“ನಂಗೆ ಇಷ್ಟೊಂದು ಮಾರ್ಕೆಟ್ ಇಲ್ಲ. ಯಾಕೆ ಇಷ್ಟೊಂದು ಖರ್ಚು ಮಾಡ್ತಾ ಇದ್ದೀರಿ …’ ಅಂತ ಅದೊಂದು ದಿನ “ದುನಿಯಾ’ ವಿಜಯ್ ಕೇಳಿದರಂತೆ. ಆ ಸಂದರ್ಭದಲ್ಲಿ ಹೇಳಿದ ಮಾತನ್ನೇ ಚಂದ್ರು ಮತ್ತೂಮ್ಮೆ ಹೇಳಿದರು. “ನನ್ನ ಸಿನಿಮಾಗೆ ಕಥೆಯೇ ಹೀರೋ. ಇಲ್ಲಿ ಖರ್ಚು ಮುಖ್ಯ ಅಲ್ಲ. ಕನಸು ಕಾಣೋದು ಮುಖ್ಯ. ನನ್ನ ಕಥೆಗೆ ಅಷ್ಟು ದುಡ್ಡು ಬೇಕು ಎಂದರೆ ಅಷ್ಟು ಖರ್ಚು ಮಾಡೋದಕ್ಕೆ ನಾನು ಸಿದ್ಧ. ನಿಜ ಹೇಳಬೇಕೆಂದರೆ, ವಿಜಯ್ ಸಿನಿಮಾಗೆ ಬಜೆಟ್ ಎಷ್ಟಾಗುತ್ತದೋ ಅದರ ಡಬ್ಬಲ್ ಆಗಿದೆ. ನಾನು ಅಷ್ಟು ಖರ್ಚು ಮಾಡಿದ್ದಕ್ಕೆ, ವಿತರಕರು ಸಹ ನನಗೆ ಒಳ್ಳೆಯ ಅಮೌಂಟ್ ಕೊಟ್ಟಿದ್ದಾರೆ. ನಾನು ಅಷ್ಟೊಂದು ದುಡ್ಡು ಖರ್ಚು ಮಾಡಿರದಿದ್ದರೆ, ಸುಪ್ರೀತ್ ನನಗೆ ಅಷ್ಟೊಂದು ದುಡ್ಡು ಕೊಡುತ್ತಿದ್ದರೆ. ಬಹುಶಃ ಇತ್ತೀಚಿನ ದಿನಗಳಲ್ಲಿ ಚಿತ್ರ ಬಿಡುಗಡೆಗೆ ಮುನ್ನ ವಿತರಕರು ದುಡ್ಡು ಕೊಟ್ಟು ಸಿನಿಮಾ ಕೊಂಡುಕೊಳ್ಳೋದೇ ಅಪರೂಪವಾಗಿರುವಾಗ, ಹುಡುಕಿಕೊಂಡು ಬಂದು ಮಾತಾಡಿ, ಅಡ್ವಾನ್ಸ್ ಕೊಟ್ಟಿದ್ದಾರೆ. ಈ ಚಿತ್ರದಿಂದ ನನಗಷ್ಟೇ ಅಲ್ಲ, ಅವರಿಗೂ ದುಡ್ಡು ಬರಲಿ’ ಎಂದು ಹಾರೈಸಿದರು.
“ಕನಕ’ ಇಂದು ಬಿಡುಗಡೆಯಾಗುತ್ತಿದೆ. ಅದಕ್ಕೆ ಮುಂಚಿತವಾಗಿಯೇ ಅವರಿಗೊಂದಿಷ್ಟು ದುಡ್ಡು ಬಂದಿದೆಯಂತೆ. ಅದೇ ಖುಷಿಯಲ್ಲಿ ಚಂದ್ರು, ತಮ್ಮ “ಕನಕ’ ತಂಡದೊಂದಿಗೆ ಮಾಧ್ಯಮದವರೆದುರು ಬಂದಿದ್ದರು. ಅಂದು “ದುನಿಯಾ’ ವಿಜಯ್ ಬಂದಿರಲಿಲ್ಲ. ಫ್ಯಾಮಿಲಿ ಸಮೇತ ಅವರು ಮುತ್ತತ್ತಿ ಕಾಡಿಗೆ ಹೋಗಿದ್ದರಿಂದ, ಪತ್ರಿಕಾಗೋಷ್ಠಿಗೆ ಬರುವುದು ತಪ್ಪಿತಂತೆ. ಹಾಗಾಗಿ ಅವರ ಅನುಪಸ್ಥಿತಿಯಲ್ಲೇ “ಕನಕ’ ಚಿತ್ರದ ಕುರಿತು ಮಾತನಾಡಿದರು ಆರ್. ಚಂದ್ರು.
