Advertisement

ಬಾಲವನ ಅಭಿವೃದ್ಧಿಗೆ 20 ಕೋ.ರೂ. ಪ್ರಸ್ತಾವ

08:53 AM Oct 19, 2020 | mahesh |

ಪುತ್ತೂರು: ಡಾ| ಶಿವರಾಮ ಕಾರಂತ ಅವರು 40 ವರ್ಷಗಳಿಗೂ ಅಧಿಕ ಕಾಲ ಕಳೆದ ಪರ್ಲಡ್ಕದ ಬಾಲವನವನ್ನು ಪಾರಂಪರಿಕ ತಾಣವಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ 20 ಕೋ. ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಸಂಜೀವ ಮಠಂದೂರು ಅವರ ಮುತುವರ್ಜಿಯಲ್ಲಿ ಈ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಅನುದಾನ ಭರಿಸುವ ನಿಟ್ಟಿನಲ್ಲಿ ಪ್ರಯತ್ನ ಪಗತಿಯಲ್ಲಿದೆ.

Advertisement

ಬೀರಮಲೆ ಬೆಟ್ಟದಿಂದ ಬಾಲವನಕ್ಕೆ ರೋಪ್‌ ವೇ
ಕಾರಂತರ ಬಾಲವನವನ್ನು ಹೆರಿಟೇಜ್‌ ವಿಲೇಜ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಉಸ್ತುವಾರಿ ಸಚಿವರು ಆಸಕ್ತಿ ತೋರಿದ್ದು, ಇದಕ್ಕೆ ಶಾಸಕರು ಕೈ ಜೋಡಿಸಿದ್ದಾರೆ. ಇದಕ್ಕಾಗಿ ಎರಡು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ರಾಜ್ಯ ಸರಕಾರಕ್ಕೆ ಹಾಗೂ ಕೇಂದ್ರ ಸರಕಾರಕ್ಕೆ ತಲಾ 10 ಕೋ.ರೂ.ಪ್ರಸ್ತಾವನೆ ಸಲ್ಲಿಸಲಾಗಿದೆ. ಉದ್ದೇಶಿತ ಯೋಜನೆಯಂತೆ ಪಕ್ಕದ ಬೀರಮಲೆ ಬೆಟ್ಟದಿಂದ ಬಾಲವನಕ್ಕೆ ರೋಪ್‌ ವೇ ನಿರ್ಮಿಸುವುದು ಕೂಡ ಸೇರಿದೆ. ಇದಲ್ಲದೆ ಬಾಲವನದ ಜಮೀನಿಗೆ ಹೆಚ್ಚುವರಿಯಾಗಿ 2 ಎಕ್ರೆ ಸರಕಾರಿ ಜಮೀನನ್ನು ಸೇರ್ಪಡೆಗೊಳಿಸಿ ಸಮಗ್ರ ಕಾರಂತರ ಬದುಕು ಮತ್ತು ಸಾಹಿತ್ಯ, ಸಾಧನೆ, ಹೋರಾಟಗಳನ್ನು ಚಿತ್ರಿಸುವ ಉದ್ದೇಶ ಹೊಂದಲಾಗಿದೆ. ತ್ರಿಡಿ ಥಿಯೇಟರ್‌ ನಿರ್ಮಾಣ, ಕಾರಂತರ ನಾಟ್ಯಶಾಲೆ, ಮುದ್ರಣಾಲಯ, ವಾಚನಾಲಯಗಳ ಅಭಿವೃದ್ಧಿ ಮತ್ತು ಇಡೀ ಪರಿಸರವನ್ನು ಮಾದರಿ ನೆಲೆಯಾಗಿ ರೂಪುಗೊಳಿಸುವ ಯೋಜನೆ ರೂಪಿಸಲಾಗಿದೆ.

