ಭಾರತೀಯ ಇತಿಹಾಸ ಮತ್ತು ಪರಂಪರೆಯನ್ನು ಸಾರುವ “ವಿಜಯ ಧ್ವಜ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಇನ್ನು “ವಿಜಯ ಧ್ವಜ’ ಬಹುತೇಕ ಪುಟಾಣಿಗಳೇ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಮಕ್ಕಳ ಚಿತ್ರ. ಚಿತ್ರದಲ್ಲಿ ತನ್ಮಯಿ ಎಸ್. ವಸಿಷ್ಠ, ಮಾಸ್ಟರ್ ಲೋಕೇಶ್, ಮಾಸ್ಟರ್ ಭುವನ್, ಮಾಸ್ಟರ್ ರಕ್ಷನ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ವಿಜಯ ಭಾಸ್ಕರ್, ನಾಗೇಶ್ ಯಾದವ್, ಕ್ಯಾಪ್ಟನ್ ನವೀನ್ ನಾಗಪ್ಪ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು “ವಿಜಯ ಧ್ವಜ’ ಚಿತ್ರದ ಬಗ್ಗೆ ಹೇಳುವುದಾದರೆ, ಹಂಪಿಯ ಪ್ರವಾಸಕ್ಕೆಂದು ಶಾಲೆಯ ಶಿಕ್ಷಕರ ಜತೆಗೆ ನಾಲ್ವರು ವಿದ್ಯಾರ್ಥಿಗಳು ಹೊರಡುತ್ತಾರೆ. ಈ ಪ್ರವಾಸದಲ್ಲಿ ಶಿಕ್ಷಕರು ಹಂಪಿಯ ಕುರಿತಾದ ಕೌತುಕದ ಸಂಗತಿಗಳನ್ನು ಮಕ್ಕಳಿಗೆ ತಿಳಿಸಿದ ಅವರ ಆಸಕ್ತಿಯನ್ನು ಕೆರಳಿಸುತ್ತಾರೆ. ಇದೇ ಹಂಪಿಯ ಪ್ರವಾಸದ ಸಂದರ್ಭದಲ್ಲಿ ಅವರಿಗೆ ಕಾರ್ಗಿಲ್ ಯುದ್ದದಲ್ಲಿ ಭಾಗವಸಿದ್ದ ಸೈನಿಕನೊಬ್ಬನ ಪರಿಚಯವಾಗುತ್ತದೆ.
ಆತ ಕೂಡ ಮಕ್ಕಳಿಗೆ ವಿಜಯನಗರ ಸಾಮ್ರಾಜ್ಯದ ಕುರಿತಾಗಿ ತನಗೆ ತಿಳಿದ ವಿಚಾರಗಳನ್ನು ತಿಳಿಸಿಕೊಡುತ್ತಾನೆ. ಕೊನೆಗೆ ಈ ನಾಲ್ವರು ಮಕ್ಕಳು ತಾವು ಕಂಡು-ಕೇಳಿದ ಸಂಗತಿಗಳನ್ನು, ಹಂಪಿಯಲ್ಲಿರುವ ವಾಸ್ತವದ ಪರಿಸ್ಥಿತಿಯ ಜೊತೆಗೆ ತಾಳೆ ಹಾಕಿ ನೋಡುತ್ತಾರೆ. ಅಲ್ಲದೇ ಭವಿಷ್ಯದಲ್ಲಿ ತಮ್ಮ ಹಾಗೂ ರಾಷ್ಟ್ರದ ಅಭ್ಯುದಯಕ್ಕಾಗಿ, ಪರಕೀಯರ ಆಕ್ರಮಣದಿಂದ ರಾಷ್ಟ್ರ ರಕ್ಷಣೆಗಾಗಿ ಪಣ ತೊಡಬೇಕೆಂದು ನಿರ್ಧರಿಸಿ ಪ್ರಮಾಣ ಮಾಡುತ್ತಾರೆ ಎನ್ನುವುದು ಚಿತ್ರದ ಕಥಾನಕ.
“ವಿಜಯ ಧ್ವಜ’ ಚಿತ್ರದಲ್ಲಿ ಮನರಂಜನೆಯ ಜೊತೆ ಜೊತೆಗೇ ದೇಶಭಕ್ತಿ, ನಾಡನ್ನು ಉಳಿಸಿಕೊಳ್ಳುವ ಸಂದೇಶವನ್ನೂ ಹೇಳಲಾಗಿದೆಯಂತೆ. ಚಿತ್ರಕ್ಕೆ ಜೆ.ಎಂ ಪ್ರಹ್ಲಾದ್ ಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಪವನ್ ಕುಮಾರ್ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಪ್ರವೀಣ್. ಡಿ ರಾವ್ ಸಂಗೀತ ಸಂಯೋಜಿಸಿದ್ದಾರೆ. ದರ್ಶನ್.ಜೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀನಾಥ್ ವಸಿಷ್ಠ ಚಿತ್ರವನ್ನು ನಿರ್ದೇಶಿಸಿದ್ದಾರೆ. “ವಿಜಯ ಧ್ವಜ’ ಚಿತ್ರ ನಾಳೆ ರಾಜ್ಯಾದ್ಯಂತ ಸುಮಾರು ಮೂವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.