ಈ ಚಿತ್ರದಲ್ಲಿ ಡಾ. ರಾಜಕುಮಾರ್ ಅವರ ಆದರ್ಶಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರಂತೆ ಆರ್. ಚಂದ್ರು. “ಈ ಚಿತ್ರಕ್ಕೆ ಅಣ್ಣಾವ್ರ ಚಿತ್ರಗಳ ಆದರ್ಶಗಳೇ ಸ್ಫೂರ್ತಿ. ಈ ಚಿತ್ರಕ್ಕೆ ಅಣ್ಣಾವ್ರೇ ಹೀರೋ. ಹಾಗಾಗಿ ಚಿತ್ರಮಂದಿರದ ಎದುರು ಅವರ ಕಟೌಟ್ ನಿಲ್ಲಿಸುತ್ತಿದ್ದೀನಿ. ಚಿತ್ರಕ್ಕೆ ಸಾಕಷ್ಟು ಖರ್ಚಾಗಿದೆ. ಹಾಗಂತ ಸುಮ್ಮನೆ ಖರ್ಚು ಮಾಡಿಲ್ಲ. ಸಿನಿಮಾಗೇನು ಬೇಕೋ ಖರ್ಚು ಮಾಡಿದ್ದೀನಿ. ಪ್ರಮೋಷನ್‌ಗೆ ವಿಪರೀತ ಖರ್ಚು ಮಾಡುತ್ತಿದ್ದೀನಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ತೆಲುಗಿನಲ್ಲಿ ರಾಜಮೌಳಿ ಅವರು ಮಾಡಲ್ವಾ? ನಾವ್ಯಾಕೆ ಮಾಡಬಾರದು?’ ಎಂದು ಪ್ರಶ್ನಿಸುತ್ತಾರೆ ಚಂದ್ರು.
ವಿತರಕರಾದ ಸುಪ್ರೀತ್ ಮತ್ತು ಪಿ.ವಿ.ಎಲ್. ಶೆಟ್ಟಿ ಸಹ ಹಾಜರಿದ್ದರು. ಈ ಪೈಕಿ ಶೆಟ್ಟರು ಮಾತನಾಡಿ, “ಈಗಿನ ಟ್ರೆಂಡ್ ನೋಡ್ತಾ ಇದ್ರೆ ಕನಕವೃಷ್ಠಿ ಆಗೋದ್ರಲ್ಲಿ ಡೌಟೇ ಇಲ್ಲ. ಚಿತ್ರಮಂದಿರದವರು ಸಿನಿಮಾ ಕೊಡಿ ಅಂತ ಮುಗಿಬೀಳ್ತಿದ್ದಾರೆ. ಹಿಂದಿ ಬಿಟ್ರೆ ಕನ್ನಡದಲ್ಲಿ ಯಾವುದೇ ದೊಡ್ಡ ಚಿತ್ರ ಸಹ ಇಲ್ಲ. ಜೊತೆಗೆ ನಮ್ ಚಂದ್ರು ಬೇರೆ ಭಾಷೆ ಚಿತ್ರಕ್ಕೆ ಈಕ್ವಲ್ ಮಾಡಿದ್ದಾರೆ. ಹಾಡು, ಕಾಮಿಡಿ, ಫೈಟು ಚೆನ್ನಾಗಿದೆ. ಡಾ. ರಾಜಕುಮಾರ್‌ನ ಚೆನ್ನಾಗಿ ತೋರಿದ್ದಾರೆ …’ ಪಿವಿಎಲ್ ಶೆಟ್ಟರ ಆನಂದಕ್ಕೆ ಪಾರವೇ ಇರಲಿಲ್ಲ.
ಮಾನ್ವಿತಾಗೆ ಈ ಚಿತ್ರ ಲಕ್ಕಿಯಂತೆ. ಕಾರಣ ಆಕೆಯ ಮೊದಲ ಚಿತ್ರ “ಕೆಂಡಸಂಪಿಗೆ’ ಸಹ “ಕ’ ಅಕ್ಷರದಿಮದ ಶುರುವಾಗಿತ್ತು. ಈಗ “ಕನಕ’ ಸಹ “ಕ’ಯಿಂದ ಶುರುವಾಗಿದೆ. “ಚಂದ್ರು ಅವರು ಬಹಳ ಕಷ್ಟಪಟ್ಟು, ಇಷ್ಟಪಟ್ಟು ಚಿತ ರಮಾಡಿದ್ದಾರೆ. ವಿತರಕರು ಹೇಳಿದಂತೆ ಅವರಿಗೆ ಕನಕವೃಷ್ಠಿಯಾಗಲಿ. ನಾನೂ ಎರಡು ಬ್ಯಾಗ್ ತರುತ್ತೀನಿ’ ಎಂದು ನಕ್ಕರು.
ಪತ್ರಿಕಾಗೋಷ್ಠಿಯಲ್ಲಿ ಛಾಯಾಗ್ರಾಹಕ ಸತ್ಯ ಹೆಗಡೆ, ಸಂಗೀತ ನಿರ್ದೇಶಕ ನವೀನ್ ಸಜ್ಜು, ಹಿನ್ನೆಲೆ ಸಂಗೀತ ಸಂಯೋಜಿಸಿರುವ ಗುರುಕಿರಣ್ ಮುಂತಾದವರು ಇದ್ದರು.