ಬಸ್ರೂರು: ಬಸ್ರೂರು – ಹಟ್ಟಿಕುದ್ರು ಸಂಪರ್ಕ ಸೇತುವೆ ಕಾಮಗಾರಿ ಲಾಕ್‌ಡೌನ್‌ನಿಂದಾಗಿ ಕೆಲ ಕಾಲ ಸ್ಥಗಿತಗೊಂಡಿದ್ದು, ಮತ್ತೆ ಮಳೆಗಾಲದ ಅನಂತರ ಆರಂಭವಾಗಲಿದೆ.
ಈ ಭಾಗದ ಜನರ ಎಪ್ಪತ್ತಕ್ಕೂ ಹೆಚ್ಚು ವರ್ಷಗಳ ಹಿಂದಿನ ಬೇಡಿಕೆ ಇದಾಗಿದ್ದು, ವಿಧಾನ ಪರಿಷತ್‌ನ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ಶಿಫಾರಸಿನ ಮೇರೆಗೆ ವಾರಾಹಿ ನೀರಾವರಿ ನಿಗಮದಿಂದ ಸೇತುವೆಗಾಗಿ 14.69 ಕೋ.ರೂ. ಅನುದಾನ ಮಂಜೂರಾಗಿತ್ತು. ಸುಮಾರು ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಗುತ್ತಿಗೆದಾರರು ಕಾಮಗಾರಿ ನಡೆಸಿದ್ದರು. ಈಗಾಗಲೇ ಒಂಭತ್ತು ಪಿಲ್ಲರ್‌ಗಳು ನಿರ್ಮಾಣವಾಗಿದ್ದು ಒಟ್ಟು 22 ಪಿಲ್ಲರ್‌ಗಳನ್ನು ನಿರ್ಮಿಸಬೇಕಾಗಿದೆ.
330 ಮೀ. ಉದ್ದದ ಈ ಸೇತುವೆಯ 22 ಪಿಲ್ಲರ್‌ಗಳನ್ನು ಇಷ್ಟರೊಳಗೆ ನಿರ್ಮಾಣ ಮಾಡುವ ಯೋಜನೆ ಗುತ್ತಿಗೆದಾರದವರದ್ದಾಗಿತ್ತು. ಆದರೆ ಮಾರ್ಚ್ ಕೊನೆಯ ವಾರದಲ್ಲಿ ಲಾಕ್‌ಡೌನ್ ಆದ ಕಾರಣ ಸೇತುವೆ ನಿರ್ಮಾಣಕ್ಕೆ ಬೇಕಾದ ಸಲಕರಣೆಗಳು ಸರಬರಾಜಾಗುತ್ತಿಲ್ಲ. ನಿರ್ಮಾಣ ಕಾರ್ಮಿಕರು ಉಪಸ್ಥಿತರಿದ್ದರೂ ಸಲಕರಣೆಗಳಿಲ್ಲದೆ ಸೇತುವೆ ಕಾಮ ಗಾರಿಯನ್ನು ನಿಲ್ಲಿಸಲಾಗಿತ್ತು.
ಪ್ರಸ್ತುತ ವಾರಾಹಿ ನದಿಯ ಮುಕ್ಕಾಲು ಭಾಗಕ್ಕೆ ಮಣ್ಣು ತುಂಬಿಸಲಾಗಿತ್ತು. ಆದರೆ ಮಳೆಗಾಲ ಆರಂಭವಾದರೆ ಮಣ್ಣಿನಿಂದ ನೀರನ್ನು ನಿಲ್ಲಿಸಿದ್ದುದರ ಪರಿಣಾಮವಾಗಿ ಹಿನ್ನೀರು ಹೆಚ್ಚಾಗಿ ಕೃತಕ ನೆರೆ ಬಂದು ಹಟ್ಟಿಕುದ್ರುವಿನ ಭಾಗದಲ್ಲಿ ನದಿ ಕೊರೆತ ಹೆಚ್ಚಾಗುವ ಸಾಧ್ಯತೆಯೂ ಇದೆ! ಈ ಕಾರಣದಿಂದ ಈಗ ಪಿಲ್ಲರ್(ಸ್ತಂಭ) ನಿರ್ಮಾಣಕ್ಕೆ ಪೂರಕವಾಗಿ ಹರಿಯುವ ನೀರಿಗೆ ಅಡ್ಡಲಾಗಿ ಹಾಕಿದ್ದ ಮಣ್ಣನ್ನು ಜಿ.ಸಿ.ಬಿ.ಯಿಂದ ತೆಗೆಯಲಾಗುತ್ತಿದೆ. ಕಾಮಗಾರಿ ಅಪೂರ್ಣವಾದರೂ ಮಳೆಗಾಲದಲ್ಲಿ ಕಾಮಗಾರಿ ನಡೆಸುವಂತಿಲ್ಲದ ಕಾರಣ ಈ ಮಣ್ಣನ್ನು ತೆಗೆಯಲಾಗುತ್ತಿದೆ. ಈಗಾಗಲೇ ಒಂಭತ್ತು ಸ್ತಂಭಗಳು ನಿರ್ಮಾಣವಾಗಿದ್ದು ಇನ್ನೂ ಹದಿಮೂರು ಪಿಲ್ಲರ್‌ಗಳು ನಿರ್ಮಾಣವಾಗಬೇಕಾಗಿದೆ.
ಮುಂದಿನ ಕಾಮಗಾರಿ ಏನಿದ್ದರೂ ಮಳೆ ಗಾಲದ ಅನಂತರವಾಗಿದ್ದು, ಅಲ್ಲಿಯವರೆಗೆ ಹಟ್ಟಿಕುದ್ರುವಿನ ವಿದ್ಯಾರ್ಥಿಗಳು, ಇಲ್ಲಿನ ಜನರಿಗೆ ನದಿ ದಾಟಲು ದೋಣಿಯೊಂದೇ ಆಸರೆಯಾಗಿದೆ.