ಪುನರುತ್ಥಾನ ಘಟ್ಟ
ಕಾರಂತರು ವಾಸಿಸುತ್ತಿದ್ದ ಮನೆ 2015ರ ವೇಳೆಗೆ ಶಿಥಿಲಗೊಂಡು ಮಳೆಗಾಲದಲ್ಲಿ ಸೋರಲಾರಂಭಿಸಿದ ಸಂದರ್ಭದಲ್ಲಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಮುತುವರ್ಜಿಯಲ್ಲಿ ಮನೆಯ ಪುನಃಶ್ಚೇತನಕ್ಕೆ 29 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ಮೈಸೂರು ಮೂಲದ ಇಂಟ್ಯಾಕ್‌ ಸಂಸ್ಥೆಯು ಪಾರಂಪರಿಕ ಮಾದರಿಯಲ್ಲೇ ಪುನಃಶ್ಚೇತನ ನಡೆಸಿದ್ದು, 2019ರಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಬಾಲವನದ ಸಮಗ್ರ ಅಭಿವೃದ್ಧಿಗಾಗಿ ಸರಕಾರ 2 ವರ್ಷಗಳ ಹಿಂದೆ 1 ಕೋಟಿ ರೂ. ಬಿಡುಗಡೆ ಮಾಡಿತ್ತು.

ರಾಜ್ಯಮಟ್ಟದಲ್ಲಿ ರಚಿಸಲಾದ ಬಾಲವನ ಅಭಿವೃದ್ಧಿ ಸಮಿತಿ ಮತ್ತು ಪುತ್ತೂರು ಎಸಿ ನೇತೃತ್ವದ ಬಾಲವನ ಮೇಲುಸ್ತುವಾರಿ ಸಮಿತಿಗಳು ಸಭೆ ನಡೆಸಿ ಅಭಿವೃದ್ಧಿಗೆ ಯೋಜನೆ ರೂಪಿಸಿತು. ಆ ಅನುದಾನ ಬಳಕೆ ಆಗಬೇಕಿದೆ. ಜತೆಗೆ ಗ್ರಂಥಾಲಯ ನಿರ್ಮಾಣ ಕಾಮ ಗಾರಿಯು ಪ್ರಗತಿಯಲ್ಲಿದ್ದು, ಒಂದು ತಿಂಗಳೊಳಗೆ ಅದನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.

ಬಾಲವನ ಪುತ್ತೂರಿನ ಹಿರಿಮೆ
ನಾಲ್ಕೂವರೆ ದಶಕಗಳ ಕಾಲ ಕಾರಂತರು ನೆಲೆಸಿರುವ ಬಾಲವನ ಪರಿಸರ ಸಾಹಿತ್ಯ, ಸಾಂಸ್ಕೃತಿಕ ಸಮೃದ್ಧ ತಾಣವಾಗಿದ್ದು, 5.90 ಎಕ್ರೆ ವಿಸ್ತೀರ್ಣ ಹೊಂದಿದೆ. ಇಲ್ಲಿ ಕಾರಂತರ ಮನೆ, ಮುದ್ರಣಾಲಯ, ನಾಟ್ಯಾಲಯ, ರಂಗಮಂದಿರ, ವಾಚನಾಲಯಗಳಿದ್ದು, ಕಾರಂತರಿಗೆ ದೊರೆತ ಜ್ಞಾನಪೀಠ ಪ್ರಶಸ್ತಿಯೂ ಇದೆ. ರಾಷ್ಟ್ರ, ಅಂತಾಷ್ಟ್ರೀಯ ಮಟ್ಟದಲ್ಲಿ ಈಜು ಪಟುಗಳನ್ನು ರೂಪಿಸಿದ ಈಜುಕೊಳವೂ ಬಾಲವನ ದಲ್ಲಿ ಇದೆ.

Advertisement

ಪ್ರಸ್ತಾವನೆ ಸಲ್ಲಿಸಲಾಗಿದೆ
ಶಿವರಾಮ ಕಾರಂತರ ಬಾಲವನವನ್ನು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರಂತರು ವಾಸಿಸುತ್ತಿದ್ದ ಮನೆ, ವಾಚನಾಲಯವನ್ನು ಮ್ಯೂಸಿಯಂ ಆಗಿ ಅಭಿವೃದ್ಧಿ, ಮಕ್ಕಳ ಚಟುವಟಿಕೆಗೆ ಪೂರಕವಾಗಿ ಮಕ್ಕಳ ರೈಲು ಸೇರಿದಂತೆ ಹತ್ತಾರು ಯೋಜನೆಗಳ ಅನುಷ್ಠಾನಕ್ಕೆ ಮುಂದಡಿ ಇಡಲಾಗಿದೆ.
-ಸಂಜೀವ ಮಠಂದೂರು, ಶಾಸಕರು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next