Advertisement

ಪರಂಪರೆಯ ಅರಿವು ಅತ್ಯಗತ್ಯ: ಮೂರ್ತಿ

07:50 AM Jul 30, 2017 | Team Udayavani |

ಬದಿಯಡ್ಕ: ಪರಂಪರೆ, ಪುರಾಣಗಳ ಮಾರ್ಗದರ್ಶಿ ಆದರ್ಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಯತ್ನಗಳು ಸ್ತುತ್ಯರ್ಹವಾದುದು. ಮಕ್ಕಳ ಮನೋವಿಕಾಸ ಹಾಗೂ ಬೌದ್ಧಿಕ ಮಟ್ಟದ ಆರೋಗ್ಯಪೂರ್ಣ ಶ್ರೇಯಸ್ಸಿಗೆ ಹಮ್ಮಿಕೊಳ್ಳುವ ಸ್ಪರ್ಧೆ ಸಹಿತವಾದ ವಿವಿಧ ಚಟುವಟಿಕೆಗಳು ಭವಿಷ್ಯದ ದೃಷ್ಟಿಯಿಂದ ಫಲಪ್ರದವಾದುದು ಎಂದು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಶ್ರಾವಣದ ರಾಮಾಯಣ ಮಾಸಾಚರಣೆಯ ಅಂಗವಾಗಿ ಕುಂಬಳೆ ಉಪಜಿಲ್ಲಾ ಮಟ್ಟದಲ್ಲಿ ಬದಿಯಡ್ಕದ ಬ್ಲಾಕ್‌ ತರಬೇತಿ ಕೇಂದ್ರದಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳಲಾದ ರಸಪ್ರಶ್ನೆ ಮತ್ತು ಬರಹ ರಚನಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಋತುಮಾನಗಳಿಗನುಗುಣವಾದ ವಿಶೇಷತೆಗಳು, ಆಚರಣೆಗಳು ಮೊದಲಾದ ಪಾರಂಪರಿಕತೆಯ ಪರಿಚಯ ಕೊರತೆ ಇಂದಿನ ಹೊಸ ತಲೆಮಾರಿಗೆ ಕಾಡುತ್ತಿದ್ದು, ಹಾಗಾಗದಂತೆ ಕಾರ್ಯಚಟುವಟಿಕೆ ಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಶಾಲಾ ಪಠ್ಯಗಳ ಜೊತೆಗೆ ಸಮಗ್ರ ಜ್ಞಾನ ಸಂಪಾದನೆಯು ಶಿಕ್ಷಣವನ್ನು ಪೂರ್ಣಗೊಳಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿ, ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳು ವಿದ್ಯಾರ್ಥಿಗಳ ಸೃಜನಾತ್ಮಕತೆಯನ್ನು ಬೆಳೆಸಿ ಯಶಸ್ವಿಯಾಗಲೆಂದು ಹಾರೈಸಿದರು.

ಕುಂಬಳೆ ಬ್ಲಾಕ್‌ ಸಂಪನ್ಮೂಲ ಕೇಂದ್ರದ ಅಧಿಕಾರಿ ಕುಂಞಿಕೃಷ್ಣನ್‌ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲೆಯ  80ಕ್ಕಿಂತಲೂ ಮಿಕ್ಕಿದ ಶಾಲೆಗಳ ಆಯ್ದ 45 ಮಂದಿ ವಿದ್ಯಾರ್ಥಿ ಸ್ಪರ್ಧಾಳುಗಳು ಭಾಗವಹಿಸಿದರು. ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ರಾಮಾಯಣ ಮೇಲಿನ ರಸಪ್ರಶ್ನೆ ಹಾಗು ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸು#ಟವಾದ ಬರಹಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಪೈಕಿ ಹಿರಿಯ ಪ್ರಾಥಮಿಕ ಶಾಲೆಯ ಐವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. ಏತಡ್ಕ ಶಾಲಾ ಸಂಸ್ಕೃತ ಶಿಕ್ಷಕ ಮಧುಶ್ಯಾಮ್‌ ಸ್ವಾಗತಿಸಿದರು. ಸೂರಂಬೈಲು ಶಾಲಾ ಶಿಕ್ಷಕ ರಾಜು ಮಾಸ್ತರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next