Advertisement

ಆಲಮಟ್ಟಿ-ಕೆಆರ್‌ಎಸ್‌ ಮಾದರಿ: ಹೆರಕಲ್‌ ಮೂಕಿಗೆ ಪ್ರವಾಸಿ ತಾಣದ ಭಾಗ್ಯ

03:43 PM Oct 26, 2022 | Team Udayavani |

ಬಾಗಲಕೋಟೆ: ಜಿಲ್ಲೆಯ ಘಟಪ್ರಭಾ ನದಿ ವಿಶಾಲವಾಗಿ ಹರಿದು, ಚಿಕ್ಕ ಗುಡ್ಡಗಳ ಮಧ್ಯೆ ಚಿಕ್ಕದಾಗಿ ಹರಿಯುವ ಪ್ರದೇಶಕ್ಕೆ ಗ್ರಾಮೀಣ ಜನ ಹೆರಕಲ್‌ ಮೂಕಿ ಎಂದೇ ಕರೆದಿದ್ದಾರೆ. ಆ ಸ್ಥಳವೀಗ ಜಿಲ್ಲೆಯಲ್ಲೇ ಅತ್ಯಂತ ಮಾದರಿಯಾದ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಿಸಿ, ಗಮನ ಸೆಳೆದಿದೆ. ಅದೀಗ ಮತ್ತೂಂದು ವಿಶೇಷತೆಯಿಂದ ಗಮನ ಸೆಳೆಯಲು ಸಜ್ಜಾಗಿದೆ.

Advertisement

ಹೌದು, ಜಿಲ್ಲೆಯ ಬೀಳಗಿ ತಾಲೂಕಿನ ಹೆರಕಲ್‌ ಬಳಿ ಕಳೆದ 2012-13ನೇ ಸಾಲಿನಲ್ಲಿ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಿಸಲಾಗಿದೆ. ಇದರಿಂದ ಬೀಳಗಿ ತಾಲೂಕಿನ ಹಳ್ಳಿಗಳಿಂದ ಬಸವನಬಾಗೇವಾಡಿ ತಾಲೂಕಿನ ಹಲವು ಹಳ್ಳಿಗಳ ಸಂಪರ್ಕಕ್ಕೆ ಸನಿಹವಾಗಿದ್ದು, ಮುಖ್ಯವಾಗಿ ಘಟಪ್ರಭಾ ನದಿಯಲ್ಲಿ, ಅದರಲ್ಲೂ ಬಾಗಲಕೋಟೆ ನಗರದ ಸುತ್ತ, ಬೀಳಗಿ ತಾಲೂಕಿನ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರು, ನೀರಾವರಿ ಕಲ್ಪಿಸಲು ಅನುಕೂಲವಾಗಿದೆ. 515 ಮೀಟರ್‌ ಎತ್ತರದ ಈ ಸೇತುವೆ ಸಹಿತ ಬ್ಯಾರೇಜ್‌, ಜಿಲ್ಲೆಯಲ್ಲೇ ಅತ್ಯಂತ ಮಾದರಿ ಎಂಬ ಹೆಗ್ಗಳಿಕೆ ಪಡೆದಿದೆ. ವಿಜಯಪುರದ ಜಿ. ಶಂಕರ ಕಂಪನಿ ಇದನ್ನು ಅಚ್ಚುಕಟ್ಟಾಗಿ ನಿರ್ಮಿಸಿ,
ಸೈ ಎನಿಸಿಕೊಂಡಿದೆ. ಈ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಾಣದ ವೇಳೆಯೇ, ಇಲ್ಲಿ ಪಕ್ಷಧಾಮ, ಮೊಸಳೆ ಪಾರ್ಕ್‌, ಉದ್ಯಾನವನ ನಿರ್ಮಿಸಿ, ಇದೊಂದು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಕನಸು ಚಿಗುರೊಡೆದಿತ್ತು. ಅದನ್ನು ಇದೀಗ ನನಸಾಗಿಸುವ ಕಾಲ ಬಂದಿದೆ ಎನ್ನಲಾಗಿದೆ.

ಪ್ರವಾಸಿ ತಾಣದ ಆಶಯ: ಹೆರಕಲ್‌ ಬ್ಯಾರೇಜ್‌ನ ಎರಡೂ ಬದಿಗೆ ನಿಸರ್ಗದತ್ತವಾದ ಬೆಟ್ಟಗಳಿಂದ ನೂರಾರು ಎಕರೆ ಅರಣ್ಯ ಪ್ರದೇಶವಿದೆ. ಹೆರಕಲ್‌ದಿಂದ ಯಡಹಳ್ಳಿ ಗುಡ್ಡದ ವರೆಗೂ ಅರಣ್ಯ ಪ್ರದೇಶ ಬೆಳೆದು ನಿಂತಿದೆ. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ನಂ. 218ರಿಂದ ಸುಮಾರು 14 ಕಿ.ಮೀ.ಯಷ್ಟು ದೂರವಿರುವ ಈ ಪ್ರದೇಶ, ಬ್ಯಾರೇಜ್‌ ನಿರ್ಮಾಣದ ಬಳಿಕ ಪಿಕ್‌ನಿಕ್‌ ಸ್ಪಾಟ್‌ ಆಗಿ ರೂಪುಗೊಂಡಿದೆ. ಆದರೆ, ಸುಂದರ ಬ್ಯಾರೇಜ್‌, ವಿಶಾಲವಾದ ಹಿನ್ನೀರು, ಸ್ವತ್ಛಂದವಾದ ವಾತಾವರಣ ನೋಡಲು ಮಾತ್ರ ಸಾಧ್ಯ. ಆದರೆ, ಇಲ್ಲೊಂದು ಪ್ರವಾಸಿ ತಾಣ ಮಾಡಬೇಕು, ಕುಟುಂಬ ಸಮೇತ ಬಂದು, ವೀಕ್ಷಿಸಬೇಕು. ಆ ನಿಟ್ಟಿನಲ್ಲಿ ಇದೊಂದು ಪ್ರವಾಸಿ ತಾಣ ಮಾಡಬೇಕೆಂಬ ಆಶಯ ಹಲವು ವರ್ಷಗಳಿಂದಲೂ ಕೇಳಿ ಬಂದಿತ್ತು.

