Advertisement

ದೇಹ ತಂಪಾಗಿಸಲು ಇಲ್ಲಿದೆ ಪರಿಹಾರ

06:18 PM Mar 29, 2022 | Team Udayavani |

ಬೇಸಗೆ ಕಾಲದಲ್ಲಿ ನಮ್ಮನ್ನು ಹತ್ತು ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುತ್ತವೆ. ಮೇಲ್ನೋಟಕ್ಕೆ ಈ ಸಮಸ್ಯೆಗಳು ಸಾಮಾನ್ಯ ಎಂದೆನಿಸಿದರೂ ಅವುಗಳಿಂದ ನಾವು ಅನುಭವಿಸುವ ಕಿರಿಕಿರಿ ಹೇಳತೀರದು. ದೇಹದ ಉಷ್ಣತೆ ಹೆಚ್ಚಿದಂತೆ ನಮ್ಮಲ್ಲಿ ಪಿತ್ತ ಪ್ರಕೃತಿ ಅಧಿಕವಾಗಿ ನಾನಾ ತೆರನಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂದಿನ ಆಧುನಿಕ ಕಾಲದಲ್ಲಿ ಈ ಸಮಸ್ಯೆಗಳಿಗೆ ನಾವು ಮೆಡಿಕಲ್‌ ಶಾಪ್‌ ಗಳಲ್ಲಿ ಸಿಗುವ ವಿವಿಧ ಬಗೆಯ ಲೋಶನ್‌, ಕ್ರೀಮ್‌ಗಳ ಮೊರೆ ಹೋಗುತ್ತೇವೆ. ಇದರ ಬದಲಾಗಿ ಈ ಎಲ್ಲ ಸಮಸ್ಯೆಗಳಿಂದ ಮುಕ್ತವಾಗಲು ನಮ್ಮ ಮನೆಯಲ್ಲಿಯೇ ಹಲವು ಬಗೆಯ ಔಷಧೀಯ ಗುಣಗಳ ವಸ್ತು ಮತ್ತು ಸಸ್ಯಗಳಿವೆ. ಇವುಗಳ ಬಗೆಗೆ ತಿಳಿದುಕೊಂಡು ಅವುಗಳನ್ನು ಹಿತಮಿತವಾಗಿ ಸೇವಿಸಿದ್ದೇ ಆದಲ್ಲಿ ಬೇಸಗೆ ಕಾಲದಲ್ಲಿ ನಮ್ಮನ್ನು ಕಾಡುವ ಬಹುತೇಕ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಪಾರಾಗಬಹುದು.

Advertisement

ಬೇಸಗೆ ಬಂತೆಂದರೆ ಸಾಕು ಜನರು ಅದರಲ್ಲೂ ಕರಾವಳಿಯ ಜನರು ಹಿಡಿಶಾಪ ಹಾಕಲಾರಂಭಿಸುತ್ತಾರೆ. ದಿನವಿಡೀ ಮೈಯಿಂದ ಒಂದೇ ಸವನೆ ಬೆವರಿಳಿಯುತ್ತಿರುತ್ತದೆ. ಇದರಿಂದ ಪಾರಾಗಲು ತಂಪಾದ ಪಾನೀಯಗಳ ಮೊರೆ ಹೋಗು ತ್ತಾರೆ. ಆದರೆ ಇವೆಲ್ಲವೂ ತಾತ್ಕಾಲಿಕ ಉಪ ಶಮನಗಳಾಗಿರುತ್ತವೆಯೇ ವಿನಾ ನಮ್ಮ ದೇಹದಲ್ಲಿ ಹೆಚ್ಚಿರುವ ಉಷ್ಣತೆಯನ್ನು ಕಡಿಮೆ ಮಾಡಲು ಸಹಕಾರಿಯಲ್ಲ. ಅಷ್ಟು ಮಾತ್ರವಲ್ಲದೆ ದೇಹವನ್ನು ತಂಪುಗೊಳಿಸಲು ನಾವು ಸೇವಿಸುವ ಈ ಪಾನೀಯಗಳಿಂದಾಗಿ ಅಡ್ಡಪರಿಣಾಮಗಳೇ ಹೆಚ್ಚು.

