೇನೆ’ ಎನ್ನುತ್ತಾರೆ ಚಿಕ್ಕಣ್ಣ. ಎಲ್ಲಾ ಓಕೆ, ಅವಕಾಶ ಬರುತ್ತಿರಬೇಕಾದರೆ ಆಲೋಚಿಸುವ ಪ್ರಶ್ನೆ ಏನಿದೆ, ಒಪ್ಪಿಕೊಂಡು ಮಾಡೋದಲ್ವಾ ಎಂದು ನೀವು ಕೇಳಬಹುದು. ಪಾಯಿಂಟ್ ಇರೋದೇ ಅಲ್ಲಿ. ಚಿಕ್ಕಣ್ಣಗೆ ಹೀರೋ ಆಗೋಕೆ ಆಸೆ ಏನೋ ಇದೆ. ಜೊತೆಗೆ ಭಯವೂ ಇದೆ.
Advertisement
ಹೀರೋ ಆದರೆ, ಇಡೀ ಸಿನಿಮಾದ ಜವಾಬ್ದಾರಿ ಹೀರೋ ಹೆಗಲ ಮೇಲಿರುತ್ತದೆ. ಸಿನಿಮಾ ಗೆದ್ದರೆ ಓಕೆ. ಮೂರು ಸಿನಿಮಾ ಸೋತರೆ ಆ ನಟನನ್ನು ಕೇಳುವವರಿರೋದಿಲ್ಲ. ಅದಲ್ಲದೇ ಒಮ್ಮೆ ಹೀರೋ ಆಗಿ ಮೆರೆದ ನಂತರ ಮತ್ತೆ ಬೇರೆ ಹೀರೋಗಳ ಸಿನಿಮಾದಲ್ಲಿ ಕ್ಯಾರೆಕ್ಟರ್ ಮಾಡಲು ಮನಸ್ಸು ಒಪ್ಪೋದಿಲ್ಲ. ಈ ಎಲ್ಲಾ ಲೆಕ್ಕಾಚಾರಗಳು ಚಿಕ್ಕಣ್ಣ ತಲೆಯಲ್ಲಿವೆ. ಆ ಕಾರಣಕ್ಕಾಗಿ ಇನ್ನೂ ಹೀರೋ ಆಗುವ ರಿಸ್ಕ್ಗೆ ಕೈ ಹಾಕಿಲ್ಲ. ಹಾಗಂತ ಅವರು ಯಾವ ಹೀರೋಗಿಂತಲೂ ಕಮ್ಮಿ ಇಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಬರುತ್ತಿರುವ ಬಹುತೇಕ ಎಲ್ಲಾ ಹೀರೋಗಳ ಸಿನಿಮಾದಲ್ಲಿ ಚಿಕ್ಕಣ್ಣ ಇದ್ದೇ ಇರುತ್ತಾರೆ. ಕೇವಲ ಇರೋದಷ್ಟೇ ಅಲ್ಲ, ಅವರಿಗೆ ಅಲ್ಲೊಂದು ದೊಡ್ಡ ಸ್ಪೇಸ್ ಕೂಡಾ ನೀಡಲಾಗುತ್ತಿದೆ. ಈ ಮೂಲಕ ಚಿಕ್ಕಣ್ಣ ಬಿಝಿ. ಸಂಭಾವನೆ ವಿಚಾರದಲ್ಲೂ ಚಿಕ್ಕಣ್ಣ “ದೊಡ್ಡಣ್ಣ’. ದಿನದ ಅವರ ಸಂಭಾವನೆ ಲಕ್ಷದಲ್ಲಿದೆ. ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುವ ಚಿಕ್ಕಣ್ಣ ತಿಂಗಳಲ್ಲಿ ಎಷ್ಟು ದಿನ ಬಿಝಿ ಇರುತ್ತಾರೆಂದರೆ 25 ದಿನ ಎಂಬ ಉತ್ತರ ಅವರಿಂದ ಬರುತ್ತದೆ. “ತಿಂಗಳಲ್ಲಿ ಸುಮಾರು 25 ದಿನ ಬಿಝಿ ಇರುತ್ತೇನೆ. ಇನ್ನೈದು ದಿನ ನಾನೇ ಫ್ರೀ ಮಾಡಿಕೊಂಡು ತನ್ನ ವೈಯಕ್ತಿಕ ಕೆಲಸಗಳನ್ನು ಮುಗಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಚಿಕ್ಕಣ್ಣ.