ಆಲಮಟ್ಟಿ-ಕೆಆರ್‌ಎಸ್‌ ಮಾದರಿ: ದಕ್ಷಿಣ ಭಾಗದ ಕೆಆರ್‌ಎಸ್‌ ಡ್ಯಾಂ, ಉತ್ತರದ ಆಲಮಟ್ಟಿ ಡ್ಯಾಂ ಸುತ್ತ ಸುಂದರ ಉದ್ಯಾನವನ ನಿರ್ಮಿಸಿದ್ದು, ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ರೂಪುಗೊಂಡಿವೆ. ಅದೇ ಮಾದರಿಯಲ್ಲಿ ಹೆರಕಲ್‌ ಬ್ಯಾರೇಜ್‌ ಸುತ್ತಲಿನ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು, ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆಯೊಂದು ರೂಪಿಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಶೀಘ್ರವೇ ಇದೊಂದು ಸುಂದರ ಪ್ರವಾಸಿ ತಾಣ ಆಗುವುದರಲ್ಲಿ ಸಂದೇಹವಿಲ್ಲ.

40 ಕೋಟಿ ವೆಚ್ಚದ ಯೋಜನೆ: ಹುಬ್ಬಳ್ಳಿ-ವಿಜಯಪುರ ಹೆದ್ದಾರಿಯಿಂದ ಹೆರಕಲ್‌ ಬ್ಯಾರೇಜ್‌ ವರೆಗೆ ಸುಸಜ್ಜಿತ ರಸ್ತೆ, ಬ್ಯಾರೇಜ್‌ ಬಳಿ ಸುಂದರ ಉದ್ಯಾನವನ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ 40 ಕೋಟಿ ವೆಚ್ಚದ ಯೋಜನೆ ರೂಪಿಸಲಾಗುತ್ತಿದೆ. ಮ್ಯೂಜಿಕಲ್‌ ಕಾರಂತಿ, ಉದ್ಯಾನವನ, ಗ್ರಾಮೀಣ ಸೊಗಡಿನ ವಿವಿಧ ಕಲೆ ಹೀಗೆ ಹಲವು ರೀತಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.

Advertisement

ಬಾಗಲಕೋಟೆ, ಬೀಳಗಿ, ಕೊಲ್ಹಾರ, ನಿಡಗುಂದಿ, ಆಲಮಟ್ಟಿ ಹೀಗೆ ಹಲವು ಭಾಗದ ಜನರು ಪ್ರತಿ ರವಿವಾರಕ್ಕೊಮ್ಮೆ ಸೈಕ್ಲಿಂಗ್‌ ಮೂಲಕ ಇಲ್ಲಿಗೆ ಆಗಮಿಸಿ, ಈ ತಾಣದ ಸವಿ ಸವಿಯುತ್ತಾರೆ. ಇನ್ನೂ ಕೆಲವರು ಮನೆಯಲ್ಲಿ ತಿಂಡಿ-ತಿನಿಸು ಮಾಡಿಕೊಂಡು, ಕುಟುಂಬ ಸಮೇತ ಹೋಗಿ ಒಂದಷ್ಟು ಹೊತ್ತು ಇದ್ದು, ಪ್ರಕೃತಿ ಸೌಂದರ್ಯ ಸವೆಯುತ್ತಾರೆ. ಆದರೆ, ಇಲ್ಲಿ ಕುಟುಂಬ ಸಮೇತ ಕುಳಿತುಕೊಂಡು, ಉಪಾಹಾರ ಮಾಡುವ ಜತೆಗೆ ನೋಡುವ ಬೇರೆ ಬೇರೆ ಸೌಂದರ್ಯವಿಲ್ಲ. ಹೀಗಾಗಿ ಪ್ರವಬಾಸಿ ತಾಣವಾಗಿ ರೂಪಿಸುವ ಅಗತ್ಯವಿದೆ ಎಂದು ಹಲವರ ಒತ್ತಾಯ.

ಹೆರಕಲ್‌ ಬ್ಯಾರೇಜ್‌ ಅನ್ನು ಈಗಿರುವ 515 ಮೀಟರ್‌ನಿಂದ 519.60 ಮೀಟರ್‌ ವರೆಗೆ ಎತ್ತರಿಸಲು ಕೆಬಿಜೆಎನ್‌ಎಲ್‌ನಿಂದ 15 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ ದೊರೆತಿದೆ. ಬ್ಯಾರೇಜ್‌ ಎತ್ತರಿಸುವ ಜತೆಗೆ ಇದೊಂದು ಸುಂದರ ಪ್ರವಾಸಿ ತಾಣವನ್ನಾಗಿ ನಿರ್ಮಿಸುವ ಗುರಿ ಹಾಕಿಕೊಂಡಿದ್ದು, ಇದಕ್ಕಾಗಿ 40 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಶೀಘ್ರ ಅನುಷ್ಠಾನಗೊಳಿಸಲಾಗುವುದು.
ಮುರುಗೇಶ ನಿರಾಣಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next