ನರೇಗಲ್ಲ: ಪಟ್ಟಣದ ಬಸ್ ನಿಲ್ದಾಣ ನವೀಕರಣಗೊಳ್ಳುತ್ತಿರುವುದರಿಂದ ಈಗ ರಾಜ್ಯ ಹೆದ್ದಾರಿಯೇ ಬಸ್ ನಿಲ್ದಾಣವಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಯಿತು ಎಂಬ ಸಂತಸ ಒಂದೆಡೆಯಾದರೆ ಪ್ರಸ್ತುತ ಬಸ್‌ಗಳು ಎಲ್ಲಿ ನಿಲ್ಲಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಪ್ರಯಾಣಿಕರು ಉರಿ ಬಿಸಿಲಿನಲ್ಲಿ ಹೆದ್ದಾರಿಯಲ್ಲಿ ಬಸ್‌ಗಾಗಿ ಕಾಯುತ್ತ ನಿಲ್ಲುವುದು ಅನಿವಾರ್ಯವಾಗಿದೆ.
ಸ್ಥಳದ ಕೊರತೆ: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಮತ್ತು ಖಾಸಗಿ ವಾಹನ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಬಸ್ ನಿಲುಗಡೆಗೆ ಸ್ಥಳಾವಕಾಶ ಇಲ್ಲದಂತಾಗಿದೆ. ಇದರಿಂದ ಪ್ರಯಾಣಿಕರು ತಾವು ಹಿಡಿಯಬೇಕಾದ ಬಸ್ ಹುಡುಕುವಲ್ಲಿ ಸುಸ್ತಾಗುವಂತಾಗಿದೆ. ಅದರಲ್ಲೂ ವೃದ್ಧರು, ಮಹಿಳೆಯರು, ಅಂಗವಿಕಲರ ಪಾಡು ಹೇಳತೀರದು.
ಅಪಘಾತವಾಗುವ ಸಂಭವ: ರಸ್ತೆ ದಾಟುವಾಗ ಪಾದಚಾರಿಗಳು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುವ ಪರಿಸ್ಥಿತಿ ಇದೆ. ಹೆದ್ದಾರಿ ಮೇಲೆ ಜನದಟ್ಟಣೆ ಹೆಚ್ಚಾಗಿ ಅಪಘಾತವಾಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗವಿಲ್ಲದ್ದರಿಂದ ನಿಲ್ದಾಣದ ಬಾಗಿಲಿಗೆ ಹಾಕಿದ ಮುಳ್ಳುಗಳ ಬದಿಯಲ್ಲಿಯೇ ಕುಳಿತುಕೊಳ್ಳುತ್ತಿದ್ದಾರೆ. ಯಾವ ಬಸ್ ಎಲ್ಲಿ ನಿಲ್ಲುತ್ತದೆ, ಯಾವ ಕಡೆಗೆ ಹೋಗುತ್ತದೆ ಎಂಬುದು ಪ್ರಯಾಣಿಕರಿಗೆ ಗೊತ್ತಾಗುವುದಿಲ್ಲ. ನಿಲ್ದಾಣದ ಅಧಿಕಾರಿ ಕೂಡ ಕೆಎಸ್‌ಆರ್‌ಟಿಸಿ ವಾಣಿಜ್ಯ ಮಳಿಗೆಯಲ್ಲಿ ಕೂರುವುದು ಅನಿವಾರ್ಯವಾಗಿದೆ.
ಸ್ವಚ್ಛತೆ ಕೊರತೆ : ಬಸ್ ನಿಲ್ದಾಣದಲ್ಲಿ ಯಾವಾಗಲೂ ಕಸದ ರಾಶಿ ಕಂಡು ಬರುತ್ತಿದೆ. ಕಸದೊಂದಿಗೆ ನೀರು ನಿಂತು ಗಬ್ಬು ನಾರುತ್ತಿದೆ. ಪ್ರತಿ ದಿನ ನೂರಾರು ಬಸ್ಸುಗಳು, ಸಾವಿರಾರು ಪ್ರಯಾಣಿಕರು ಬಂದು ಹೋಗುವುದರಿಂದ ಸ್ವಚ್ಛತೆ ಮರೀಚಿಕೆಯಾಗಿದೆ. ಬಸ್ ನಿಲ್ಲುವ ಸ್ಥಳದಲ್ಲಿ ಪ್ರಯಾಣಿಕರು ತಂಪು ಪಾನೀಯ ಪ್ಯಾಕೇಟ್, ಖಾಲಿ ಬಾಟಲಿ, ನಿಷೇಧಿತ ಪ್ಲಾಸ್ಟಿಕ್ ಕಾಣುತ್ತಿದೆ. ಇದರಿಂದ ಸ್ವಚ್ಛತೆ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.