ಬೇಸಗೆ ಎಂದರೆ ನೆನಪಾಗುವುದು ಎಲ್ಲೆಡೆಯೂ ಬಿಸಿ, ಸುಸ್ತು, ಬೆವರಿನ ಹನಿಗಳು, ಎದೆಯುರಿ, ಕೆಂಪಾದ ಮುಖ, ಮೈಯಲ್ಲಿ ಸೆಕೆಯ ಗುಳ್ಳೆಗಳು, ಯಾಕೆಂದರೆ ಈ ಬೇಸಗೆ ಎಂದರೆ ಪಿತ್ತ ಪ್ರಕೃತಿ ಹೆಚ್ಚಾಗುವ ಕಾಲ, ದೇಹ ಹಾಗೂ ವಾತಾವರಣದಲ್ಲಿ ಬಿಸಿ (ಪಿತ್ತ) ಜಾಸ್ತಿಯಾಗುತ್ತದೆ. ಹಾಗಾಗಿ ಇದನ್ನು ಕಡಿಮೆ ಮಾಡಲು ಏನಾದರೂ ತಂಪಾದ ತಿನಿಸು ತಿನ್ನಬೇಕು ಎನ್ನುವ ಬಯಕೆ ಮೂಡುವುದು ಸಹಜ. ಈ ಬಯಕೆ ಹೆಚ್ಚಾಗಿ ಬೇಕಾಬಿಟ್ಟಿ ತಿಂದರೆ ಆಮೇಲೆ ಕಾಡುವ ಆಸಿಡಿಟಿ ತೊಂದರೆಗಳಾದ ಅಜೀರ್ಣ ಎದೆಯುರಿ, ವಾಂತಿ, ಭೇದಿ, ತಲೆಸುತ್ತು ಹಾಗೂ ಕೊರೊನಾ ಬಂದ ಮೇಲಂತು ಮಾಸ್ಕ್ ಹಾಕಿ ಓಡಾಡುವ ಕಷ್ಟದ ಜತೆಗೆ ಬೆವರಿನಿಂದ ಮುಖದ ಮೇಲೆ ಮೊಡವೆಗಳ ಕಾಟ. ಇವೆಲ್ಲವನ್ನೂ ತಣಿಸಲು ಸುಲಭ ಉಪಾಯಗಳು ಆಯುರ್ವೇದದಲ್ಲಿವೆ.

