ಮೈಸೂರು: ಮೈಸೂರಿನ ದೇವರಾಜ ಮಾರುಕಟ್ಟೆಯನ್ನು ನಂಬಿಕೊಂಡು ಹಲವಾರು ವ್ಯಾಪಾರಸ್ಥರು ತಮ್ಮ ಬದುಕನ್ನು ನಡೆಸುತ್ತಿದ್ದಾರೆ ಹಾಗೂ ಸಾವಿರಾರು ಜನರು ಪ್ರತಿನಿತ್ಯ ಅಗತ್ಯ ವಸ್ತುಗಳನ್ನು ಕೊಳ್ಳಲು ಆಗಮಿಸುವ ಸ್ಥಳವಾದ್ದರಿಂದ ಸಾರ್ವಜನಿಕರ ಸುರಕ್ಷತೆ ಕಾಪಾಡುವುದು ನನ್ನ ಮುಖ್ಯ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಬೆಳಗ್ಗೆ ನಗರದ ದೇವರಾಜ ಮಾರುಕಟ್ಟೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಮೈಸೂರು ರಾಜಮನೆತನದವರು ನಿರ್ಮಿಸಿರುವ ಹಲವಾರು ಪಾರಂಪರಿಕ ಕಟ್ಟಡಗಳು ಇಂದು ಮಳೆ ಬಂದರೆ ಕುಸಿಯುತ್ತಿವೆ. ಇದರಿಂದ ಸಾರ್ವಜನಿಕರು ಆತಂಕದಲ್ಲಿ ಓಡಾಡುವಂತಾಗಿದೆ. ಹೀಗಾಗಿ ಇದನ್ನು ಖುದ್ದು ವೀಕ್ಷಣೆ ಮಾಡಿ ಇವುಗಳ ಉಳಿವಿಗೆ ಕ್ರಮ ಕೈಗೊಳ್ಳಲು ಬಂದಿರುವುದಾಗಿ ತಿಳಿಸಿದರು.
ಮೈಸೂರು ನಗರವು ಪಾರಂಪರಿಕ ಕಟ್ಟಡಗಳ ತಾಣವಾಗಿದೆ. ಹಾಗಾಗಿ ಈ ಕಟ್ಟಡಗಳನ್ನು ನೆಲಸಮಗೊಳಿಸುವುದು ಜನರಿಗೆ ಇಷ್ಟವಿಲ್ಲ ಹಾಗೂ ಸರ್ಕಾರದ ಉದ್ದೇಶವು ಸಹ ಆಗಿರುವುದಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ನಾಗರಿಕರ ಸಭೆಯನ್ನು ಕರೆದು ಸಾರ್ವಜನಿಕರ ಮತ್ತು ತಜ್ಞರ ಅಭಿಪ್ರಾಯವನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.
ನಮಗೆ ಕಟ್ಟಡ ಒಡೆಯುವ ಉದ್ದೇಶವಿಲ್ಲ. ಪಾರಂಪರಿಕ ಕಟ್ಟಡಗಳು ಉಳಿಯಬೇಕು ಹಾಗೂ ಸುಭದ್ರವಾಗಬೇಕು ಮತ್ತು ಸಾರ್ವಜನಿಕರು ಸುರಕ್ಷತೆಯಿಂದ ಇರುವ ಹಾಗೆ ಈ ಕಟ್ಟಡಗಳು ಮರು ಜೀವ ಪಡೆದುಕೊಳ್ಳಬೇಕು. ಇದಕ್ಕಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಸೂಚಿಸಿದ್ದೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್, ಮೈಸೂರು ಮಹಾ ನಗರಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.
ಶಾಸಕ ನಾಗೇಂದ್ರ ಗರಂ: ದೇವರಾಜ ಮಾರುಕಟ್ಟೆ ವೀಕ್ಷಣೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಗಮಿಸುವ ವಿಚಾರವನ್ನು ಅಧಿಕಾರಿಗಳು ಸ್ಥಳೀಯ ಶಾಸಕರಾದ ಬಿಜೆಪಿಯ ಎಲ್.ನಾಗೇಂದ್ರ ಅವರಿಗೆ ತಿಳಿಸಿರಲಿಲ್ಲ. ಹೀಗಾಗಿ ವಿಷಯ ತಿಳಿದು ಸ್ಥಳಕ್ಕೆ ಬಂದ ಶಾಸಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.