•ವಿ.ಎಸ್. ಕಾಗವಾಡೆ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ, ರೋಣ
Advertisement
ಬಸ್ ನಿಲ್ದಾಣ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ನಿಲ್ದಾಣದ ಒಳಗೆ ವಾಹನಗಳು ಹೋಗದಂತೆ ತಡೆಯಲು ನಿಲ್ದಾಣದ ಎರಡೂ ದ್ವಾರಗಳಿಗೆ ಮುಳ್ಳು ಹಚ್ಚಲಾಗಿದೆ. ಹೀಗಾಗಿ ಬಸ್‌ಗಳು ಅನಿವಾರ್ಯವಾಗಿ ರಾಜ್ಯ ಹೆದ್ದಾರಿಯಲ್ಲಿಯೇ ನಿಲ್ಲುವಂತಾಗಿದೆ. ಬಸ್ ನಿಲ್ದಾಣ ವಾಣಿಜ್ಯ ಮಳಿಗೆಯಲ್ಲಿರುವ ಅಂಗಡಿ ಮಾಲೀಕರು ಹೆದ್ದಾರಿ ಅರ್ಧ ರಸ್ತೆ ಅಕ್ರಮವಾಗಿ ಪಡೆದುಕೊಂದ್ದಾರೆ. ಇದರ ಮಧ್ಯೆ ಪಾದಚಾರಿಗಳು ಇದೇ ರಸ್ತೆಯಲ್ಲಿ ಓಡಾಡುವುದರಿಂದ ಬಸ್ ನಿಲ್ದಾಣಕ್ಕೆ ತ್ರೀವ ತೊಂದರೆಯಾಗಿದೆ. ಇದರಿಂದ ಹೆಚ್ಚು ಪ್ರಯಾಣಿಕರು ಹಾಗೂ ಸುತ್ತಲಿನ ವ್ಯಾಪಾರಿಗಳಿಗೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
Related Articles
Advertisement
ಛಾವಣಿ ಕುಸಿತ: ಬಸ್ ನಿಲ್ದಾಣದಲ್ಲಿ ಕುಳಿತ ಪ್ರಯಾಣಿಕರು ತಮ್ಮ ಬಸ್ ಬಂತೇ ಎಂದು ಮುಂದೆ ನೋಡುವುದಿಲ್ಲ. ತಲೆಯ ಮೇಲೆ ಏನಾದರೂ ಬಿದ್ದೀತೆಂಬ ಆತಂಕದಲ್ಲಿ ಮೇಲ್ಗಡೆ ನೋಡುತ್ತಿರುತ್ತಾರೆ. ಈ ಬಸ್ ನಿಲ್ದಾಣದ ಕಟ್ಟಡ ಈಗ ಶಿಥಿಲಾವಸ್ಥೆ ತಲುಪಿದೆ. ಕಟ್ಟಡ ಛಾವಣಿ ಸಿಮೆಂಟ್ ತುಂಡಾಗಿ ಬೀಳುತ್ತಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಶೌಚಾಲಯ ಕೊರತೆ : ಬಸ್ ನಿಲ್ದಾಣದ ಕಾಮಗಾರಿ ನಡೆದಿರುವುದರಿಂದ ಮಹಿಳೆಯರಿಗೆ ಶೌಚಕ್ಕೆ ಸಮಸ್ಯೆಯಾಗಿದೆ. ನಿಲ್ದಾಣದ ಒಳಗೆ ಶೌಚಕ್ಕೆ ಹೋಗಬೇಕಾದರೆ ಮಹಿಳೆಯರು ಮುಜುಗರ ಪಡುವ ಸಂದರ್ಭ ಬಂದೊದಗಿದೆ. ಹೀಗಾಗಿ ಶೌಚಾಲಯ ಹುಡುಕುವುದೇ ಒಂದು ಕೆಲಸವಾಗಿದೆ. ಪುರುಷರು ಹಾಗೂ ಮಹಿಳೆಯರಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ತಲೆ ನೋವು ತಂದಿದೆ.
ಕ್ರಮಕ್ಕಾಗಿ ಒತ್ತಾಯ: ರಸ್ತೆಯಲ್ಲಿಯೇ ಬಸ್ ನಿಲುಗಡೆ ಮಾಡತ್ತಿರುವುದರಿಂದ ಯಾವ ಸಮಯದಲ್ಲಿ ಏನಾಗುವುದೋ ಎಂಬ ಆತಂಕ ಕಾಡುತ್ತಿದೆ. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಸುರಕ್ಷಿತವಾಗಿ ಮನೆ ಸೇರಿದರೆ ಸಾಕು ಎನ್ನುವಂತಾಗಿದೆ. ರಸ್ತೆ ಧೂಳಿನಿಂದ ಆಸ್ತಮಾ ಬರುವ ಭಯ ಆವರಿಸಿದೆ. ಬಸ್ ನಿಲ್ದಾಣ ಒಳ ಭಾಗದಲ್ಲಿ ಮೇಲ್ಛಾವಣಿ ತುಂಡು ತುಂಡಾಗಿ ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಅನುಕೂಲ ಒದಗಿಸಬೇಕೆನ್ನುವುದು ಎಲ್ಲರ ಒತ್ತಾಯ.
ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಇನ್ನೂ ಮೂರು ದಿನ ಬೇಕು. ಇಪ್ಪತ್ತು ದಿನಗಳವರೆಗೆ ಕ್ಯೂರಿಂಗ್ ಮಾಡುವುದು ಅಗತ್ಯ. ಆದ್ದರಿಂದ ಇನ್ನೂ ಇಪ್ಪತ್ಮೂರು ದಿನ ಬಸ್‌ಗಳನ್ನು ಹೊರಗಡೆ ನಿಲ್ಲಿಸಬೇಕಾದ ಅನಿವಾರ್ಯತೆ ಇದೆ.•ವಿ.ಎಸ್. ಕಾಗವಾಡೆ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ, ರೋಣ