ಮಾಸ್ಕೋ: 233 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ಹಕ್ಕಿಗಳ ಹಿಂಡು ಎಡಭಾಗದ ಇಂಜಿನ್ ಗೆ ಬಡಿದು ಬಿಟ್ಟಿತ್ತು. ಇದರಿಂದ ಇಂಜಿನ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಈ ಸಂದರ್ಭದಲ್ಲಿ ಮತ್ತೊಂದು ಇಂಜಿನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತ್ತು. ಆದರೂ ಧೈರ್ಯಗೆಡದ ಪೈಲಟ್ ವಿಮಾನವನ್ನು ಮುಸುಕಿನ ಜೋಳದ ಗದ್ದೆ ನಡುವೆ ತುರ್ತಾಗಿ ಲ್ಯಾಂಡ್ ಮಾಡಿಸುವ ಮೂಲಕ 233 ಪ್ರಯಾಣಕರ ಜೀವ ಉಳಿಸಿರುವ ಘಟನೆ ಮಾಸ್ಕೋದ ಹೊರವಲಯದಲ್ಲಿ ಗುರುವಾರ ನಡೆದಿದೆ.
ವಿಮಾನವನ್ನು ಮುಸುಕಿನ ಜೋಳದ ಗದ್ದೆ ನಡುವೆ ತುರ್ತಾಗಿ ಭೂಸ್ಪರ್ಶ ಮಾಡಿದ್ದರಿಂದ 23 ಪ್ರಯಾಣಿಕರು ಗಾಯಗೊಂಡಿದ್ದರು. ಆದರೆ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ರಷ್ಯಾದ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಯೂರಾಲ್ ಏರ್ ಲೈನ್ಸ್ ಏರ್ ಬಸ್ 321 ಟೇಕ್ ಆಫ್ ಆಗುತ್ತಿದ್ದಂತೆಯೇ ಹಕ್ಕಿಗಳ ಹಿಂಡು ಇಂಜಿನ್ ಗೆ ಬಡಿದಿತ್ತು. ಈ ಹಿನ್ನೆಲೆಯಲ್ಲಿ ಮುಸುಕಿನ ಜೋಳದ ಗದ್ದೆಯಲ್ಲಿ ತುರ್ತಾಗಿ ಲ್ಯಾಂಡ್ ಮಾಡಿರುವುದಾಗಿ ವಿವರಿಸಿದೆ.
ಎರಡೂ ಇಂಜಿನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದರಿಂದ ಪೈಲಟ್ ಡ್ಯಾಮಿರ್ ಯೂಸೂಪೋವ್ ವಿಮಾನವನ್ನು ಮಾಸ್ಕೋದ ಜುಕೋವಸ್ಕಿ ಅಂತರಾಷ್ಟ್ರೀಯ ವಿಮಾನದಲ್ಲಿ ತುರ್ತಾಗಿ ಲ್ಯಾಂಡ್ ಮಾಡಲು ನಿರ್ಧರಿಸಿದ್ದರು. ಆದರೆ ಇದರಿಂದ ತೊಂದರೆ ಎಂದು ಮನಗಂಡ ಡ್ಯಾಮಿರ್ ರಾಮೆನ್ಸ್ ಕೋಯ್ ಸಮೀಪದ ಮುಸುಕಿನ ಜೋಳದ ಗದ್ದೆ ನಡುವೆಯೇ ಇಂಜಿನ್ ಸಹಾಯವಿಲ್ಲದೆ ವಿಮಾನವನ್ನು ತುರ್ತಾಗಿ ಲ್ಯಾಂಡ್ ಮಾಡಿರುವುದಾಗಿ ವರದಿ ತಿಳಿಸಿದೆ.
233 ಪ್ರಯಾಣಿಕರ ಜೀವ ಉಳಿಸಿರುವ ಪೈಲಟ್ ಡ್ಯಾಮಿರ್ ಹೀರೋ ಎಂದು ಮಾಸ್ಕೋದ ಟ್ಯಾಬೋಲಾಯ್ಡ್ ಪತ್ರಿಕೆ ಕೋಸೋಮೋಲಾಸ್ಕಿ ವರದಿ ಮಾಡಿದೆ. ಲ್ಯಾಂಡಿಂಗ್ ಗಿಯರ್ ಇಲ್ಲದೆ ಪೈಲಟ್ ಡ್ಯಾಮಿರ್ ತುಂಬಾ ಜಾಣ್ಮೆಯಿಂದ ಮುಸುಕಿನ ಜೋಳದ ಗದ್ದೆಯಲ್ಲಿ ಇಳಿಸಿದ್ದಾರೆ ಎಂದು ವರದಿ ಶ್ಲಾಘಿಸಿದೆ.