ಬೆಳಗ್ಗೆ ಗಂಟೆ 10 ರಿಂದ ಮಧ್ಯಾಹ್ನದ 2ಗಂಟೆಯ ವರೆಗೆ ಸೂರ್ಯನ ಕಿರಣಗಳು ನೇರವಾಗಿ ಭೂಮಿಯನ್ನು ಸ್ಪರ್ಶಿಸುತ್ತವೆ. ಇದು ನಮ್ಮಲ್ಲಿ ಪಿತ್ತವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಆದಷ್ಟು ಒಳಾಂಗಣ ಕೆಲಸ ಕಾರ್ಯಗಳಲ್ಲಿ ತೊಡಗುವುದು ಉತ್ತಮ. ಪಿತ್ತ ಪ್ರಕೃತಿಯು ಹೆಚ್ಚಾದಂತೆ ಮಾನಸಿಕ ಉದ್ವೇಗ, ಕ್ರೋಧ, ಸಿಟ್ಟು, ಒತ್ತಡವೂ ಸಹಜವಾಗಿ ಅಧಿಕಗೊಳ್ಳುತ್ತದೆ. ಹಾಗಾಗಿ ಬೆಳಗ್ಗಿನ ವೇಳೆ ವ್ಯಾಯಾಮ ಮಾಡುವ ಅಭ್ಯಾಸ ಇರುವವರು ಬೇಗನೆ ಎದ್ದು ಧ್ಯಾನ, ಪ್ರಾಣಾಯಾಮ ಹಾಗೂ ಇತರ ವ್ಯಾಯಾಮಗಳನ್ನು ಮಾಡಬೇಕು. ಬಿರು ಬೇಸಗೆಯ ಸಂದರ್ಭದಲ್ಲಿ ಸಾಧ್ಯವಾದಷ್ಟು ಫ್ರಿಡ್ಜ್  ನಲ್ಲಿಟ್ಟು ಶೀತಲೀಕರಿಸಿದ ಆಹಾರ, ಸೋಡಾ, ಜ್ಯೂಸ್‌ಗಳನ್ನು ತ್ಯಜಿಸಬೇಕು. ದೇಹದ ಉಷ್ಣಾಂಶ ವನ್ನು ಕಡಿಮೆ ಮಾಡಲು ನಿಂಬೆ ರಸದ ಪಾನಕ, ಕಬ್ಬಿನ ಹಾಲು, ಎಳನೀರು, ಕೋಕಂನ ಪಾನಕ, ಆಮ್ಲ, ಕಲ್ಲಂಗಡಿ ಹಣ್ಣಿನ ರಸ ಉತ್ತಮ. ಒಂದು ಚಮಚ ಕೊತ್ತಂಬರಿ ಕಾಳುಗಳನ್ನು ನೀರಿನಲ್ಲಿ ಹಿಂದಿನ ರಾತ್ರಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯು ವುದರಿಂದ ದೇಹದಲ್ಲಿ ಉಷ್ಣತೆ ಕಡಿಮೆಯಾಗುತ್ತದೆ. ಗುಲಾಬಿ ದಳಗಳ ರೋಸ್‌ ವಾಟ ರನ್ನು ಲಿಂಬೆ ಪಾನಕದಲ್ಲಿ ಬೆರೆಸಿ ಕುಡಿದರೆ ದೇಹ ತಂಪಾಗುತ್ತದೆ.

ಹಾಗೆಯೇ ಮಣ್ಣು/ತಾಮ್ರ/ ಹಿತ್ತಾಳೆಯ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರು ಕುಡಿಯಬೇಕು. ಇದು ಪಿತ್ತ ದೋಷವನ್ನು ನಿವಾರಿಸಲು ಸಹಕಾರಿ. ಬೇಸಗೆಯಲ್ಲಿ ನಿದ್ದೆಯೂ ಬಹುಮುಖ್ಯ ಪಾತ್ರ ವಹಿಸುತ್ತದೆ. ಬೇಸಗೆ ಕಾಲದಲ್ಲಿ ಸರಿಯಾಗಿ ನಿದ್ದೆ ಮಾಡಿ ಮನಸ್ಸನ್ನು ಪ್ರಸನ್ನವಾಗಿ ಇಡುವುದು ತುಂಬಾ ಮುಖ್ಯ. ಮನೆಯ ಒಳಾಂಗಣದಲ್ಲಿ ನೀರಿನ ಕುಂಡ ಗಳನ್ನು ಇರಿಸಿದಲ್ಲಿ ಅದು ವಾತಾವರಣ ವನ್ನು ತಂಪಾಗಿಸಲು ಸಹಕರಿಸುತ್ತದೆ.

