ಜಮಖಂಡಿ: ಮಹಾರಾಷ್ಟ್ರದಲ್ಲಿ ಪಕ್ಷಕ್ಕೆ ದ್ರೋಹ ಮಾಡಿದ ರೆಬಲ್‌ಗಳಿಗೆ ಅಲ್ಲಿನ ಜನ ತಕ್ಕ ಪಾಠ ಕಲಿಸಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಜನ ತಕ್ಕ ಉತ್ತರ ಕೊಡಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ನಮ್ಮ ಶಾಸಕರನ್ನು ರಾಜೀನಾಮೆ ಕೊಡಿಸಿ ಯಡಿಯೂರಪ್ಪ ಹಿಂಬಾಗಿಲಿನಿಂದ ಸಿಎಂ ಆಗಿದ್ದಾರೆ. ಗೋಕಾಕ್, ಅಥಣಿ, ಕಾಗವಾಡ ಸೇರಿದಂತೆ 15 ಕ್ಷೇತ್ರಗಳಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ.
ಆಗ ಯಡಿಯೂರಪ್ಪ ರಾಜೀನಾಮೆ ಕೊಡಬೇಕಾಗುತ್ತದೆ. ಮಾಜಿ ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪ ಸರ್ಕಾರ ಬೀಳಿಸಲು ಬಿಡಲ್ಲ ಅಂತಿದ್ದಾರೆ. ಅವರು ಉಳಿಸಿಕೊಳ್ಳಲಿ. ನಾನು ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಾಣುತ್ತಿಲ್ಲ ಎಂದರು.
ಸಮಾಜದ ಎಲ್ಲ ವರ್ಗದ ಜನರಿಗೆ ನಾನು ಹಲವು ಯೋಜನೆ ಕೊಟ್ಟೆ. ಆದರೆ, ಬಿಜೆಪಿಯವರು ಮನೆ, ಮನೆಗೆ ಹೋಗಿ ಸುಳ್ಳು ಹೇಳಿದರು. ನಮ್ಮ ಕಾರ್ಯಕರ್ತರು ಸತ್ಯವನ್ನೂ ಹೇಳಲಿಲ್ಲ. ಬಿಜೆಪಿಯವರ ಸುಳ್ಳಿನ ಪ್ರಚಾರದಿಂದಲೇ ನಾವು ಅಧಿಕಾರಕ್ಕೆ ಬರಲಾಗಲಿಲ್ಲ ಎಂದರು.
ಬಿಎಸ್‌ವೈ ಭವಿಷ್ಯ ಕಲಿತಿದ್ದಾರಾ?: “ಸಿದ್ದರಾಮಯ್ಯ ಕಾಯಂ ವಿರೋಧ ಪಕ್ಷದ ನಾಯಕರಾಗಿರುತ್ತಾರೆ ಎನ್ನುವ ಯಡಿಯೂರಪ್ಪ ಪುರೋಹಿತರಾ? ಅವರು ಭವಿಷ್ಯ ಹೇಳುತ್ತಾರಾ? ಭವಿಷ್ಯ ಕಲಿತಿದ್ದಾರಾ? ಪಂಚಾಂಗ ಓದುತ್ತಾರಾ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
“ಪ್ರವಾಹ ಪರಿಹಾರ ವಿಷಯದಲ್ಲಿ ನಾನು ಸುಳ್ಳು ಹೇಳಿಲ್ಲ. ಯಡಿಯೂರಪ್ಪ ಅವರೇ ಸುಳ್ಳು ಹೇಳುತ್ತಿದ್ದಾರೆ. ನಾನು ಸತ್ಯವನ್ನೇ ಹೇಳಿದ್ದೇನೆ. ಬಿಎಸ್‌ವೈಯನ್ನು ನೋಡಿದರೆ ನನಗೆ ಪಾಪ ಅನಿಸುತ್ತದೆ. ಬಿಎಸ್‌ವೈಗೆ ಮೋದಿ ಸಹಾಯ ಮಾಡುತ್ತಿಲ್ಲ. ಪ್ರವಾಹದಿಂದ 38 ಸಾವಿರ ಕೋಟಿ ರೂ.ಹಾನಿಯಾದರೆ, 1,200 ಕೋಟಿ ಕೊಟ್ಟಿದ್ದಾರೆ’ ಎಂದರು.