Advertisement

ಮನೆಯಲ್ಲಿ ತಯಾರಿಸುವ ಆಹಾರದಲ್ಲಿಯೂ ಜೀರಿಗೆ, ಹಿಂಗನ್ನು ಮಜ್ಜಿಗೆಗೆ ಹಾಕಿ ಕುಡಿದರೂ ದೇಹ ತಂಪಾಗುವುದರ ಜತೆಗೆ ಅಜೀರ್ಣದಂತಹ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಹುಳಿ, ಖಾರ, ಉಪ್ಪಿನ ಅಂಶ ಆದಷ್ಟು ಕಡಿಮೆ ಸೇವಿಸಬೇಕು. ಹಣ್ಣು ತರಕಾರಿ ಸೊಪ್ಪನ್ನು ಆಹಾರದಲ್ಲಿ ಹೆಚ್ಚು ಉಪಯೋಗಿಸಬೇಕು, ಮುಳ್ಳುಸೌತೆಯು ಹೆಚ್ಚಿನ ನೀರಿನಂಶ ಹೊಂದಿದ್ದು ಬೇಸಗೆಗೆ ಉತ್ತಮ. ಹಸು ವಿನ ತುಪ್ಪ ಪಿತ್ತ ದೋಷವನ್ನು ಕಡಿಮೆ ಮಾಡಲು, ದೇಹದ ಒಳಗೆ ಹಾಗೂ ಚರ್ಮದ ತೇವಾಂಶ ವನ್ನು ಹಿಡಿದಿಟ್ಟುಕೊಳ್ಳಲು ಸಹಾಯಕ ವಾಗಿದೆ. ಇವೆಲ್ಲದರ ಹಿತಮಿತ ಸೇವನೆಯಿಂದ ಆರೋಗ್ಯ ರಕ್ಷಣೆ ಸಾಧ್ಯ.

ಪಿತ್ತ ಹೆಚ್ಚಾದಾಗ ಬೇವಿನ ಸೊಪ್ಪು ರಾಮಬಾಣದಂತೆ ಕೆಲಸ ಮಾಡುತ್ತದೆ. ಬಿಸಿಲಿನ ತಾಪದಿಂದ ದೇಹದಲ್ಲಿ ಬೆವರಿನ ಗುಳ್ಳೆಗಳು ಬಿದ್ದಲ್ಲಿ ಬೇವಿನ ರಸ ಅಥವಾ ಆಯುರ್ವೇದದ ಬೇವಿನ ಮಾತ್ರೆಗಳನ್ನು ಸೇವಿಸ ಬಹುದು ಇಲ್ಲವೇ ಬೇವಿನ ಎಣ್ಣೆಯನ್ನೂ ಉಪಯೋಗಿಸಬಹುದು.

ಮುಖದ ಮೊಡವೆ ನಿವಾರಣೆಗೆ ಮುಲ್ತಾನಿ ಮಿಟ್ಟಿಯನ್ನು ರೋಸ್‌ ವಾಟರ್‌ ಜತೆಗೆ ಹಚ್ಚಿದರೆ ತ್ವಚೆಯ ಉಷ್ಣತೆ ಕಡಿಮೆಯಾಗಿ, ಕಾಂತಿ ಹೆಚ್ಚುವುದು. ಹಾಗೆಯೇ ಬೇಸಗೆ ಕಾಲದಲ್ಲಿ ಜಂಕ್‌ ಫುಡ್‌, ಹೊರಗಿನ ಕುರುಕು ತಿಂಡಿಗಳನ್ನು ತ್ಯಜಿಸಿ, ದೇಹದ ಸರಿಯಾದ ಪ್ರಮಾಣದಲ್ಲಿ ನೀರು ಅಥವಾ ನೀರಿನಂಶ ಹೆಚ್ಚಿರುವ ಹಣ್ಣು ತರಕಾರಿ ಉಪಯೋಗಿಸಿ ಹಾಗೂ ಸರಿಯಾದ ಸಮಯಕ್ಕೆ ನಿದ್ದೆ, ವ್ಯಾಯಾಮ ಮಾಡಿ ಮನಸ್ಸನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಸಾಧ್ಯ.

– ಡಾ| ಡಯಾನಾ ಸವಿತಾ
ಕಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next